ಚನ್ನಪಟ್ಟಣ: ಜಾನಪದ ಕಲೆ ಮತ್ತು ಸಮರ ಕಲೆ ಕಣ್ಮರೆಯಾಗುತ್ತಿದ್ದು ಶಾಲಾ, ಕಾಲೇಜು ಹಂತದಲ್ಲಿಯೇ ಸಮರ ಕಲೆಗಳ ತರಬೇತಿ ಪ್ರಾರಂಭವಾಗಬೇಕು ಎಂದು ಪದ್ಮಶ್ರೀ ಪುರಸ್ಕೃತ ಸಾಹಸ ಗುರು ಹಾಸನರಘು ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಆದರ್ಶ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್ ಭಾನುವಾರ ಆಯೋಜಿಸಿದ್ದ ಬೊಂಬೆನಾಡಿನ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾನಪದ ಹಾಗೂ ಸಮರ ಕಲೆಗಳು ಪೂರ್ವಿಕರು ಕೊಟ್ಟಿರುವ ಸಾಂಸ್ಕೃತಿಕ ಬಳುವಳಿಗಳು. ಈ ಕಲೆಗಳು ಮುಂದಿನ ತಲೆಮಾರಿಗೆ ಉಳಿಯಬೇಕಾದರೆ ಆ ಕಲೆಗಳಿಗೆ ಸಂಘಸಂಸ್ಥೆಗಳು ಹಾಗೂ ಸರ್ಕಾರದ ಮಟ್ಟದಲ್ಲಿ ಪ್ರೋತ್ಸಾಹ ಅಗತ್ಯವಿದೆ ಎಂದರು.
ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಜಾನಪದ ಕಲೆಗಳು ನಶಿಸುತ್ತಿವೆ. ಲಾವಣಿ, ತತ್ವಪದ, ಸೋಬಾನೆ, ಕೊರಂವಜಿ, ಬೀಸೊ ಹಾಗೂ ಕುಟ್ಟು ಪದ ಜನಮಾನಸದಿಂದ ಮರೆಯಾಗುತ್ತಿವೆ ಎಂದು ಗಾಯಕ ಮಳವಳ್ಳಿ ಮಹದೇಸ್ವಾಮಿ ವಿಷಾದಿಸಿದರು.
ಗಾಯಕರಾದ ಬೇವೂರು ರಾಮಯ್ಯ, ಕೂಡ್ಲೂರು ಮಧು ಅವರಿಗೆ ಬೊಂಬೆನಾಡು ಜಾನಪದ ಸಂಭ್ರಮ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಯಕ್ಷಗಾನ, ಗೀತಗಾಯನ, ಪೂಜಾ ಕುಣಿತ, ಡೊಳ್ಳುಕುಣಿತ, ವೀರಗಾಸೆ, ಕಂಸಾಳೆ ಕುಣಿತ, ಪಟದ ಕುಣಿತ, ನಂದಿ ಕಂಬ ಕುಣಿತ, ಸೋಮನ ಕುಣಿತ, ಗಾರುಡಿಗೊಂಬೆಗಳ ಕುಣಿತ ಹಾಗೂ ಸೋಬಾನೆ, ಜಾನಪದ ಕಲೆಗಳ ಪ್ರದರ್ಶನ ನಡೆಯಿತು.
ಶೋಷಿತ ಸಮುದಾಯ ವೇದಿಕೆ ರಾಜ್ಯಾಧ್ಯಕ್ಷ ಎಂ.ಟಿ.ಸುರೇಶ್ ಕಂಠಿ, ಜಾನಪದ ಜಾತ್ರೆ ನಿರ್ದೇಶಕ ಸಬ್ಬನಹಳ್ಳಿ ರಾಜು, ಗಾಯಕರಾದ ಬ್ಯಾಡರಹಳ್ಳಿ ಶಿವಕುಮಾರ್, ಎಚ್.ಎಸ್.ಸರ್ವೋತ್ತಮ್ ಪತ್ರಕರ್ತರಾದ ಡಿ.ಎಂ.ಮಂಜುನಾಥ್, ಅಕ್ಕೂರು ರಮೇಶ್, ಪೂಜಾ ಕುಣಿತ ಕಲಾವಿದರಾದ ಕೆ.ಜಿ.ರಮೇಶ್, ಪಾರ್ಥಸಾರಥಿ, ಡೊಳ್ಳುಕುಣಿತ ಕಲಾವಿದ ಧನಂಜಯ್ಯ, ಟ್ರಸ್ಟ್ ಅಧ್ಯಕ್ಷ ಎಚ್.ಎಸ್. ಶಿವರಾಜು, ಕಾರ್ಯದರ್ಶಿ ಶ್ರೀನಿವಾಸ, ಗಾಯಕರಾದ ಶಿವಕುಮಾರ್, ಜಯಸಿಂಹ, ಮಹೇಶ್ ಮೌರ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.