ADVERTISEMENT

ಕನಕಪುರ: ರೈತ ಸಂಘದಿಂದ ಬಾರುಕೋಲು ಚಳವಳಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 2:40 IST
Last Updated 28 ಫೆಬ್ರುವರಿ 2026, 2:40 IST
ಕನಕಪುರಲ್ಲಿ ಗುರುವಾರ ರೈತ ಸಂಘದಿಂದ ಬಾರುಕೋಲು ಪ್ರತಿಭಟನಾ ಮೆರವಣಿಗೆ ನಡೆಯಿತು
ಕನಕಪುರಲ್ಲಿ ಗುರುವಾರ ರೈತ ಸಂಘದಿಂದ ಬಾರುಕೋಲು ಪ್ರತಿಭಟನಾ ಮೆರವಣಿಗೆ ನಡೆಯಿತು   

ಕನಕಪುರ: ತಾಲ್ಲೂಕನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವಂತೆ ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ವಿವಿಧ ಸಂಘಟನೆಯಿಂದ ತಾಲ್ಲೂಕು ಆಡಳಿತದ ವಿರುದ್ಧ ಗುರುವಾರ ಬಾರುಕೋಲು ಚಳವಳಿ ನಡೆಸಲಾಯಿತು.

ರೈತ ಸಂಘಟನೆ ಮುಖಂಡರು ಕೋಟೆ ಗಣಪತಿ ದೇವಾಲಯದಿಂದ ತಾಲ್ಲೂಕು ಕಚೇರಿವರೆಗೆ ಬಾರುಕೋಲು ಹಿಡಿದು ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿ ಮುಂದೆ ಜಮಾವಣಿಗೊಂಡು ತಾಲ್ಲೂಕು ಆಡಳಿತದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ರೈತರು ಮತ್ತು ಸಾರ್ವಜನಿಕರ ಸಮಸ್ಯೆಗಳು ಬಗೆಹರಿದರೆ ಯಾರೂ ಕೂಡ ತಾಲ್ಲೂಕು ಕಚೇರಿಗೆ ಬರುವುದಿಲ್ಲ. ಭೂ ವ್ಯಾಜ್ಯ ಕಡಿಮೆಯಾದರೆ ತಾಲ್ಲೂಕು ಕಚೇರಿಯಲ್ಲಿ ರೈತರಿಗೇನು ಕೆಲಸ ಇರುವುದಿಲ್ಲ. ಪೊಲೀಸ್ ಠಾಣೆ ನ್ಯಾಯಾಲಯಗಳಿಗೆ ಅಲೆದಾಡುವುದು ತಪ್ಪುತ್ತದೆ. ಆ ನಿಟ್ಟಿನಲ್ಲಿ ತಾಲ್ಲೂಕು ಆಡಳಿತವು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ‘ಭ್ರಷ್ಟಾಚಾರ ವ್ಯವಸ್ಥೆಯನ್ನು ತಡೆಗಟ್ಟಬೇಕಾದ ಅಧಿಕಾರಿಗಳೇ ಭ್ರಷ್ಟರಾದರೆ ಹೇಗೆ ಸರಿಪಡಿಸುವುದು. ಅಧಿಕಾರಿಗಳು ಒಂದು ಸ್ಥಳದಲ್ಲಿ ಮೂರು ವರ್ಷಕ್ಕಿಂತ ಹೆಚ್ಚಿಗೆ ಇರಬಾರದು. ಆದರೆ ತಾಲ್ಲೂಕಿನಲ್ಲಿ ಪ್ರಾರಂಭದಿಂದ ನಿವೃತ್ತಿಯಾಗುವವರೆಗೂ ಒಂದೇ ಕಡೆ ಕೆಲಸ ಮಾಡುತ್ತಾರೆ. 3 ವರ್ಷಕ್ಕಿಂತ ಹೆಚ್ಚಿಗೆ ಇರುವ ಅಧಿಕಾರಿ, ನೌಕರರನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕು: ಎಂದು ಆಗ್ರಹಿಸಿದರು.

ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಂಚಾಲಕ ಕುಮಾರಸ್ವಾಮಿ ಮಾತನಾಡಿ, ‘ತಾಲ್ಲೂಕಿನಲ್ಲಿ ಜನಪರ ಆಡಳಿತ ನಡೆಯುತ್ತಿಲ್ಲ. ಅಧಿಕಾರಿಗಳು ಏಕಪಕ್ಷೀಯವಾಗಿ ಉಳ್ಳವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಬಡವರಿಗೆ ನ್ಯಾಯ ಸಿಗುತ್ತಿಲ್ಲ’ ಎಂದು ದೂರಿದರು.

‘ರೈತರ ಪರವಾಗಿ ಕೆಲಸ ಮಾಡಬೇಕಾದ ಅಧಿಕಾರಿಗಳು ಲಂಚ ಪಡೆದು ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ. ತಾಲ್ಲೂಕಿನಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಇದು ಸಾಕ್ಷಿಯಾಗಿದ್ದು ತಹಶೀಲ್ದಾರ್ ಅವರು ರೈತರಿಗೆ ಮತ್ತು ಸಾರ್ವಜನಿಕರ ಪರವಾಗಿ ಅಧಿಕಾರಿಗಳು, ನೌಕರರು ಕೆಲಸ ಮಾಡುವಂತೆ ಕ್ರಮ ವಹಿಸಬೇಕು’ ಎಂದು ತಿಳಿಸಿದರು.

ಕೆ.ಮಲ್ಲಯ್ಯ, ಮಂಡ್ಯ ಕಾರ್ಯದರ್ಶಿ ರವಿ, ರಮ್ಯ ರಾಮಣ್ಣ, ಚಂದ್ರಶೇಖರ್, ಕೃಷ್ಣಯ್ಯ, ತಿಮ್ಮೇಗೌಡ, ಪುಟ್ಟಸ್ವಾಮಿಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.