ADVERTISEMENT

ಕಾಡಾನೆ ದಾಳಿ: ರೈತರ ಬೆಳೆ ಧ್ವಂಸ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 4:53 IST
Last Updated 7 ಅಕ್ಟೋಬರ್ 2021, 4:53 IST

ಚನ್ನಪಟ್ಟಣ: ತಾಲ್ಲೂಕಿನ ದೊಡ್ಡನಹಳ್ಳಿಯಲ್ಲಿ ನಾಲ್ಕು ಆನೆಗಳು ರೈತರ ಬೆಳೆಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಗ್ರಾಮದ ಹಲವು ರೈತರ ಬಾಳೆ, ತೆಂಗು, ಟೊಮೆಟೊ ಬೆಳೆಗಳನ್ನು ನಾಶ ಮಾಡಿವೆ. ದೊಡ್ಡನಹಳ್ಳಿ ಅಕ್ಕಪಕ್ಕದ ಗ್ರಾಮಗಳಲ್ಲಿಯೂ ದಾಳಿ ನಡೆಸಿರುವ ಆನೆಗಳು ಅಲ್ಲಿಯೂ ರೈತರ ಬೆಳೆಗಳನ್ನು ಧ್ವಂಸ ಮಾಡಿವೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಕಬ್ಬಾಳು ಹಾಗೂ ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಬಂದಿರುವ ಈ ಆನೆಗಳು ಈ ಭಾಗದಲ್ಲಿ ಬೀಡು ಬಿಟ್ಟಿದ್ದು, ರಾತ್ರಿ ವೇಳೆ ರೈತರ ಬೆಳೆಗಳ ಮೇಲೆ ದಾಳಿ ನಡೆಸುತ್ತಿವೆ ಎಂದು ರೈತರು ಆರೋಪಿಸಿದ್ದಾರೆ.

ADVERTISEMENT

ಬೆಳಗಿನ ವೇಳೆಯಲ್ಲಿಯೂ ಆನೆಗಳು ಹೊಲ, ತೋಟಗಳಲ್ಲಿ ಓಡಾಡಿಕೊಂಡಿರುತ್ತವೆ. ಜುಲೈ 27ರಂದು ಗ್ರಾಮದ ರೈತ ಸತೀಶ್ ಅವರು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಗಲು ಹೊತ್ತಿನಲ್ಲಿಯೇ ಹಿಂದಿನಿಂದ ಬಂದಿದ್ದ ಕಾಡಾನೆಯೊಂದು ದಾಳಿ ನಡೆಸಿ ಅವರನ್ನು ತುಳಿದು ಸಾಯಿಸಿತ್ತು. ಈ ಭಾಗದಲ್ಲಿ ಆನೆಗಳ ಉಪಟಳ ಮಿತಿಮೀರಿದೆ ಎಂದು ರೈತರು ತಿಳಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಕಾಡಿಗೆ ಓಡಿಸಲು ಕ್ರಮ ಕೈಗೊಳ್ಳಬೇಕು. ಹಾಗೆಯೇ ಬೆಳೆ ಕಳೆದುಕೊಂಡಿರುವ ರೈತರಿಗೆ ಪರಿಹಾರ ಕೊಡಿಸಬೇಕು ಎಂದು ಗ್ರಾಮದ ಮುಖಂಡ ಬಿಳಿಯಪ್ಪ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.