ADVERTISEMENT

ಚನ್ನಪಟ್ಟಣ | ವಿದ್ಯುತ್ ಕಡಿತ: ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 5:58 IST
Last Updated 29 ಜುಲೈ 2024, 5:58 IST
ಚನ್ನಪಟ್ಟಣದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ವಿದ್ಯುತ್ ಕಡಿತಗೊಂಡ ಕಾರಣ ಆಕ್ರೋಶಗೊಂಡ ರೈತರು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು
ಚನ್ನಪಟ್ಟಣದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ವಿದ್ಯುತ್ ಕಡಿತಗೊಂಡ ಕಾರಣ ಆಕ್ರೋಶಗೊಂಡ ರೈತರು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು   

ಚನ್ನಪಟ್ಟಣ: ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ವಿದ್ಯುತ್ ಕಡಿತಗೊಂಡು ರೇಷ್ಮೆಗೂಡು ಹರಾಜಿಗೆ ತೊಂದರೆಯಾದ ಕಾರಣ ಆಕ್ರೋಶಗೊಂಡ ರೈತರು ಮಾರುಕಟ್ಟೆ ಎದುರು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಶನಿವಾರ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.

ಬೆಳಿಗ್ಗೆ ಎಂದಿನಂತೆ ರೇಷ್ಮೆ ಬೆಳೆಗಾರರು ತಮ್ಮ ರೇಷ್ಮೆಬೆಳೆಯನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಆಗಮಿಸಿದ್ದರು. ಹರಾಜು ಪ್ರಕ್ರಿಯೆ ಆರಂಭವಾದ ನಂತರ ಮಾರುಕಟ್ಟೆಯಲ್ಲಿ ವಿದ್ಯುತ್ ಸಂಪರ್ಕ ಕಡಿತವಾಯಿತು. ಮಾರುಕಟ್ಟೆಯಲ್ಲಿ ಜನರೇಟರ್ ವ್ಯವಸ್ಥೆ ಇಲ್ಲದ ಕಾರಣ ಹರಾಜು ಹಾಗೂ ರೇಷ್ಮೆಗೂಡು ತೂಕ ಪ್ರಕ್ರಿಯೆ ಸ್ಥಗಿತವಾಯಿತು. ಒಂದು ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಸಂಪರ್ಕ ಬಾರದೆ ಹೋದಾಗ ಕೆರಳಿದ ರೈತರು, ಮಾರುಕಟ್ಟೆಯಿಂದ ಹೊರಬಂದು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕುಳಿತು ಪ್ರತಿಭಟಿಸಿದರು.

ರೈತರು ದಿಢೀರ್ ಪ್ರತಿಭಟನೆ ನಡೆಸಿದ ಕಾರಣ ಹೆದ್ದಾರಿಯ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಪ್ರತಿಭಟನಾನಿರತ ರೈತರನ್ನು ಮನವೊಲಿಸಲು ಯತ್ನಿಸಿದರು. ಈ ಮಧ್ಯೆ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.

ADVERTISEMENT

ನಂತರ ಸ್ಥಳಕ್ಕೆ ರೇಷ್ಮೆ ಮಾರುಕಟ್ಟೆ ಉಪನಿರ್ದೇಶಕ ಕುಮಾರ ಸುಬ್ರಹ್ಮಣ್ಯ ಆಗಮಿಸಿದರು. ರೈತರನ್ನು ಸಮಾಧಾನ ಮಾಡಿ, ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಮತ್ತೆ ಹರಾಜು ಪ್ರಕ್ರಿಯೆ ಆರಂಭವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.