ADVERTISEMENT

ರಥೋತ್ಸವದಲ್ಲಿ ಮಿಂದೆದ್ದ ಜನ

ಗಮನ ಸೆಳೆದ ಲಕ್ಷ್ಮಿ ವೆಂಕಟೇಶ್ವರ ವಿಶ್ವರೂಪ, ಆಂಜನೇಯ ಮೂರ್ತಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2023, 6:06 IST
Last Updated 1 ಜುಲೈ 2023, 6:06 IST
ಚನ್ನಪಟ್ಟಣ ತಾಲ್ಲೂಕಿನ ದೇವರ ಹೊಸಹಳ್ಳಿ ಗ್ರಾಮದ ಲಕ್ಷ್ಮಿ ವೆಂಕಟೇಶ್ವರ ರಥೋತ್ಸವ ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಯಿತು
ಚನ್ನಪಟ್ಟಣ ತಾಲ್ಲೂಕಿನ ದೇವರ ಹೊಸಹಳ್ಳಿ ಗ್ರಾಮದ ಲಕ್ಷ್ಮಿ ವೆಂಕಟೇಶ್ವರ ರಥೋತ್ಸವ ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಯಿತು   

ಚನ್ನಪಟ್ಟಣ: ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ದೇವರ ಹೊಸಹಳ್ಳಿಯ ಲಕ್ಷ್ಮಿ ವೆಂಕಟೇಶ್ವರ ರಥೋತ್ಸವ, ಸಂಜೀವರಾಯ ತೋಮಾಲ ಸೇವೆ ಹಾಗೂ ವೈಕುಂಠ ಸೇವಾ ದರ್ಶನವು ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರವೇರಿದವು.

ಮಧ್ಯಾಹ್ನ 12.30 ರಿಂದ 1.10 ಗಂಟೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ರಥೋತ್ಸವಕ್ಕೆ ತಹಶೀಲ್ದಾರ್ ಮಹೇಂದ್ರ ಚಾಲನೆ ನೀಡಿದರು. ನಂತರ ಭಕ್ತರು ರಥವನ್ನು ಭಕ್ತಿಭಾವದಿಂದ ಎಳೆದರು. 

ಇದಕ್ಕೂ ಮುನ್ನ ಸಂಜೀವರಾಯ ಶಿಲ್ಪಕಲಾ ಸುವರ್ಣ ಮಂಟಪದ ಮಧ್ಯೆ ವೈಕುಂಠ ಸೇವಾದರ್ಶನ, ತೋಮಾಲ ಸೇವೆ, ಮಹಾ ಮಂಗಳಾರತಿ, ವಿಮಾನ ಗೋಪುರಕ್ಕೆ ವಿದ್ಯುತ್ ಲಕ್ಷ ದೀಪೋತ್ಸವ, ಪುಷ್ಪಾಲಂಕಾರಗಳು, ವಿಶ್ವರೂಪ ದರ್ಶನ ಸೇವೆ, ಅನ್ನರಾಶಿ ಪೂಜೆ, ಮಜ್ಜಿಗೆ, ಪಾನಕ ವಿತರಣೆ, ತಿರುಪ್ಪಾವಡೆ ಸೇವೆ, ಗೋವು, ಅಶ್ವ, ಗಜಪೂಜೆಗಳು ನೆರವೇರಿದವು.

ADVERTISEMENT

ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಡೋಲೋತ್ಸವ ಮತ್ತು ಮಂದಹಾಸ ದೀಪೋತ್ಸವ, ತೆಪ್ಪೋತ್ಸವ ಮತ್ತು ವರ್ಣರಂಜಿತ ಬಾಣ ಬಿರುಸುಗಳ ಪ್ರದರ್ಶನ, ವಿದ್ಯುತ್ ದೀಪದೊಂದಿಗೆ ಚಂದ್ರಮಂಡಲ ಪಲ್ಲಕ್ಕಿ ಉತ್ಸವ, ಶಾಸ್ತ್ರೀಯ ಸಂಗೀತ ಕಛೇರಿ ಏರ್ಪಡಿಸಲಾಗಿತ್ತು. ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಆಂಜನೇಯ ಮೂರ್ತಿ ಹಾಗೂ ವಿಶ್ವರೂಪ ದರ್ಶನ ಸೇವೆ ಮೂರ್ತಿಗಳು ಭಕ್ತರ ಗಮನ ಸೆಳೆದವು.

ರಥೋತ್ಸವದಲ್ಲಿ ಭಾಗವಹಿಸಲು ಹಾಗೂ ಸಂಜೀವರಾಯ ದರ್ಶನ ಪಡೆಯಲು ಬೆಳಿಗ್ಗೆಯಿಂದಲೇ ನೂರಾರು ಭಕ್ತರು ಸಾಲುಗಟ್ಟಿ ನಿಂತಿದ್ದ ದೃಶ್ಯಾವಳಿಗಳು ಕಂಡುಬಂತು. ರಥೋತ್ಸವದ ವೇಳೆ ಲಕ್ಷ್ಮಿ ವೆಂಕಟೇಶ್ವರಸ್ವಾಮಿಗೆ ಜೈಕಾರ ಹಾಕಿದ ಭಕ್ತರು, ರಥಕ್ಕೆ ಹಣ್ಣು-ಧವನ ಎಸೆದು ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.

ರಥೋತ್ಸವದ ಅಂಗವಾಗಿ ಬುಧವಾರದಿಂದಲೇ ದೇವತಾ ಕಾರ್ಯಗಳು ಆರಂಭಗೊಂಡಿದ್ದವು.

ರಥೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಲಕ್ಷ್ಮಿ ವೆಂಕಟೇಶ್ವರ ವಿಶ್ವರೂಪ ದರ್ಶನ ಸೇವೆ
ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಆಂಜನೇಯ ಮೂರ್ತಿ

Cut-off box - ನವ ದಂಪತಿಗಳ ಆಗಮನವೇ ವಿಶೇಷ ನಾಡಿನ ಮೂಲೆ ಮೂಲೆಗಳಿಂದ ನವದಾಂಪತ್ಯಕ್ಕೆ ಕಾಲಿಟ್ಟ ಜೋಡಿಗಳು ಜಾತ್ರಿಗೆ ಬರುವುದು ವಿಶೇಷ.  ಆಷಾಢದಲ್ಲಿ ಒಂದು ತಿಂಗಳು ದೂರವಾಗುವ ನವ ದಂಪತಿಗಳಲ್ಲಿ ಏಕಾದಶಿಗೆ (ಉಪವಾಸದ ಹಬ್ಬ) ಅತ್ತೆ ಮನೆಗೆ ಬರುವ ಅಳಿಯ ತನ್ನ ಪತ್ನಿ ಜೊತೆ ಈ ಜಾತ್ರೆಗೆ ಬರುವುದು ಇಲ್ಲಿಯ ವಿಶೇಷ. ಹೀಗಾಗಿ ಜಾತ್ರೆ ಮಹೋತ್ಸವಕ್ಕೆ ನವ ಜೀವನಕ್ಕೆ ಕಾಲಿಟ್ಟ ಜೋಡಿಗಳು ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದ ನಾಡಿನ ವಿವಿಧ ಭಾಗಗಳಿಂದ ಆಗಮಿಸಿ ದೇವರ ದರ್ಶನ ಪಡೆದರು. ಸ್ಥಳೀಯ ಜನಪ್ರತಿನಿಧಿಗಳು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.