ADVERTISEMENT

ಚನ್ನಪಟ್ಟಣ: ಈಡೇರದ ಈಜುಕೊಳದ ಕಾಮಗಾರಿ

ಶಿಥಿಲಗೊಳ್ಳುತ್ತಿರುವ ಕಟ್ಟಡ, ಇಲ್ಲ ಭದ್ರತಾ ಸಿಬ್ಬಂದಿ, ಲಕ್ಷಾಂತರ ರೂಗಳ ಯೋಜನೆ ನನೆಗುದಿಗೆ

ಎಚ್.ಎಂ.ರಮೇಶ್
Published 28 ಜುಲೈ 2019, 19:30 IST
Last Updated 28 ಜುಲೈ 2019, 19:30 IST
ಕಾಮಗಾರಿ ಸ್ಥಗಿತವಾಗಿರುವ ಈಜುಕೊಳದ ಕಟ್ಟಡ
ಕಾಮಗಾರಿ ಸ್ಥಗಿತವಾಗಿರುವ ಈಜುಕೊಳದ ಕಟ್ಟಡ   

ಚನ್ನಪಟ್ಟಣ: ಇಲ್ಲಿನ ಹೊರವಲಯದ ಮಹದೇಶ್ವರ ದೇವಸ್ಥಾನದ ಬಳಿಯ ಕಣ್ವ ಬಡಾವಣೆಯಲ್ಲಿ ಐದು ವರ್ಷಗಳ ಹಿಂದೆ ಸುಮಾರು ₹ 1 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಈಜುಕೊಳ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಪಾಳು ಬಿದ್ದಿದೆ.

ಅಂದಿನ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 2014ರಲ್ಲಿ ನಿರ್ಮಿಸಲು ಉದ್ದೇಶಿಸಿ, ಪ್ರಾಧಿಕಾರದ ಅಂದಿನ ಅಧ್ಯಕ್ಷೆ ಶಾರದಾಗೌಡ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ತ್ವರಿತಗತಿಯಲ್ಲಿ ಕಾಮಗಾರಿ ಆರಂಭವಾಗಿ ಕಟ್ಟಡದ ಕೆಲಸ ಕಾರ್ಯಗಳೂ ಪ್ರಾರಂಭಗೊಂಡಿದ್ದವು. ಆದರೆ ಒಂದು ವರ್ಷ ಕಾಮಗಾರಿ ನಡೆದು ಆನಂತರ ನಿಂತು ಹೋಗಿದೆ. ಅಲ್ಲಿಂದ ಈವರೆಗೆ ಮತ್ತೆ ಕಾಮಗಾರಿ ಆರಂಭವಾಗಿಲ್ಲ.

ಪ್ರತಿಷ್ಟಿತ ಕಣ್ವ ಬಡಾವಣೆ ನಿರ್ಮಾಣ ಮಾಡಿದ್ದ ರಾಮನಗರ-ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರ, ಅಲ್ಲಿನ ನಿವೇಶನಗಳನ್ನು ಸಾರ್ವಜನಿಕರಿಗೆ ನಿಯಮಾನುಸಾರ ಹಂಚಿಕೆ ಮಾಡಿತ್ತು. ಆದರೂ ಬಡಾವಣೆ ಅಭಿವೃದ್ಧಿಯಾಗಿಲ್ಲ. ಒಂದೆರಡು ಮನೆಗಳು ಅಲ್ಲಿ ನಿರ್ಮಾಣವಾಗಿರುವುದು ಬಿಟ್ಟರೆ, ಉಳಿದೆಲ್ಲ ನಿವೇಶನಗಳು ಖಾಲಿ ಉಳಿದಿವೆ. ಈಜು ಕಲಿಯುವನಗರ ಹಾಗೂ ಗ್ರಾಮೀಣ ಭಾಗದ ಆಸಕ್ತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇಲ್ಲೊಂದು ಈಜುಕೊಳ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಹಣದ ಕೊರೆತೆಯಿಂದ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಈಜುಕೊಳ ಕೊಂಪೆಯಾಗಿ ಮಾರ್ಪಟ್ಟು ಮದ್ಯವ್ಯಸನಿಗಳ, ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕಟ್ಟಡದ ಆವರಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಗಿಡ-ಗಂಟಿ ಬೆಳೆದು ಕಟ್ಟಡ ಶಿಥಿಲಗೊಳ್ಳುತ್ತಿದೆ. ಮಾತ್ರವಲ್ಲ ಮಲಮೂತ್ರ ವಿಸರ್ಜನೆಗೆ ಇದು ಗುರಿಯಾಗಿದೆ. ಇಷ್ಟೊಂದು ಅನುದಾನದಲ್ಲಿ ನಿರ್ಮಾಣ ಮಾಡಲು ಮುಂದಾದ ಕಾಮಗಾರಿ ಈ ರೀತಿಯಾಗಿರುವುದು ಬೇಸರದ ಸಂಗತಿ ಎನ್ನುತ್ತಾರೆ ಸ್ಥಳೀಯ ನಿವಾಸಿಗಳಾದ ಮನೋಹರ್, ದಿನೇಶ್.

ಈಜಲು ಬರುವ ಸಾರ್ವಜನಿಕರು ಬಟ್ಟೆ ಬದಲಾಯಿಸಲು ನಿರ್ಮಿಸಿರುವ ಕೊಠಡಿಗಳು ಅರ್ಧ ಮಾತ್ರ ಕಟ್ಟಿ ಹಾಗೇ ಬಿಡಲಾಗಿದೆ. ಕಟ್ಟಡದ ಒಳಭಾಗ ಮಲಿನಗೊಂಡು ಗಬ್ಬು ನಾರುತ್ತಿದೆ. ಒಳಗೆ ಹಾಗೂ ಸುತ್ತಲಿನ ಪ್ರದೇಶ ಬಯಲು ಶೌಚಾಲಯವಾಗಿ ಪರಿವರ್ತನೆಯಾಗಿದೆ. ಒಳಗೆ ಕಾಲಿಡಲೂ ಸಾಧ್ಯವಾಗದ ಸ್ಥಿತಿ ಇದೆ. ಮದ್ಯವ್ಯಸನಿಗಳು ಕುಡಿದ ಬಾಟಲ್‌ಗಳನ್ನು ಅಲ್ಲಿಯೇ ಬಿಸಾಡಿ ಹೋಗುತ್ತಾರೆ. ಪ್ರಾಧಿಕಾರ ಇದನ್ನು ನೋಡಿಕೊಳ್ಳಲು ಭದ್ರತಾ ಸಿಬ್ಬಂದಿಯನ್ನು ನೇಮಿಸಬಹುದಿತ್ತು ಎಂದು ಸಾಗರ್, ನಿಶಾಂತ್, ರಕ್ಷಿತ್ ಅಭಿಪ್ರಾಯ ಪಡುತ್ತಾರೆ.

ಪೋಷಕರು ಮಕ್ಕಳಿಗೆ ಈಜು ಕಲಿಸಲು ಚನ್ನಪಟ್ಟಣದಲ್ಲಿ ಯಾವುದೇ ಈಜು ಕೊಳ ಇಲ್ಲ. ದೂರದ ಮಂಡ್ಯ ಅಥವಾ ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಾದ ಸ್ಥಿತಿ ಇದೆ. ಇನ್ನಾದರೂ ಪ್ರಾಧಿಕಾರದ ಅಧ್ಯಕ್ಷರು, ಜನಪ್ರತಿನಿಧಿಗಳು, ಅಧಿಕಾರಿಗಳು ಈಜು ಕೊಳ ದುರಸ್ಥಿ ಮಾಡಿ, ಬಳಕೆ ಯೋಗ್ಯವಾಗುವಂತೆ ಮಾಡಲಿ ಎನ್ನುವುದು ಬಹುತೇಕರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.