ADVERTISEMENT

ಡಿಆರ್‌ಎಫ್‌ಒ ವಿರುದ್ಧ ಕ್ರಮಕ್ಕೆ ಆಗ್ರಹ

ಜಾರಿ ಕಾರಣಕ್ಕೆ ಅಧೀನ ಸಿಬ್ಬಂದಿಗೆ ಕಿರುಕುಳ, ಮರ ಕಡಿದವರಿಂದ ಲಂಚ ಪಡೆದ ಆರೋಪ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 2:57 IST
Last Updated 18 ಡಿಸೆಂಬರ್ 2025, 2:57 IST
ರಾಮನಗರ ಡಿಆರ್‌ಎಫ್‌ಒ ರಾಜಶೇಖರಯ್ಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ದಲಿತ ಸಂಘಟನೆಗಳ ಮುಖಂಡರು ವಲಯ ಅರಣ್ಯಾಧಿಕಾರಿ ಮೊಹಮ್ಮದ್ ಮನ್ಸೂರ್ ಅವರಿಗೆ ಮನವಿ ಸಲ್ಲಿಸಿದರು. ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ ಹಾಗೂ ಇತರರು ಇದ್ದಾರೆ
ರಾಮನಗರ ಡಿಆರ್‌ಎಫ್‌ಒ ರಾಜಶೇಖರಯ್ಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ದಲಿತ ಸಂಘಟನೆಗಳ ಮುಖಂಡರು ವಲಯ ಅರಣ್ಯಾಧಿಕಾರಿ ಮೊಹಮ್ಮದ್ ಮನ್ಸೂರ್ ಅವರಿಗೆ ಮನವಿ ಸಲ್ಲಿಸಿದರು. ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ ಹಾಗೂ ಇತರರು ಇದ್ದಾರೆ   

ರಾಮನಗರ: ಇಲ್ಲಿನ ರಾಮನಗರ ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ರಾಜಶೇಖರಯ್ಯ, ಪರಿಶಿಷ್ಟ ಜಾತಿಗೆ ಸೇರಿದ ಗಸ್ತು ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿದ್ದಾರೆ. ಮರಗಳನ್ನು ಕಡಿದ ಆರೋಪಿಯಿಂದ ಬಳಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿರುವ ದಲಿತ ಸಂಘಟನೆಗಳ ಒಕ್ಕೂಟ, ಡಿಆರ್‌ಎಫ್‌ಒ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.

ಈ ಕುರಿತು ಒಕ್ಕೂಟದ ನಿಯೋಗವು ಅಧ್ಯಕ್ಷ ಶಿವಕುಮಾರಸ್ವಾಮಿ ಅವರ ನೇತೃತ್ವದಲ್ಲಿ, ವಲಯ ಅರಣ್ಯಾಧಿಕಾರಿ ಮೊಹಮ್ಮದ್ ಮನ್ಸೂರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಈ ವೇಳೆ ಮಾತನಾಡಿದ ಶಿವಕುಮಾರಸ್ವಾಮಿ ಮಾತನಾಡಿ, ‘ಗಸ್ತು ಸಿಬ್ಬಂದಿ ಬಿ.ಸಿ. ವರದರಾಜು ಅವರಿಗೆ ಜಾತಿ ಕಾರಣಕ್ಕೆ ಡಿಆರ್‌ಎಫ್‌ಒ ರಾಜಶೇಖರಯ್ಯ ಉದ್ದೇಶಪೂರ್ವಕವಾಗಿ ತೊಂದರೆ ಕೊಡುತ್ತಾ ದೌರ್ಜನ್ಯ ಎಸಗಿದ್ದಾರೆ. ದುರುದ್ದೇಶದಿಂದ ಮಾಗಡಿ ವಲಯದ ಚೀಲೂರು ಬಿಟ್‌ಗೆ ವರ್ಗಾವಣೆ ಮಾಡಿಸಿದ್ದಾರೆ’ ಎಂದು ದೂರಿದರು.

‘ಒಂದು ರಶೀದಿಗೆ 2 ಗಾಡಿ ಸೌದೆ ತರಲು ಕಾನೂನುಬಾಹಿರವಾಗಿ ಅನುಮತಿ ನೀಡಿದ್ದರ ಕುರಿತು ರಾಜಶೇಖರಯ್ಯ ಹಾಗೂ ವರದರಾಜು ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೇ ಕಾರಣಕ್ಕೆ ವರದರಾಜು ಮೇಲೆ ರಾಜಶೇಖರಯ್ಯ ತನ್ನ ಸಹಚರರಿಂದ ಹಲ್ಲೆ ಮಾಡಿಸಿದ್ದರು’ ಎಂದು ಆರೋಪಿಸಿದರು.

ADVERTISEMENT

‘ಈ ವಿಷಯವಾಗಿ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ಅರಣ್ಯಾಧಿಕಾರಿ ಮೇಲೆ ಎಸ್‌ಸಿ–ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ನೀಡಲು ಸಂಬಂಧಿಸಿದವರ ಅನುಮತಿ ಕೋರಿದ್ದರು. ಈ ವಿಚಾರ ತಿಳಿದ ಮೇಲೆ ಡಿಆರ್‌ಎಫ್‌ಒ ಮತ್ತಷ್ಟು ಕಿರುಕುಳ ನೀಡಿದ್ದಾರೆ. ಹಾಗಾಗಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ತಾಲ್ಲೂಕಿನ ಉರಗಹಳ್ಳಿ ಗ್ರಾಮದ ಸರ್ವೆ ನಂ.241ರಲ್ಲಿ 900ಕ್ಕೂ ಹೆಚ್ಚು ಮರಗಳನ್ನು ಕಲ್ಲು ಗಣಿಗಾರಿಕೆಗೆ ಉದ್ದೇಶದಿಂದ ಕಡಿಯಲಾಗಿತ್ತು. ತಮ್ಮ ವ್ಯಾಪ್ತಿಯಲ್ಲಿ ಮರಗಳನ್ನು ಕಡಿಯುವ ವಿಷಯ ಡಿಆರ್‌ಎಫ್‌ಒಗೆ ಗೊತ್ತಿದ್ದರೂ ಕ್ರಮ ಕೈಗೊಳ್ಳದೆ ಸುಮ್ಮನಿದ್ದರು. ಅಲ್ಲದೆ, ಅವರಿಂದ ₹1 ಲಕ್ಷ ಪಡೆದಿದ್ದರು’ ಎಂದು ದೂರಿದರು.

‘ತನ್ನ ಸಹಚರರೊಂದಿಗೆ ಸೇರಿಕೊಂಡು ರಾಜಶೇಖರಯ್ಯ ಅವರು ಅ. 28ರಂದು ರಾತ್ರಿ ಬಿಡದಿಯ ವಂಡರ್ ಲಾ ಬಳಿಯ ಚೆಕ್‌ಪೋಸ್ಟ್ ಬಳಿ ಸೌದೆ ಸಾಗಿಸುತ್ತಿದ್ದ ಕ್ಯಾಂಟರ್ ನಿಲ್ಲಿಸಿದ್ದರು. ಏಕಾಏಕಿ ವಾಹನದೊಳಗೆ ನುಗ್ಗಿ ಅಮಾನೀಯವಾಗಿ ರೌಡಿಗಳಂತೆ ವರ್ತಿಸಿ ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದರು. ಅದರ ವಿಡಿಯೊ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು’ ಎಂದರು.

‘ಇಷ್ಟೆಲ್ಲಾ ಕರ್ತವ್ಯಲೋಪ ಎಸಗಿರುವ ಡಿಆರ್‌ಎಫ್ ಅವರನ್ನು ಅಮಾನತುಗೊಳಿಸಬೇಕು. ಇಲ್ಲದಿದ್ದರೆ, ಅರಣ್ಯ ಇಲಾಖೆ ಕಚೇರಿ ಎದುರು ತಮಟೆ ಚಳವಳಿ ನಡಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ದಲಿತ ಮುಖಂಡರಾದ ಹರೀಶ್ ಬಾಲು, ವೆಂಕಟೇಶ್, ನವೀನ್ , ಭೂಷಣ್, ಕಿರಣ್ ಹಾಗೂ ದುರ್ಗಾ ಪ್ರಸಾದ್ ಕೆ.ಎಲ್. ಸಿದ್ದರಾಜು ಇದ್ದರು.

ಅರಣ್ಯ ಸಚಿವರ ಗಮನಕ್ಕೂ ಬಂದಿದೆ

ಡಿಆರ್‌ಎಫ್‌ಒ ರಾಜಶೇಖರಯ್ಯ ಅವರ ವಿರುದ್ಧ ಕೇಳಿ ಬಂದಿರುವ ಆರೋಪವು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಗಮನಕ್ಕೂ ಬಂದಿದೆ. ಆರೋಪಗಳ ಸತ್ಯಾಸತ್ಯಾತೆ ಅರಿಯಲು ಎಸಿಎಫ್ ಅವರಿಂದ ವರದಿಗೆ ಸೂಚಿಸಿದ್ದು ಅದನ್ನು ಆಧರಿಸಿ 7 ದಿನದೊಳಗೆ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದ್ದಾರೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.