ADVERTISEMENT

ರಾಮನಗರ | ಬಿಡಿಸಿಸಿ ಬ್ಯಾಂಕ್‌ ನಕಲಿ ಚಿನ್ನ ಸಾಲ ಹಗರಣ: ದೂರು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 2:36 IST
Last Updated 20 ಸೆಪ್ಟೆಂಬರ್ 2025, 2:36 IST
ಕುದೂರು ಪಟ್ಟಣದ ಬಿಡಿಸಿಸಿ ಬ್ಯಾಂಕ್ ಕಚೇರಿ
ಕುದೂರು ಪಟ್ಟಣದ ಬಿಡಿಸಿಸಿ ಬ್ಯಾಂಕ್ ಕಚೇರಿ   

ಕುದೂರು: ಕಳೆದ ವರ್ಷ ಪಟ್ಟಣದ ಬಿಡಿಸಿಸಿ ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಅಡವಿಟ್ಟು ಕೋಟ್ಯಂತರ ರೂಪಾಯಿ ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಬಿಡಿಸಿಸಿ ಬ್ಯಾಂಕ್‌ನ ಕೇಂದ್ರ ಕಚೇರಿ ಆಂತರಿಕ ವಿಭಾಗದ ಅಧಿಕಾರಿ ಮಲ್ಲಿಕಾರ್ಜುನ್ ಅವರು ಕುದೂರು ಠಾಣೆಗೆ ಬುಧವಾರ ದೂರು ನೀಡಿದ್ದಾರೆ.

ಕುದೂರು ಶಾಖೆ ಬಿಡಿಸಿ ಬ್ಯಾಂಕ್ ವ್ಯವಸ್ಥಾಪಕ ಹರ್ಷ, ಬ್ಯಾಂಕ್‌ನ ಚಿನ್ನ ಪರೀಕ್ಷಕ ನಾಗೇಂದ್ರ ಮತ್ತು ಅವರ ಪತ್ನಿ ನಿರ್ಮಲಾ ವಿರುದ್ಧ ದೂರು ನೀಡಲಾಗಿದೆ. ನಾಗೇಂದ್ರ ಮತ್ತು ಅವರ ಪತ್ನಿ ನಿರ್ಮಲ, ಬ್ಯಾಂಕ್‌ನ ನಿಯಮಗಳನ್ನು ಪಾಲಿಸದೆ ಅಕ್ಟೋಬರ್ 11, 2023ರಿಂದ ಜನವರಿ 15, 2025ರವರೆಗೆ ತೆರೆದಿದ್ದ 937 ಖಾತೆಗಳಲ್ಲಿ 238 ಖಾತೆಗಳಿಗೆ ನಕಲಿ ಚಿನ್ನ ಅಡಮಾನವಾಗಿಟ್ಟುಕೊಂಡು ₹4.77 ಕೋಟಿ ಸಾಲ ನೀಡಿ ಮೋಸ ಮಾಡಿದ್ದಾರೆ. ಈ ಸಾಲವನ್ನು ಬ್ಯಾಂಕ್‌ನ ಉನ್ನತ ಅಧಿಕಾರಿಗಳ ಗಮನಕ್ಕೆ ತರದೆ, ಸಂಸ್ಥೆಗೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಗರಣ ಬೆಳಕಿಗೆ ಬಂದ ವಿಧಾನ 

ADVERTISEMENT

ಬಿಡಿಸಿಸಿ ಬ್ಯಾಂಕ್ ಕುದೂರು ಶಾಖೆಯಲ್ಲಿ ಮೊದಲು ವ್ಯವಸ್ಥಾಪಕರಾಗಿದ್ದವರು ವರ್ಗಾವಣೆಯಾಗಿದ್ದರು. ಅವರು ಹೋಗುವ ಮುನ್ನ, ಶಾಖೆಯ ಹಿರಿಯ ಸಹಾಯಕಿ ರೂಪಾ ಬಿ.ಆರ್.ಅವರಿಗೆ ಪ್ರಭಾರ ಹೊಣೆ ವಹಿಸಿ ಕರ್ತವ್ಯದಿಂದ ಬಿಡುಗಡೆ ಪಡೆದಿದ್ದರು. ಆ ಸ್ಥಾನಕ್ಕೆ ಎನ್.ಶಿವಣ್ಣ ಅವರು 2024 ನವೆಂಬರ್ 4ರಂದು ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ವರದಿ ಮಾಡಿಕೊಂಡಿದ್ದರು. ಬ್ಯಾಂಕ್‌ ವಹಿವಾಟು ಪರಿಶೀಲಿಸಿದ ಅವರು, ಚಿನ್ನದ ಅಡಮಾನ ಸಾಲದ ವಹಿವಾಟಿನಲ್ಲಿ ಅಕ್ರಮ ನಡೆದಿರುವ ಬಗ್ಗೆ ಅನುಮಾನಿಸಿದ್ದರು.

2025ರ ಜನವರಿ ಅಂತ್ಯದಲ್ಲಿ ಶಾಖೆಯಲ್ಲಿ ₹1.09 ಕೋಟಿ ಮೊತ್ತ ವಸೂಲಿ ಆಗದೆ ಇರುವುದನ್ನು ಗಮನಿಸಿದ್ದರು. ಈ ಬಗ್ಗೆ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಫೆಬ್ರವರಿ 1ರಂದು ಶಿವಣ್ಣ ಪತ್ರ ಬರೆದು, ಚಿನ್ನದ ಸಾಲ ಮತ್ತು ಬಾಕಿಯನ್ನು ಪರಿಶೀಲಿಸುವಂತೆ ಕೋರಿದ್ದರು. ಇದರ ಮೂಲಕ ಬ್ಯಾಂಕ್‌ನಲ್ಲಿ ಚಿನ್ನದ ಸಾಲದ ಹೆಸರಿನಲ್ಲಿ ಅಕ್ರಮ ನಡೆದಿರುವ ಆರೋಪಕ್ಕೆ ಪುಷ್ಟಿ ಸಿಕ್ಕಿತು.

ಕೋಟ್ಯಂತರ ರೂಪಾಯಿ ಈ ಹಗರಣದ ಬಗ್ಗೆ ಮಾಜಿ ಶಾಸಕ ಎ.ಮಂಜುನಾಥ್ ಅವರು ಈ ಹಿಂದೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು. ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಂಡಲಿಕ ಎಲ್.ಸಾಧುರೆ ಸೇರಿದಂತೆ ಉನ್ನತ ಅಧಿಕಾರಿಗಳ ತಂಡ ಕುದೂರು ಶಾಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.