ADVERTISEMENT

‘ಆರ್ಥಿಕ ಭದ್ರತೆ ನೀಡುವ ಹೈನುಗಾರಿಕೆ’

ಮಲ್ಲಪ್ಪನ ಹೊಸಳ್ಳಿ ಗ್ರಾಮದಲ್ಲಿ ಹಾಲಿನ ಡೇರಿ ನೂತನ ಕಟ್ಟಡದ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 15:58 IST
Last Updated 23 ಜೂನ್ 2019, 15:58 IST
ಕನಕಪುರ ತಾಲ್ಲೂಕಿನ ಮಲ್ಲಪ್ಪನ ಹೊಸಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿದ್ದ ಹಾಲಿನ ಡೇರಿ ಕಟ್ಟಡವನ್ನು ಡಿ.ಕೆ.ಸುರೇಶ್‌ ಉದ್ಘಾಟಿಸಿದರು
ಕನಕಪುರ ತಾಲ್ಲೂಕಿನ ಮಲ್ಲಪ್ಪನ ಹೊಸಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿದ್ದ ಹಾಲಿನ ಡೇರಿ ಕಟ್ಟಡವನ್ನು ಡಿ.ಕೆ.ಸುರೇಶ್‌ ಉದ್ಘಾಟಿಸಿದರು   

ಕಸಬಾ (ಕನಕಪುರ): ಹೈನುಗಾರಿಕೆಯು ಒಂದು ಉದ್ಯಮವಾಗಿ ಬೆಳೆಯುತ್ತಿದ್ದು ರೈತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತಿದೆ. ಪ್ರತಿಯೊಬ್ಬ ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಆಗಬೇಕೆಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು.

ಕಸಬಾ ಹೋಬಳಿ ಮಲ್ಲಪ್ಪನ ಹೊಸಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿದ ಹಾಲಿನ ಡೇರಿ ಕಟ್ಟಡದ ಉದ್ಘಾಟನೆಯನ್ನು ಭಾನುವಾರ ನೆರವೇರಿಸಿ ಮಾತನಾಡಿದರು.

‘ಹೈನು ಉದ್ಯಮವನ್ನು ಉತ್ತೇಜಿಸಲು ಸರ್ಕಾರ ಪ್ರೋತ್ಸಾಹಧನ ನೀಡುತ್ತಿದೆ. ಹೈನುಗಾರಿಕೆಯನ್ನು ತಾಲ್ಲೂಕಿನಲ್ಲಿ ಉತ್ತೇಜಿಸಲು ಮೆಗಾ ಡೇರಿಯನ್ನು ನಮ್ಮ ತಾಲ್ಲೂಕಿನಲ್ಲೇ ಮಾಡಿರುವುದರಿಂದ ಈ ಭಾಗದ ರೈತರಿಗೆ ಹಾಲಿನ ಧಾರಣೆ ಹೆಚ್ಚಾಗಿ ಸಿಗಲಿದ್ದು ಹೆಚ್ಚಿನ ಅನುಕೂಲವಾಗಲಿದೆ’ ಎಂದರು.

ADVERTISEMENT

ಮಲ್ಲಪ್ಪನ ಹೊಸಳ್ಳಿ ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ಡೇರಿ ಪ್ರಾರಂಭವಾಗಿದ್ದರೂ ಸ್ವಂತ ಕಟ್ಟಡ ನಿರ್ಮಾಣವಾಗಿರಲಿಲ್ಲ. ಡೇರಿ ಅಧ್ಯಕ್ಷ ತಮ್ಮಣ್ಣಗೌಡರು ವಿಧಾನ ಪರಿಷತ್‌ ಸದಸ್ಯರಿಂದ ₹5 ಲಕ್ಷ ಅನುದಾನ, ಬಮೂಲ್‌ನಿಂದ ₹3 ಲಕ್ಷ ಅನುದಾನ ಪಡೆದು, ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವಲ್ಪ ಹಣ ಹಾಗೂ ಡೇರಿಯಲ್ಲಿ ಉಳಿತಾಯವಾಗಿದ್ದ ಹಣವನ್ನು ಬಳಸಿ ಸುಸಜ್ಜಿತ ನೂತನ ಕಟ್ಟಡವನ್ನು ನಿರ್ಮಾಣ ಮಾಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘವನ್ನು ಎಲ್ಲರ ಸಹಕಾರದಿಂದ ನಡೆಸಬೇಕಿದ್ದು, ಡೇರಿಯನ್ನು ಉತ್ತಮವಾಗಿ ನಡೆಸಿ ಹೆಚ್ಚಿನ ಉಳಿತಾಯವನ್ನು ಮಾಡುವ ಮೂಲಕ ಅಭಿವೃದ್ಧಿ ಪಡಿಸಬೇಕು. ಹೈನುಗಾರಿಕೆ ಮಾಡುವ ರೈತರಿಗೆ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಕೊಡಿಸಿ ಹೈನುಗಾರಿಕೆಯನ್ನು ಉತ್ತೇಜಿಸಬೇಕೆಂದು ಸಲಹೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ್‌, ನಗರಸಭೆ ಸದಸ್ಯ ಕೆ.ಎನ್‌.ದಿಲೀಪ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ಭಾಗ್ಯ ಶಾಂತಕುಮಾರ್‌, ಹಾಲಿನ ಡೇರಿ ಅಧ್ಯಕ್ಷ ತಮ್ಮಣ್ಣಗೌಡ, ಕಾರ್ಯದರ್ಶಿ ಕಾಂತರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಚಂದ್ರೇಗೌಡ, ಲಕ್ಷ್ಮಮ್ಮ, ಮುಖಂಡರಾದ ರಾಮಸ್ವಾಮಿ, ಶಿವಲಿಂಗೇಗೌಡ, ಕೆ.ತಮ್ಮಣ್ಣಗೌಡ, ಪುಟ್ಟೇಗೌಡ, ಹನುಮನಾಯ್ಕ್‌, ಕೃಷ್ಣೇಗೌಡ, ಯುವ ಕಾಂಗ್ರೆಸ್‌ ತಾಲ್ಲೂಕು ಉಪಾಧ್ಯಕ್ಷ ನಾಗೇಶ್‌, ಪ್ರಧಾನ ಕಾರ್ಯದರ್ಶಿ ಹಿಮಗಿರಿ, ಗ್ರಾಮಸ್ಥರು, ಡೇರಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.