
ಕನಕಪುರ: ಬಡವರಿಗೆ ನಿವೇಶನ ನೀಡಲು ಆಶ್ರಯ ಯೋಜನೆಯಡಿ ಸರ್ಕಾರ ಖರೀದಿ ಮಾಡಿದ್ದ ಜಮೀನಿಗೆ ಅಕ್ರಮವಾಗಿ ಪೌತಿ ಖಾತೆ ಮಾಡಿಕೊಟ್ಟಿರುವ ಆರೋಪದ ಮೇಲೆ ಇಬ್ಬರು ಕಂದಾಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಲಂಚ ಪಡೆದ ಪ್ರಕರಣದಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದು ಅಮಾನತುಗೊಂಡಿರುವ ಆರ್‌ಐ ತಂಗರಾಜು, ವಿ.ಎ ಚಂದ್ರೇಗೌಡ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಕಸಬಾ ಹೋಬಳಿ ಶಿವನಹಳ್ಳಿ ಗ್ರಾಮದ ಸರ್ವೆ ನಂಬರ್ 383/2 ರಲ್ಲಿ 2.37 ಎಕರೆ ಜಮೀನನ್ನು 10-8-1992ರಲ್ಲಿ ಗೂಳಯ್ಯ ಕಾಳ ಮಾದಯ್ಯ ಅವರಿಂದ ₹95 ಸಾವಿರಕ್ಕೆ ಖರೀದಿ ಮಾಡಿ ತಹಶೀಲ್ದಾರ್ ಹೆಸರಿನಲ್ಲಿ ಕ್ರಯದ ನೋಂದಣಿ ಮಾಡಲಾಗಿತ್ತು.
ಇದೇ ಜಾಗದಲ್ಲಿ 26-2-1997ರಲ್ಲಿ ತಾಲ್ಲೂಕು ಆಡಳಿತ ಮತ್ತು ಪುರಸಭೆ ಅಧಿಕಾರಿಗಳು ಆಶ್ರಯ ಯೋಜನೆಯಡಿ ನಿವೇಶನಗಳನ್ನು ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಿದ್ದರು.
ಆದರೆ, ತಹಶೀಲ್ದಾರ್ ಹೆಸರಿಗೆ ಖರೀದಿ ಮಾಡಿ ಕ್ರಯ ಪತ್ರ ಮಾಡಿದ್ದ ಜಮೀನಿನ ಖಾತೆ ಬದಲಾವಣೆ ಆಗದೆ ಮೂಲ ಖಾತೆದಾರರ ಹೆಸರಿನಲ್ಲಿ ಉಳಿದಿತ್ತು.
ಈ ಮಾಹಿತಿಯನ್ನು ತಿಳಿದ ಮೂಲ ಜಮೀನಿನ ಮಾಲೀಕರ ಕುಟುಂಬದವರು ಆರ್‌ಐ ತಂಗರಾಜು ಮತ್ತು ವಿ.ಎ ಚಂದ್ರೇಗೌಡ ಅವರ ಮೂಲಕ ಪೌತಿ ಖಾತೆ ಮಾಡಿಸಿಕೊಂಡಿದ್ದಾರೆ.
ಆಶ್ರಯ ಯೋಜನೆಗಾಗಿ ಸರ್ಕಾರಕ್ಕೆ ಖರೀದಿಯಾಗಿ ನಿರಾಶ್ರಿತ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಿರುವ ಮಾಹಿತಿ ಗೊತ್ತಿದ್ದರೂ ಅದನ್ನು ಮುಚ್ಚಿಟ್ಟು ಲಂಚ ಪಡೆದು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅದೇ ಜಮೀನಿಗೆ 31-01-2023ರಲ್ಲಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಜಗದೀಶ್ ಎಂಬುವರು ಲೋಕಾಯುಕ್ತರಿಗೆ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.