ಚನ್ನಪಟ್ಟಣ ತಾಲ್ಲೂಕಿನ ಅಬ್ಬೂರುದೊಡ್ಡಿ ಬೀರೇಶ್ವರಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ನಡೆದ ‘ಹಾಡಿರೇ ರಾಗಗಳ ತೂಗಿರೇ ದೀಪಗಳ’ ಸಂಗೀತ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಾವಿದರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಚನ್ನಪಟ್ಟಣ: ಜಾನಪದ ಸೊಗಡು ಮುಂದಿನ ಪೀಳಿಗೆಗೆ ಉಳಿಸಲು ಶ್ರಮಿಸುತ್ತಿರುವ ಎಲ್ಲ ಕಲಾ ಪ್ರಕಾರದ ಕಲಾವಿದರಿಗೆ ಸರ್ಕಾರ ಗರಿಷ್ಠ ಪ್ರಮಾಣದ ಅನುದಾನ ನೀಡಬೇಕು ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಸು.ತ.ರಾಮೇಗೌಡ ಹೇಳಿದರು.
ತಾಲ್ಲೂಕಿನ ಅಬ್ಬೂರುದೊಡ್ಡಿ ಬೀರೇಶ್ವರಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ‘ಹಾಡಿರೇ ರಾಗಗಳ ತೂಗಿರೇ ದೀಪಗಳ’ ಸಂಗೀತ ಗಾಯನ ಉದ್ಘಾಟಿಸಿ ಮಾತನಾಡಿದರು.
ಮೂಲವಾದ್ಯ ಪರಿಕರಗಳೊಂದಿಗೆ ಜಾನಪದ ಹಾಡುವುದು ಮತ್ತು ಕೇಳುವುದು ಮನಸ್ಸಿಗೆ ಉಲ್ಲಾಸ ತರುತ್ತದೆ. ಇಂದಿನ ಪಾಶ್ಚಿಮಾತ್ಯ ಶೈಲಿ ಸಂಗೀತದ ಮಧ್ಯೆ ಜಾನಪದ ಗೀತೆಗಳ ವಿವಿಧ ಪ್ರಕಾರದ ಗಾಯನ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸತೀಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮೂಲ ಜಾನಪದ ಯಾರಿಂದ ಯಾವಾಗ ಪ್ರಾರಂಭವಾಯಿತು ಎನ್ನುವುದು ತಿಳಿದಿಲ್ಲ. ಆದರೆ, ಸಾವಿರಾರು ವರ್ಷಗಳಿಂದ ಸಾವಿರಾರು ಜನರ ಬಾಯಿಂದ ಬಾಯಿಗೆ ಹರಿದು ಬಂದ ನುಡಿಗಳು. ಇವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಕಲಾವಿದರಿಗೆ ಇಲಾಖೆಯಿಂದ ಹಲವು ಸೌಲಭ್ಯ ಸಿಗುತ್ತದೆ. ಇದನ್ನು ಕಲಾವಿದರು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶಾಲೆ ಮುಖ್ಯ ಶಿಕ್ಷಕ್ಷ ಜವರೇಗೌಡ, ಎಸ್‌ಡಿಎಂಸಿ ಸಮನ್ವ ವೇದಿಕೆ ರಾಜ್ಯ ಘಟಕದ ಉಪಾಧ್ಯಕ್ಷ ನಾಗವಾರ ಶಂಭುಗೌಡ, ಕಲಾವಿದರಾದ ಕುಂತೂರುದೊಡ್ಡಿ ಪುಟ್ಟರಾಜು, ಗೌರಮ್ಮ ಇತರರು ಭಾಗವಹಿಸಿದ್ದರು.
ಜಾನಪದ ಗಾಯಕರಾದ ಹೊನ್ನಿಗನಹಳ್ಳಿ ಸಿದ್ದರಾಜಯ್ಯ, ಕೆ.ಎಚ್.ಸತೀಶ್, ಕುಮಾರ, ಎಂ.ಬಿ.ಶಿವಪ್ಪ, ಮಹದೇವ್, ಅಂದಾನಯ್ಯ, ಸಿದ್ದರಾಜು ಚಕ್ಕೆರೆ, ಸೋಬಾನೆ ಕಲಾವಿದರು ಸಂಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಕಲಾವಿದ ಅಪ್ಪಗೆರೆ ಮಹೇಶ್ ಮೌರ್ಯ ನಿರೂಪಿಸಿದರು. ಸಾಂಸ್ಕೃತಿಕ ಸಂಘಟಕ ಎಸ್.ಜಯಸಿಂಹ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.