ಮಾಗಡಿ: ಕೋವಿಡ್ ಸೋಂಕಿಗೆ ಪಟ್ಟಣದ ಹೊಸಪೇಟೆಯಲ್ಲಿ ಮೂವರು, ತಿಪ್ಪಸಂದ್ರ ಹೋಬಳಿಯ ಯಲ್ಲಾಪುರ ಮತ್ತು ಕೋಂಡಹಳ್ಳಿಯಲ್ಲಿ ತಲಾ ಒಬ್ಬರು ಸೇರಿದಂತೆ ಐವರು ಮಂದಿ ಬಲಿಯಾಗಿದ್ದಾರೆ.
ಕೊರೊನಾ ಎರಡನೇ ಅಲೆ ಆರಂಭವಾದಾಗಿನಿಂದ ತಾಲ್ಲೂಕಿನ ವಿವಿಧೆಡೆ ಕೋವಿಡ್ ಸೋಂಕಿತರ ಸಂಖ್ಯೆ ವ್ಯಾಪಕವಾಗಿ ಹೆಚ್ಚುತ್ತಿದೆ. ಪಟ್ಟಣದ ಹೊಸಪೇಟೆ, ತಿರುಮಲೆ ಸೇರಿದಂತೆ ಇತರೆಡೆಗಳಲ್ಲಿ ಸೋಂಕಿಗೆ ಬಲಿಯಾಗುವವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಂಕು ಹರಡದಂತೆ ತಡೆಗಟ್ಟಲು ಕೋವಿಡ್ ಲಸಿಕೆ ಹಾಕಲಾಗುತ್ತಿದೆ. ಆದರೂ, ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಪಟ್ಟಣದ ಜನರಲ್ಲಿ ಗಾಬರಿ ಹುಟ್ಟಿಸಿದೆ. ಜಿಲ್ಲಾಡಳಿತ ಹೊಸಪೇಟೆಯನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಿ ಸೋಂಕು ಹರಡದಂತೆ ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಗುರುವಾರ ಪೌರ ಕಾರ್ಮಿಕರಾದ ದೊಡ್ಡಯ್ಯ ತಂಡದವರು ಸೋಂಕು ನಿವಾರಕ ದ್ರಾವಣ ಸಿಂಪಡಿಸಿದರು. ಕುದೂರಿನ ಪೊಲೀಸ್ ಠಾಣೆಯ ಮುಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ ಚಿಕ್ಕರಾಜು ಸೋಂಕು ನಿವಾರಕ ದ್ರಾವಣ ಸಿಂಪಡಿಸಲು ಚಾಲನೆನೀಡಿದರು.
ಪಿಎಸ್ಐ ಪುಟ್ಟೇಗೌಡ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.