ADVERTISEMENT

ಶ್ರಮಿಕ ವರ್ಗಕ್ಕೆ ಜನಪದವೇ ದಿವ್ಯೌಷಧ: ಬಿ.ವಿ. ವಿನಯ್ ಕುಮಾರ್

ಚಕ್ಕೆರೆ ಗ್ರಾಮದಲ್ಲಿ ಸಂಗೀತ ತರಬೇತಿ ಶಿಬಿರದ ಸಮಾರೋಪ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 3:40 IST
Last Updated 11 ಜುಲೈ 2021, 3:40 IST
ಚಕ್ಕೆರೆ ಗ್ರಾಮದಲ್ಲಿ ನಡೆದ ಸಂಗೀತ ತರಬೇತಿ ಶಿಬಿರದ ಸಮಾರೋಪದಲ್ಲಿ ಮಕ್ಕಳು ಕಾರ್ಯಕ್ರಮ ನಡೆಸಿಕೊಟ್ಟರು
ಚಕ್ಕೆರೆ ಗ್ರಾಮದಲ್ಲಿ ನಡೆದ ಸಂಗೀತ ತರಬೇತಿ ಶಿಬಿರದ ಸಮಾರೋಪದಲ್ಲಿ ಮಕ್ಕಳು ಕಾರ್ಯಕ್ರಮ ನಡೆಸಿಕೊಟ್ಟರು   

ಚನ್ನಪಟ್ಟಣ: ‘ಗ್ರಾಮೀಣ ಭಾಗದ ಶ್ರಮಿಕ ವರ್ಗಕ್ಕೆ ಜನಪದವೇ ಶ್ರಮ ಮರೆಯುವ ದಿವ್ಯೌಷಧ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ. ವಿನಯ್ ಕುಮಾರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಚಕ್ಕೆರೆ ಗ್ರಾಮದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನದಿಂದ 2020-212ನೇ ಸಾಲಿನ ಎಸ್.ಸಿ., ಎಸ್.ಟಿ. ಯೋಜನೆಯಡಿ ನಡೆದಗುರುಶಿಷ್ಯ ಪರಂಪರೆಯ ಸಂಗೀತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಬಿರಾರ್ಥಿಗಳು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಗುರುಶಿಷ್ಯ ಪರಂಪರೆ ಎಂಬುದು ಇಲಾಖೆಯಿಂದ ಜಾನಪದವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾರಿಗೆ ಬಂದಿರುವ ಯೋಜನೆಯಾಗಿದೆ. ಈ ಯೋಜನೆಯಡಿ ಕಲಾವಿದರಿಗೆ ಉಪಯೋಗವಾಗುವ ರೀತಿಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಪಟ್ಟ ಕಾರ್ಯಕ್ರಮ ರೂಪಿಸಲಾಗುವುದು. ಕಲೆಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಚಕ್ಕೆರೆ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಪಾರ್ಥ ಮಾತನಾಡಿ, ಗುರು ಇಲ್ಲದೇ ಗುರಿ ಮುಟ್ಟಲು ಸಾಧ್ಯವಿಲ್ಲ. ತಂದೆ, ತಾಯಿಯೇ ಮೊದಲ ಗುರು. ಆ ನಂತರ ಜೀವನದ ಪ್ರತಿ ಹಂತದಲ್ಲೂ ಮಾರ್ಗದರ್ಶನ ನೀಡುವ ಎಲ್ಲರೂ ಗುರುಗಳೇ. ಪ್ರತಿಯೊಬ್ಬರು ಶ್ರದ್ಧೆ, ವಿನಯ, ಗೌರವದಿಂದ ಗುರುವಿಗೆ ಗೌರವ ಕೊಡುವುದು ಕರ್ತವ್ಯವಾಗಿದೆ ಎಂದು ತಿಳಿಸಿದರು.

‌ಶಿಕ್ಷಕ ಸಿ.ಪಿ. ಶ್ರೀನಿವಾಸ್ ಮಾತನಾಡಿ, ಪಾಶ್ಚಿಮಾತ್ಯ ಸಂಗೀತಕ್ಕೆ ಮಾರು ಹೋಗುತ್ತಿರುವ ಸಂದರ್ಭದಲ್ಲಿ ಮೂಲ ಜಾನಪದ ಸಂಸ್ಕೃತಿಯನ್ನು ಉಳಿಸಲು ಸರ್ಕಾರವು ಉತ್ತಮವಾದ ಕಾರ್ಯಕ್ರಮವನ್ನು ಕಲಾವಿದರಿಗೆ ನೀಡುತ್ತಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು
ಹೇಳಿದರು.

ವಿದ್ಯಾರ್ಥಿಗಳು ತರಬೇತಿಯಲ್ಲಿ ಸಂಗೀತ ನೃತ್ಯವನ್ನು ಪ್ರಸ್ತುತಪಡಿಸಿದರು. ಗುರುಶಿಷ್ಯ ಪರಂಪರೆ ಶಿಬಿರದ ಶಿಷ್ಯ ವೃಂದ ದೊರೆಸ್ವಾಮಿ, ರಕ್ಷಿತಾ, ಶಾಲಿನಿ, ಗಿರಿಜಾ, ಅಕ್ಷತಾ, ವೀಣಾಶ್ರೀ, ಕೋಕಿಲ, ನಿಖಿಲಾ, ಆಕಾಶ್, ರಾಜ್ ಕುಮಾರ್, ವಿಶ್ವಾಸ್, ಆದರ್ಶ್, ಜೀವಿತ, ರಾಹುಲ್, ಸಂಜಯ್, ರಾಜೇಶ್, ಕೌಶಿಕ್, ಹಿತೇಶ್, ಹರ್ಷ, ಮೇಘನ ಕಲಾ ಪ್ರದರ್ಶನ ನಡೆಸಿಕೊಟ್ಟರು.

ಹೋರಾಟಗಾರ ಶಂಭೂಗೌಡ ಅಧ್ಯಕ್ಷತೆವಹಿಸಿದ್ದರು. ಗ್ರಾಮದ ಮುಖಂಡ ಹೋಟೆಲ್ ನಿಂಗಪ್ಪ, ದೈಹಿಕ ಶಿಕ್ಷಣ ಶಿಕ್ಷಕರಾದ ಸುಧಾ, ರೋಸ್ ಮೇರಿ, ಕಲಾವಿದರಾದ ಜಯಸಿಂಹ, ಸಿದ್ದರಾಜು ಚಕ್ಕೆರೆ
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.