ರಾಮನಗರ: ಜಿಲ್ಲಾ ಅಗ್ನಿಶಾಮಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಕೆ.ಬಿ. ಮಂಜುನಾಥ್ ಅವರು 2024-25ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಪಾತ್ರರಾಗಿದ್ದಾರೆ. ಮಂಜುನಾಥ್ ಅವರು ಜಿಲ್ಲೆಯಲ್ಲಿ 2015ರಿಂದ 2025ರವರೆಗೆ ಕರ್ತವ್ಯ ನಿರ್ವಹಿಸಿದ್ದರು. ಆಗ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ವಿವಿಧ ಉನ್ನತೀಕರಣ ಕಾರ್ಯಗಳನ್ನು ಮಾಡಿದ್ದರು.
ಜಿಲ್ಲಾ ಕೇಂದ್ರದಲ್ಲಿ ನೂತನ ಅಗ್ನಿಶಾಮಕ ಠಾಣೆಯ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಶ್ರಮಿಸಿದ್ದ ಇವರು, ಜಿಲ್ಲೆಯಲ್ಲಿ ಉಂಟಾದ ತೀವ್ರ ಅಗ್ನಿ ಕರೆಗಳಲ್ಲಿ ಹೆಚ್ಚಿನ ಅನಾಹುತವಾಗದಂತೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2800ಕ್ಕೂ ಅಧಿಕ ನಾಗರಿಕರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ, 1,500ಕ್ಕೂ ಅಧಿಕ ಶಾಲಾ, ಕಾಲೇಜು, ಸಂಘ– ಸಂಸ್ಥೆಗಳಿಗೆ ತೆರಳಿ ಅಗ್ನಿ ಸುರಕ್ಷತೆ ಉಪನ್ಯಾಸ ಮತ್ತು ಅಣಕು ಪ್ರರ್ದಶನವನ್ನು ನೀಡಿದ್ದರು.
ಅಗ್ನಿಶಾಮಕ ಠಾಣೆಯ ಸರ್ವಾಂಗಿಣ ಅಭಿವೃದ್ಧಿ ಜೊತೆಗೆ ಗಿಡಮರಗಳನ್ನು ಬೆಳೆಸಿ ಹಸಿರು ಠಾಣೆಯನ್ನಾಗಿ ಮಾಡುವಲ್ಲಿ ಬಹಳ ಶ್ರಮಿಸಿದ್ದಾರೆ. 2021ರ ಏಪ್ರಿಲ್ 7ರಂದು ರೈತ ನಾಗರಾಜಯ್ಯ ಅವರು ನೀರಿನ ಪೈಪ್‌ನಲ್ಲಿ ಸಿಲುಕಿ ಪ್ರಾಣಾಪಾಯದಲ್ಲಿದ್ದ ಸಂದರ್ಭದಲ್ಲಿ ಜೀವಂತವಾಗಿ ರಕ್ಷಿಸಿದ್ದರು. ಅದಕ್ಕೆ ಅಂದಿನ ಉಪಮುಖ್ಯಮಂತ್ರಿ ಅವರು ಸನ್ಮಾನಿಸಿ ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
2022ರ ಆಗಸ್ಟ್ 29ರಂದು ರಾಮನಗರದಲ್ಲಿ ಅತಿ ಹೆಚ್ಚು ಮಳೆಯಿಂದ ಪ್ರವಾಹವಾಗಿ ಸಾವಿರಾರು ಮನೆಗಳು ಜಲಾವೃತಗೊಂಡಿದ್ದವು. ಸ್ವತಃ ಅಗ್ನಿಶಾಮಕ ವಸತಿ ಗೃಹಗಳು ನೀರಿನಿಂದ ಮುಳುಗಡೆಯಾದಾಗಲೂ ಮಂಜುನಾಥ್ ಅವರು, ಇಡೀ ತಂಡದೊಂದಿಗೆ ತೆರಳಿ 1200ಕ್ಕೂ ಅಧಿಕ ನಾಗರೀಕರನ್ನು ಪ್ರವಾಹದಿಂದ ರಕ್ಷಿಸಿದ್ದರು. ಅವರ ವಿವಿಧ ಶ್ಲಾಘನೀಯ ಸೇವೆಯನ್ನು ಗುರುತಿಸಿ ಮುಖ್ಯಮಂತ್ರಿಗಳು 2024-25ನೇ ಸಾಲಿನ ಚಿನ್ನದ ಪದಕಕ್ಕೆ ಆಯ್ಕೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಫೆ. 2ರಂದು ಪದಕ ಪ್ರದಾನ ಸಮಾರಂಭ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.