ADVERTISEMENT

ಬಾಳೆತೋಟಕ್ಕೆ ಬೆಂಕಿ: ಬೆಳೆ ನಾಶ

ರೈತನಿಗೆ ಆರೇಳು ಲಕ್ಷ ನಷ್ಟ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 13:27 IST
Last Updated 2 ಜನವರಿ 2019, 13:27 IST
ಹೊಸಕೋಟೆಯಲ್ಲಿ ಆಕಸ್ಮಿಕ ಬೆಂಕಿಯಿಂದ ಬಾಳೆತೊಟ ನಾಶವಾಗಿರುವುದು
ಹೊಸಕೋಟೆಯಲ್ಲಿ ಆಕಸ್ಮಿಕ ಬೆಂಕಿಯಿಂದ ಬಾಳೆತೊಟ ನಾಶವಾಗಿರುವುದು   

ಕನಕಪುರ: ಕಸಬಾ ಹೋಬಳಿ ಹೊಸಕೋಟೆ (ಕೋಣನಶೆಡ್ಡು) ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಕಟಾವಿಗೆ ಬಂದಿದ್ದ ಏಲಕ್ಕಿ ಬಾಳೆತೋಟ ಬುಧವಾರ ನಾಶವಾಗಿದ್ದು ಸುಮಾರು ₹7 ಲಕ್ಷ ನಷ್ಟವಾಗಿದೆ.

ಬಾಳೆತೋಟವು ಹೊಸಕೋಟೆಯ ಮಲ್ಲಿಕಾರ್ಜುನ್‌ ಅವರಿಗೆ ಸೇರಿದೆ. ಸುಮಾರು 2 ಲಕ್ಷದಷ್ಟು ಖರ್ಚು ಮಾಡಿ ಜಮೀನಿಗೆ ಹನಿ ನೀರಾವರಿ ಮಾಡಿಸಿ ಬಾಳೆ ಗಿಡವನ್ನು ನೆಟ್ಟು, ಉತ್ತಮ ಫಸಲು ಬಂದು ನಿಂತಿದ್ದ ಬಾಳೆ ತೋಟಕ್ಕೆ ಬೆಂಕಿ ಬಿದ್ದಿದೆ.

‘ಕಳೆದ ತಿಂಗಳಲ್ಲಿಯೇ ಬಾಳೆ ಕಟಾವು ಮಾಡಬೇಕಿದ್ದು ತಾಯಿ ವೆಂಕಟಮ್ಮ ಅವರು ಮೃತರಾಗಿದ್ದರಿಂದ ಕಟಾವು ಮಾಡಲು ಸಾಧ್ಯವಾಗಿರಲಿಲ್ಲ. ಇನ್ನೆರಡು ದಿನಗಳಲ್ಲಿ ಕಟಾವು ಮಾಡೋಣವೆಂದು ತೀರ್ಮಾನಿಸಿದ್ದೆ’ ಎಂದು ಮಲ್ಲಿಕಾರ್ಜುನ್‌ ತಿಳಿಸಿದ್ದಾರೆ.

ADVERTISEMENT

’ಬುಧವಾರ ಬೆಳಿಗ್ಗೆ ಜಮೀನಿನ ಕಡೆ ಹೋಗಿ ಹಣ್ಣಾಗಿದ್ದ ಒಂದು ಗೊನೆಯನ್ನು ಕಟಾವು ಮಾಡಿಕೊಂಡು ಬಂದು ಕೆಲಸದ ಮೇಲೆ ಗ್ರಾಮ ಪಂಚಾಯಿತಿಗೆ ಹೋಗಿದ್ದಾಗ ಬಾಳೆತೋಟಕ್ಕೆ ಬೆಂಕಿ ಬಿದ್ದಿರುವ ವಿಷಯವನ್ನು ಅಕ್ಕಪಕ್ಕದ ಜಮೀನಿನವರು ಕಂಡು ತಿಳಿಸಿದರು. ಅಲ್ಲಿಗೆ ಹೋಗಿ ನೋಡುವಷ್ಟರಲ್ಲಿ ತೋಟವು ಸಂಪೂರ್ಣವಾಗಿ ನಾಶವಾಗಿದ್ದು, ಬೆಂಕಿ ಪಕ್ಕದಲ್ಲಿದ್ದ ಕಾಡಿಗೂ ಹರಡಿಕೊಂಡಿದೆ. ತೋಟಕ್ಕೆ ಬೆಂಕಿ ಯಾವ ರೀತಿ ಬಿದ್ದಿದೆ ಎಂದು ಗೊತ್ತಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಮಲ್ಲಿಕಾರ್ಜುನ್‌ ದೂರು ನೀಡಿದ್ದಾರೆ.

ಒತ್ತಾಯ: ‘ಸಾಲ ಮಾಡಿ ಲಕ್ಷಾಂತರ ಹಣ ಖರ್ಚು ಮಾಡಿ ಕಷ್ಟಪಟ್ಟು ಬಾಳೆ ಬೆಳೆದಿದ್ದರು. ಬಾಳೆ ಮಾರಾಟದಿಂದ ಬರುವ ಹಣದಿಂದ ಸಾಲವನ್ನು ತೀರಿಸಬೇಕೆಂದು ಯೋಚಿಸಿದ್ದರು. ಆದರೆ, ತೋಟಕ್ಕೆ ಆಕಷ್ಮಿಕ ಬೆಂಕಿ ಬಿದ್ದು ಆರೇಳು ಲಕ್ಷದ ಬೆಳೆ ನಾಶವಾಗಿದೆ. ಬೆಳೆಯ ಹಣವನ್ನೇ ನಂಬಿಕೊಂಡಿದ್ದ ಕುಟುಂಬವು ಈಗ ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರವು ಸೂಕ್ತ ಪರಿಹಾರ ನೀಡಬೇಕು’ ಎಂದು ಪ್ರಸನ್ನಕುಮಾರ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.