ADVERTISEMENT

24ಕ್ಕೆ ರೈತರ ನಡೆ ವಿಧಾನಸೌಧದ ಕಡೆ

ಕೃಷಿ ಕಾಯ್ದೆ ವಾಪಸ್‌ ಪಡೆಯಲು ಅನ್ನದಾತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 5:30 IST
Last Updated 22 ಫೆಬ್ರುವರಿ 2021, 5:30 IST
ಮಾಗಡಿಯಲ್ಲಿ ರೈತರ ನಡೆ ವಿಧಾನಸೌಧದ ಕಡೆಗೆ ಆಹ್ವಾನ ಪತ್ರಿಕೆಯನ್ನು ರೈತ ಹಿತರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಅಳಲಕುಪ್ಪೆ ಗುಡ್ಡೇಗೌಡ ಬಿಡುಗಡೆಗೊಳಿಸಿದರು
ಮಾಗಡಿಯಲ್ಲಿ ರೈತರ ನಡೆ ವಿಧಾನಸೌಧದ ಕಡೆಗೆ ಆಹ್ವಾನ ಪತ್ರಿಕೆಯನ್ನು ರೈತ ಹಿತರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಅಳಲಕುಪ್ಪೆ ಗುಡ್ಡೇಗೌಡ ಬಿಡುಗಡೆಗೊಳಿಸಿದರು   

ಮಾಗಡಿ: ರೈತರ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಫೆ. 24ರಂದು ಬೆಳಿಗ್ಗೆ 9ಗಂಟೆಗೆ ವೇದಿಕೆಯ ನಾಮಫಲಕ ಅನಾವರಣ ಮಾಡಿದ ನಂತರ ರೈತರ ನಡಿಗೆ ವಿಧಾನಸೌಧದ ಕಡೆಗೆ ಎಂಬ ಧ್ಯೇಯದೊಂದಿಗೆ ವಿಧಾನಸೌಧ ಚಲೋ ನಡೆಸಲಾಗುವುದು ಎಂದು ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಅಳಲಕುಪ್ಪೆ ಗುಡ್ಡೇಗೌಡ ತಿಳಿಸಿದರು.

ಸೋಮೇಶ್ವರಸ್ವಾಮಿ ದೇಗುಲದ ಆವರಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿವರ್ಷ ಡಿ. 24ರಂದು ವಿಧಾನಸೌಧದಲ್ಲಿ ಸರ್ಕಾರದಿಂದ ರೈತರ ದಿನ ಆಚರಿಸಬೇಕು. ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು. ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸದೆ ಹಕ್ಕುಪತ್ರ ನೀಡಬೇಕು. ಖಾತೆ, ಪೋಡಿ ಸೇರಿದಂತೆ ರೈತರ ಇತರೇ ಕೆಲಸಗಳನ್ನು ಉಚಿತವಾಗಿ ಮಾಡಿಕೊಡಬೇಕು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರೈತ ಭವನ ನಿರ್ಮಿಸಬೇಕು. ಮಾಧ್ಯಮದವರು ಮತ್ತು ನ್ಯಾಯಾಂಗ ವ್ಯವಸ್ಥೆಯು ರೈತರ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ರೈತರ ಹಿತರಕ್ಷಣಾ ವೇದಿಕೆಯ ತಾಲ್ಲೂಕು ಶಾಖೆ ಅಧ್ಯಕ್ಷ ಜುಟ್ಟನಹಳ್ಳಿ ದಿನೇಶ್ ಮಾತನಾಡಿ, ರೇಷ್ಮೆ ಬೆಳೆಗಾರರನ್ನು ಉಳಿಸುವ ಸಲುವಾಗಿ ಗೂಡಿನ ದರವನ್ನು ಹೆಚ್ಚಿಸಬೇಕು. ರಾಜ್ಯದ ವಿವಿಧೆಡೆ ಶಾಶ್ವತ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ರೈತರನ್ನು ಕಡೆಗಣಿಸಿದರೆ ರಾಜಕೀಯ ಪಕ್ಷಗಳನ್ನು ರೈತರು ಕಡೆಗಣಿಸುತ್ತಾರೆ ಎಂದು ಎಚ್ಚರಿಸಿದರು.

ADVERTISEMENT

ಪ್ರಗತಿಪರ ಹೋರಾಟಗಾರ ಕಲ್ಕೆರೆ ಶಿವಣ್ಣ ಮಾತನಾಡಿ, ತಹಶೀಲ್ದಾರ್ ಕಚೇರಿಗಳಲ್ಲಿ ರೈತರನ್ನು ಅಲೆದಾಡಿಸಿ, ಅವ್ಯವಹಾರ ನಡೆಸುವುದನ್ನು ತಡೆಯಲು ಸರ್ಕಾರ ಮುಂದಾಗಬೇಕು. ರೈತರನ್ನು ಮೂಲೆಗುಂಪು ಮಾಡಿದ ಸರ್ಕಾರಗಳು ಮಣ್ಣು ತಿನ್ನಬೇಕಾಗುತ್ತದೆ. ಪ್ರಗತಿಪರ ಹೋರಾಟಗಾರರು ವಿಧಾನಸೌಧ ಚಲೋಕ್ಕೆ ಬೆಂಬಲ ಸೂಚಿಸಿ ಭಾಗವಹಿಸುತ್ತಿದ್ದೇವೆ ಎಂದರು.

ಸಂಸ್ಕೃತಿ ಚಿಂತಕ ಸಿ. ಜಯರಾಮು ಮಾತನಾಡಿ, ರೈತರ ನಡೆ ವಿಧಾನಸೌಧದ ಕಡೆಗೆ ನಾವೆಲ್ಲರೂ ಬೆಂಬಲಿಸೋಣ. ತಾಲ್ಲೂಕಿನಲ್ಲಿ ತಿಪ್ಪಗೊಂಡನಹಳ್ಳಿ, ಮಂಚನಬೆಲೆ, ಎತ್ತಿನಮನೆ ಗುಲಗಂಜಿ ಗುಡ್ಡದ ಜಲಾಶಯಗಳಿದ್ದರೂ ರೈತರ ಭೂಮಿಗೆ ಹನಿ ನೀರು ಹರಿದಿಲ್ಲ ಎಂದು ದೂರಿದರು.

ರೈತರ ಕೆಲಸ ಕಾರ್ಯಗಳು ಆಗುತ್ತಿಲ್ಲ. ಎತ್ತಿನಹೊಳೆ ಜಲಾಶಯದ ಕಾಮಗಾರಿಯನ್ನು ತ್ವರಿತಗೊಳಿಸಿ, ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಬೇಕಿದೆ. ಅನ್ನದಾತರ ಋಣದಲ್ಲಿ ಬದುಕುತ್ತಿರುವ ಎಲ್ಲರೂ ರೈತರನ್ನು ಬೆಂಬಲಿಸಬೇಕಿದೆ ಎಂದರು.

ವೇದಿಕೆಯ ಮುಖಂಡರಾದ ಪೂಜಾರಿ ಮಾರಪ್ಪ, ಅಕ್ರಂಖಾನ್, ಜಾಕೀರ್ ಹುಸೇನ್, ಸಿದ್ದಪ್ಪಾಜಿ, ತ್ಯಾಗದೆರೆಪಾಳ್ಯದ ರಂಗಸ್ವಾಮಯ್ಯ, ರಾಜ್ಯ ವೇದಿಕೆಯ ಕಾರ್ಯದರ್ಶಿ ರಾಜಕುಮಾರ್, ಶಂಕರ್ ಲಿಂಗೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.