ADVERTISEMENT

ನಕಲಿ ಅಂಬರ್‌ಗ್ರಿಸ್‌ ಮಾರಾಟ ಯತ್ನ: ಆರೋಪಿಗಳ ಸೆರೆ

3.4 ಕೆ.ಜಿ ತೂಕದ ವಸ್ತು ವಶ: ಆರೋಪಿಗಳ ಸೆರೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 8:03 IST
Last Updated 9 ನವೆಂಬರ್ 2021, 8:03 IST
ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಗಿರೀಶ್‌ ಮಾಹಿತಿ ನೀಡಿದರು. ಡಿವೈಎಸ್ಪಿ ಓಂಪ್ರಕಾಶ್‌ ಮತ್ತಿತರರು ಇದ್ದರು
ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಗಿರೀಶ್‌ ಮಾಹಿತಿ ನೀಡಿದರು. ಡಿವೈಎಸ್ಪಿ ಓಂಪ್ರಕಾಶ್‌ ಮತ್ತಿತರರು ಇದ್ದರು   

ರಾಮನಗರ: ಅಂಬರ್‌ಗ್ರಿಸ್‌ (ತಿಮಿಂಗಲದ ವಾಂತಿ) ಎಂದು ಯಾಮಾರಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಕುದೂರು ಪೊಲೀಸರು ಬಂಧಿಸಿದ್ದಾರೆ. ಅವರಿಂದ 3.4 ಕೆ.ಜಿ ತೂಕದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕುದೂರಿನ ಡಾಬಾವೊಂದರ ಬಳಿ ಆರೋಪಿಗಳು ನಕಲಿ ಅಂಬರ್‌ಗ್ರೀಸ್ ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ಸಂದರ್ಭ ನಾಗರಭಾವಿ ನಿವಾಸಿ ಪ್ರವೀಣ್ ಕುಮಾರ್, ಬೆಂಗಳೂರು ಜ್ಞಾನಭಾರತಿ 3ನೇ ಬ್ಲಾಕ್ ನಿವಾಸಿ ಧ್ರುವಕುಮಾರ್ ಎಂಬುವರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಮಾಗಡಿ ತಾಲ್ಲೂಕಿನ ಹಾಗಲಕೋಟೆಯ ಚೇತನ್ ಪರಾರಿಯಾಗಿದ್ದಾನೆ. ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವಿವರಿಸಿದರು.

ADVERTISEMENT

ಮಾಗಡಿ ಉಪ ವಿಭಾಗದ ಡಿವೈಎಸ್ಪಿ ಓಂ ಪ್ರಕಾಶ್, ಕುದೂರು ಎಸ್‍ಐ ಎ.ಪಿ. ಕುಮಾರ್, ಎ.ಎಸ್.ಐ. ಎಲ್.ಎಸ್. ಮಂಜುನಾಥ್, ಸಿಬ್ಬಂದಿಯಾದ ಸೂರ್ಯ ಕುಮಾರ್, ನಾಗರಾಜು, ವೀರಭದ್ರಪ್ಪ ಅಂಗಡಿ, ಪುರುಷೋತ್ತಮ ಅವರು ಆರೋಪಿಗಳನ್ನು ಬಂಧಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸಿದರು.

ಕಬ್ಬಿಣ ಹಾಗೂ ಸೆಂಟ್ರಿಂಗ್ ಶೀಟ್‍ಗಳನ್ನು ಕಳ್ಳತನ ಮಾಡುತ್ತಿದ್ದ ಐವರನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ. ಅವರಿಂದ ₹ 6 ಲಕ್ಷ ಮೌಲ್ಯದ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ ಎಂದು ಗಿರೀಶ್ ಮಾಹಿತಿ ನೀಡಿದರು.

ಚನ್ನಪಟ್ಟಣ ತಾಲ್ಲೂಕಿನ ಮನು, ಕನಕಪುರ ತಾಲ್ಲೂಕಿನ ಚಿಕ್ಕಮುದವಾಡಿ ನಿವಾಸಿ ಶ್ಯಾಮ್, ಮದ್ದೂರು ತಾಲ್ಲೂಕಿನ ಕೃಷ್ಣ, ರಾಮನಗರ ಟೌನ್‍ನ ನಿವಾಸಿಗಳಾದ ರಂಗನಾಥ, ರಾಜೇಶ್ ಬಂಧಿತರು.

ಆರೋಪಿಗಳ ಪತ್ತೆಯಾಗಿ ಮಾಗಡಿ ಠಾಣಾ ಪೊಲೀಸರಿಂದ ವಿಶೇಷ ತನಿಖಾ ದಳವನ್ನು ನೇಮಕ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ್ದಂತೆ ತಿರುಮಲೇಗೌಡ ಎಂಬುವರು ಠಾಣೆಗೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.