ರಾಮನಗರ: ಮಳೆಗಾಲ ಶುರುವಾಗಿ ಒಂದೂವರೆ ತಿಂಗಳಾಗುತ್ತಾ ಬಂದಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮುಂಗಾರು ಹಂಗಾಮಿನ ಬೆಳೆಗಳ ಬಿತ್ತನೆಯನ್ನು ರೈತರು ಈಗಾಗಲೇ ಶುರು ಮಾಡಿದ್ದಾರೆ. ಮುಂಗಾರು ಆರಂಭದಲ್ಲೇ ಮಳೆ ಕೊರತೆ ಎದುರಿಸಿದ್ದ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆಗಾಲದ ವಾತಾವರಣ ಸ್ವಲ್ಪಮಟ್ಟಿಗೆ ಮನೆ ಮಾಡಿದೆ.
ಜಿಲ್ಲೆಯಲ್ಲಿ ಆಗಾಗ ಸುರಿಯುತ್ತಿರುವ ಧಾರಾಕಾರ, ಸಾಧಾರಣ ಹಾಗೂ ಜಡಿಮಳೆಯು ಬಿತ್ತನೆ ಚಟುವಟಿಕೆಗೆ ಮತ್ತಷ್ಟು ಹುರುಪು ನೀಡಿದೆ. ಇದರ ಜೊತೆಗೆ ವಿವಿಧ ರಸಗೊಬ್ಬರಗಳಿಗೂ ರೈತರಿಂದ ಬೇಡಿಕೆ ಹೆಚ್ಚಾಗಿದೆ. ಆದರೆ, ಜಿಲ್ಲೆಗೆ ಬೇಡಿಕೆ ಇರುವಷ್ಟು ರಸಗೊಬ್ಬರವು ಸರಬರಾಜು ಆಗಿಲ್ಲ. ಕೆಲ ಗೊಬ್ಬರಗಳ ಕೊರತೆ ಎದುರಾಗಿದೆ.
ಜಿಲ್ಲೆಯಲ್ಲಿ 81,493 ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಇದುವರೆಗೆ 1,744 ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ. ರಾಗಿ, ಭತ್ತ, ಮುಸುಕಿನ ಜೋಳ, ಜೋಳ, ತೊಗರಿ, ಹುರಳಿ, ಅಲಸಂದೆ, ಅವರೆ ಸೇರಿದಂತೆ 15 ಬೆಳೆಗಳನ್ನು ಜಿಲ್ಲೆಯ ರೈತರು ಬೆಳೆಯುತ್ತಾರೆ. ಅದಕ್ಕಾಗಿ ಯೂರಿಯಾ, ಕಾಂಪ್ಲೆಕ್ಸ್, ಡಿಎಪಿ, ಎಸ್‌ಎಸ್‌ಪಿ ಹಾಗೂ ಎಂಒಪಿ ರಸಗೊಬ್ಬರಗಳನ್ನು ವಿತರಿಸಲಾಗುತ್ತಿದೆ.
15,169.5 ಮೆ. ಟನ್ ಪೂರೈಕೆ: ‘ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ 23,797 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಇದ್ದು, ಸದ್ಯ 15,169.5 ಮೆಟ್ರಿಕ್ ಟನ್ ಸರಬರಾಜು ಆಗಿದೆ. ಇದುವರೆಗೆ 9,682.8 ಮೆಟ್ರಿಕ್ ಟನ್ ವಿತರಣೆಯಾಗಿದ್ದು 5,486.67 ಮೆಟ್ರಿಕ್ ಟನ್ ದಾಸ್ತಾನು ಉಳಿದಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎನ್. ಅಂಬಿಕಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ವಿವಿದ್ದೋದ್ದೇಶ ಸಹಕಾರ ಸಂಘ ಸೇರಿದಂತೆ 212 ಡೀಲರ್‌ಗಳ ಮೂಲಕ ರಸಗೊಬ್ಬರಗಳನ್ನು ವಿತರಿಸಲಾಗುತ್ತಿದೆ. ಇದರಲ್ಲಿ 14 ಹೋಲ್‌ಸೇಲ್ ಡೀಲರ್‌ಗಳಿದ್ದಾರೆ. ಸದ್ಯ ಹೆಚ್ಚು ಬೇಡಿಕೆ ಇರುವ ಡಿಎಪಿ ಗೊಬ್ಬರಕ್ಕೆ ರಾಜ್ಯಮಟ್ಟದಲ್ಲೇ ಕೊರತೆ ಇದೆ. ಹಾಗಾಗಿ, ಪರ್ಯಾಯ ಗೊಬ್ಬರ ಬಳಕೆ ಕುರಿತು ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.
ಕುಸಿದ ಬೇಡಿಕೆ: ಕಳೆದ ವರ್ಷಕ್ಕೆ ಹೋಲಿಸಿದರೆ, ಜಿಲ್ಲೆಯಲ್ಲಿ ಈ ವರ್ಷ ರಸಗೊಬ್ಬರದ ಬೇಡಿಕೆ ಕುಸಿತ ಕಂಡಿದೆ. ಕಳೆದ ವರ್ಷ 28,047 ಮೆಟ್ರಿಕ್ ಟನ್ ಇದ್ದ ಬೇಡಿಕೆಯು, ಈ ವರ್ಷ 23,797 ಮೆಟ್ರಿಕ್ ಟನ್‌ಗೆ ಕುಸಿದಿದೆ. ಒಂದು ವರ್ಷದ ಅಂತರದಲ್ಲಿ ಬೇಡಿಕೆಯು 4,250 ಮೆ.ಟನ್ ಇಳಿಕೆ ಕಂಡಿದೆ.
ರಸಗೊಬ್ಬರದ ಕೊರತೆ ಎದುರಾದರೂ ರೈತರು ಬೀದಿಗಳಿದು ಆಕ್ರೋಶ ಹೊರಹಾಕುವ ಮಟ್ಟಕ್ಕೆ ಜಿಲ್ಲೆಯ ಪರಿಸ್ಥಿತಿ ತಲುಪಿಲ್ಲ. ಹಲವೆಡೆ ಈಗಷ್ಟೇ ಬಿತ್ತನೆ ಚಟುವಟಿಕೆ ಶುರುವಾಗಿರುವುದರಿಂದ ಗೊಬ್ಬರಕ್ಕಾಗಿ ರೈತರು ಮುಗಿಬೀಳುವಂತಹ ಸ್ಥಿತಿಯೂ ಜಿಲ್ಲೆಯಲ್ಲಿಲ್ಲ. ಮುಂದೆ ಬಿತ್ತನೆ ಚುರುಕುಗೊಂಡಂತೆ, ಬೇಡಿಕೆ ಯಾವ ಮಟ್ಟಕ್ಕೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.
ರಾಗಿ ಸೇರಿದಂತೆ ಇತರ ಮಿಶ್ರ ಬೆಳೆಗೆ ಅಗತ್ಯವಿದ್ದ ರಸಗೊಬ್ಬರವನ್ನು ಸ್ಥಳೀಯ ವಿಎಸ್ಎಸ್‌ಎನ್‌ನಲ್ಲಿ ಖರೀದಿಸಿದ್ದೇವೆ. ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ 20:20:0:13 ಗೊಬ್ಬರ ಬಳಸುತ್ತಿದ್ದೇವೆಆದೀಶ್ ರೈತ ಪಾಲಬೋವಿದೊಡ್ಡಿ ರಾಮನಗರ ತಾಲ್ಲೂಕು
ನಮ್ಮ ತಾಲ್ಲೂಕಿನಲ್ಲಿ ಸದ್ಯಕ್ಕೆ ರಸಗೊಬ್ಬರದ ಕೊರತೆ ಇಲ್ಲ. ಇತ್ತೀಚೆಗೆ ಮಳೆ ಶುರುವಾಗಿರುವುದರಿಂದ ಈಗಷ್ಟೇ ಕೃಷಿ ಚಟುವಟಿಕೆಗಳು ಶುರುವಾಗಿದ್ದು ರೈತರು ಈಗಷ್ಟೇ ರಸಗೊಬ್ಬರ ಖರೀದಿ ಶುರು ಮಾಡಿದ್ದಾರೆ. ಅಗತ್ಯಕ್ಕೆ ತಕ್ಕಂತೆ ಸಿಗುತ್ತಿದೆಕೆ.ಎನ್. ರಾಜು ರೈತ ಚನ್ನಪಟ್ಟಣ ತಾಲ್ಲೂಕು
ಪರ್ಯಾಯ ಗೊಬ್ಬರ ಬಳಕೆಗೆ ಪ್ರಚಾರ:
‘ಜಿಲ್ಲೆಯಲ್ಲಿ ಡಿಎಪಿ ಮತ್ತು ಯೂರಿಯಾ ರಸಗೊಬ್ಬರಗಳ ಕೊರತೆ ಇರುವುದರಿಂದ ಅವುಗಳಿಗೆ ಪರ್ಯಾಯ ಗೊಬ್ಬರಗಳ ಬಳಕೆ ಮಾಡುವಂತೆ ಇಲಾಖೆಯಿಂದ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ಜುಲೈ 16ರಂದು ಇಲಾಖೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಅವರು ಪರ್ಯಾಯ ಗೊಬ್ಬರಗಳ ಬಳಕೆ ಕುರಿತ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಸದ್ಯ ಅದನ್ನು ಗ್ರಾಮೀಣ ಭಾಗದಲ್ಲೂ ಅಂಟಿಸಿ ಪ್ರಚಾರ ಮಾಡಲಾಗುತ್ತಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಅಂಬಿಕಾ ತಿಳಿಸಿದರು. ‘ಡಿಎಪಿಗೆ ಪರ್ಯಾಯವಾಗಿ ರಂಜಕ ಒದಗಿಸುವ 20;20;0;13 ಹಾಗೂ ಪೊಟ್ಯಾಶ್ ಒದಗಿಸುವ ಇತರ ಸಂಯುಕ್ತ ಗೊಬ್ಬರಗಳಾದ 15;15;15 10;26;26 12;32;16 22;22;11 14;35;14 17;17;17 14;28;14 19;19;19 20;10;10 ಸೇರಿದಂತೆ ಇತರ ಕಾಂಪ್ಲೆಕ್ಸ್ ಗೊಬ್ಬರಗಳನ್ನು ಬಳಸುವಂತೆ ರೈತರಿಗೆ ತಿಳಿ ಹೇಳಲಾಗುತ್ತಿದೆ. ಈ ಕುರಿತು ಗ್ರಾಮಮಟ್ಟದಲ್ಲಿ ಪೋಸ್ಟರ್‌ಗಳನ್ನು ಅಂಟಿಸಿ ಜಾಗೃತಿ ಅರಿವು ಮೂಡಿಸಲಾಗುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.