ADVERTISEMENT

ಕನಕಪುರ: ಅಪಘಾತದ ಹಾಟ್‌ಸ್ಪಾಟ್ ಆದ ಗಡಸಳ್ಳಿ ಜಂಕ್ಷನ್

ಬರಡನಹಳ್ಳಿ ಕೃಷ್ಣಮೂರ್ತಿ
Published 4 ಆಗಸ್ಟ್ 2025, 2:32 IST
Last Updated 4 ಆಗಸ್ಟ್ 2025, 2:32 IST
<div class="paragraphs"><p>ಕನಕಪುರ ಹೊರವಲಯದ ಬೆಂಗಳೂರು–ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್‌ನ ಗಡಸಳ್ಳಿ ಜಂಕ್ಷನ್‌ನಲ್ಲಿ ವಾಹನಗಳು ರಸ್ತೆ ದಾಟುತ್ತಿರುವುದು</p></div>

ಕನಕಪುರ ಹೊರವಲಯದ ಬೆಂಗಳೂರು–ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್‌ನ ಗಡಸಳ್ಳಿ ಜಂಕ್ಷನ್‌ನಲ್ಲಿ ವಾಹನಗಳು ರಸ್ತೆ ದಾಟುತ್ತಿರುವುದು

   

ಕನಕಪುರ: ನಗರದ ಹೊರವಲಯದಲ್ಲಿ ಹಾದು ಹೋಗಿರುವ ಬೆಂಗಳೂರು–ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ–948ರ ಬೈಪಾಸ್‌ ರಸ್ತೆಯ ಗಡಸಳ್ಳಿ ಜಂಕ್ಷನ್‌ ಅಪಘಾತದ ಹಾಟ್‌ಸ್ಪಾಟ್ ಆಗಿದೆ. ನಾಲ್ಕೂ ದಿಕ್ಕಿಗೆ ಸಾಗುವ ರಸ್ತೆಗಳು ಸಂಧಿಸುವ ಈ ಜಾಗದಲ್ಲಿ ರಸ್ತೆ ಅಪಘಾತ ಎಂಬಂತಾಗಿದೆ.

ಹೆದ್ದಾರಿಯಲ್ಲಿ ಭಾರೀ ವಾಹನಗಳು, ಕಾರುಗಳು, ಬಸ್‌ಗಳು ಸೇರಿದಂತೆ ಬಹುತೇಕ ವಾಹನಗಳು ಅತಿ ವೇಗದಲ್ಲಿ ಸಂಚರಿಸುತ್ತವೆ. ಇದರಿಂದಾಗಿ ಜಂಕ್ಷನ್‌ ಎರಡೂ ಕಡೆಯಿಂದ ಬರುವ ಸ್ಥಳೀಯ ವಾಹನ ಸವಾರರಿಗೆ ಹಾಗೂ ಪಾದಚಾರಿಗಳು ಜೀವ ಕೈಯಲ್ಲಿಡಿದುಕೊಂಡು ರಸ್ತೆ ದಾಟಬೇಕಿದೆ.

ADVERTISEMENT

ನಾಲ್ಕು ದಿನದ ಹಿಂದೆಯಷ್ಟೇ ಹೆದ್ದಾರಿಯಲ್ಲಿ ಅತಿ ವೇಗವಾಗಿ ಬಂದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ನಂದಿ ಹಾಲಿನ ಅಂಗಡಿಯ ಮಾಲೀಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಡಿಕ್ಕಿಯ ರಸಭಕ್ಕೆ ಕಾರು ನಜ್ಜುಗುಜ್ಜಾಗಿ ರಸ್ತೆ ಪಕ್ಕಕ್ಕೆ ಹಾರಿ ಬಿದ್ದಿತ್ತು.

ಹಳ್ಳಿಗಳಿಗೆ ಸಂಪರ್ಕ ಸೇತು: ಗಡಸಳ್ಳಿ ಜಂಕ್ಷನ್‌ ಒಂದು ರಸ್ತೆಯು ಕಬ್ಬಾಳು ಕಡೆಗೆ ಹೋಗುತ್ತದೆ. ಈ ಮಾರ್ಗವು ಸಾತನೂರು, ಕಬ್ಬಾಳು, ಕಂಚನಹಳ್ಳಿ, ಚನ್ನಪಟ್ಟಣ ಸೇರಿದಂತೆ ನೂರಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಸೇತುವಾಗಿದೆ. ಮತ್ತೊಂದು ರಸ್ತೆ ನಗರದ ಹಳೆ ರಾಷ್ಟ್ರೀಯ ಹೆದ್ದಾರಿಯಿಂದ ಬೈಪಾಸ್ ರಸ್ತೆ ಸಂಧಿಸುತ್ತದೆ. ಇಲ್ಲಿಂದಲೂ ನೂರಾರು ವಾಹನಗಳು ಜಂಕ್ಷನ್‌ಗೆ ಬಂದು ಹೋಗುತ್ತವೆ.

ಶಿವನಹಳ್ಳಿ ಮತ್ತು ಬೆಂಗಳೂರು ಕಡೆಯಿಂದಲೂ ಈ ಜಂಕ್ಷನ್‌ಗೆ ವಾಹನಗಳು ಬರುತ್ತವೆ. ಶಿವನಹಳ್ಳಿ ಮಾರ್ಗವಾಗಿ ಮಳವಳ್ಳಿ, ಕೊಳ್ಳೇಗಾಲ, ಕೊಯಮತ್ತೂರು, ಚಾಮರಾಜನಗರ, ಮಲೆಮಾದೇಶ್ವರ ಬೆಟ್ಟ, ಮೈಸೂರು ಸೇರಿದಂತೆ ಹಲವು ಪ್ರದೇಶಗಳಿಗೆ ಬೈಪಾಸ್ ರಸ್ತೆ ಸಂಪರ್ಕ ಕಲ್ಪಿಸುತ್ತದೆ.

ಅವೈಜ್ಞಾನಿಕ ಜಂಕ್ಷನ್: ಬೈಪಾಸ್ ಜಂಕ್ಷನ್ ಅನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದು ಅಪಘಾತಗಳು ಹೆಚ್ಚಾಗಲು ಕಾರಣ. ಬೈಪಾಸ್ ಹಾದು ಹೋಗಿರುವಂತಹ ಮುಖ್ಯರಸ್ತೆಯಲ್ಲಿ ಚನ್ನಪಟ್ಟಣಕ್ಕೆ ಹೋಗುವ ಮತ್ತೊಂದು ಮುಖ್ಯರಸ್ತೆಯು ಅಡ್ಡವಾಗಿ ಹಾದು ಹೋಗಿದೆ. ಇಲ್ಲಿ ಬಸ್ಸು ಸೇರಿದಂತೆ ಸಾವಿರಾರು ವಾಹನಗಳು ಓಡಾಡುತ್ತವೆ. ಇಲ್ಲಿ ಪ್ರಾರಂಭದಲ್ಲಿಯೇ ಸರ್ವಿಸ್ ರಸ್ತೆ ಮಾಡಿ ಅಂಡರ್ ಪಾಸ್ ಮಾಡಬೇಕಿತ್ತು ಎನ್ನುತ್ತಾರೆ ಸ್ಥಳೀಯರು.

ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳಿಗೆ ಜಂಕ್ಷನ್‌ನ ಎರಡೂ ಕಡೆಯ ರಸ್ತೆಗಳಿಂದ ಅಡ್ಡವಾಗಿ ವಾಹನಗಳು ಬರುತ್ತವೆ. ನಿಧಾನವಾಗಿ ರಸ್ತೆ ದಾಟುವ ವಾಹನಗಳಿಗೆ ವೇಗವಾಗಿ ಬರುವ ವಾಹನಗಳು ಡಿಕ್ಕಿ ಹೊಡೆಯುತ್ತವೆ. ಇಲ್ಲಿ ಚಾಲಕರು ಅತಿ ವೇಗವಾಗಿ ವಾಹನ ಚಲಾಯಿಸುತ್ತಾರೆ ಎಂದು ದೂರಿದರು.

20ಕ್ಕೂ ಹೆಚ್ಚು ಅಪಘಾತ: ಗಡಸಳ್ಳಿ ಜಂಕ್ಷನ್‌ನಲ್ಲಿ ಒಂದು ವರ್ಷದಲ್ಲಿ 20ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಏಳೆಂಟು ಮಂದಿ ಸತ್ತಿದ್ದಾರೆ. ಇದರಲ್ಲಿ ಬಹುತೇಕರು ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು. ನಾಲ್ಕು ದಿನಗಳ ಹಿಂದೆ ಕಾರು ಚಾಲಕರೊಬ್ಬರು ಮೃತಪಟ್ಟಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಗಡಸಳ್ಳಿ ರಸ್ತೆ ಕಡೆ ಹೋಗುವವರು ಮತ್ತು ಬರುವವರು ನಿಧಾನವಾಗಿ ಚಲಿಸಲಿ ಎಂದು ಎರಡು ಕಡೆ ರಸ್ತೆಉಬ್ಬುಗಳನ್ನು (ಹಂಪ್ಸ್‌) ಹಾಕಲಾಗಿದೆ. ಆದರೂ ಅಪಘಾತಗಳು ಕಡಿಮೆ ಆಗಿಲ್ಲ. ಹೆದ್ದಾರಿಗೆ ಜೀವಗಳು ಬಲಿಯಾಗುತ್ತಲೇ ಇವೆ. ಗಾಯಗೊಂಡವರು ನೋವಿನಿಂದ ಬದುಕು ಸಾಗಿಸುತ್ತಿದ್ದಾರೆ.

ಸರ್ವೀಸ್ ರಸ್ತೆಗೆ ಒತ್ತಾಯ: ಬೈಪಾಸ್‌ನಲ್ಲಿ ಅಪಘಾತ ತಡೆಗೆ ಹೆದ್ದಾರಿಗೆ ಸರ್ವಿಸ್ ರಸ್ತೆ ಮಾಡಿ ಅಂಡರ್ ಪಾಸ್ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿ ಹೋರಾಟ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ತಾಲ್ಲೂಕು ಹಾಗೂ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

‘ವೇಗ ನಿಯಂತ್ರಣಕ್ಕೆ ಬೇಕಿದೆ ಹಂಪ್ಸ್’

‘ವಿಶಾಲವಾಗಿರುವ ಬೈಪಾಸ್ ರಸ್ತೆಯಲ್ಲಿ ಇತ್ತೀಚೆಗೆ ವಾಹನಗಳ ಸಂಚಾರ ಹೆಚ್ಚಾಗಿದೆ. ಮಿತಿ ಮೀರಿ ವೇಗವಾಗಿ ಸಂಚರಿಸುವ ವಾಹನ ಚಾಲಕರ ಅಜಾಗರೂಕತೆಯೇ ಅಪಘಾತಕ್ಕೆ ಕಾರಣವಾಗುತ್ತಿದೆ. ಇದರಿಂದಾಗಿ ಹಳ್ಳಿ ಜನರು ರಸ್ತೆ ದಾಟುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಸಂಭವಿಸುತ್ತಿದೆ. ಜಂಕ್ಷನ್‌ನಲ್ಲಿ ವಾಹನಗಳ ವೇಗ ತಗ್ಗಿದರಷ್ಟೇ ಅಪಘಾತಗಳು ತಗ್ಗುತ್ತವೆ. ಅದಕ್ಕಾಗಿ ಜಂಕ್ಷನ್‌ನಲ್ಲಿರುವ ಹೆದ್ದಾರಿಯ ಎರಡೂ ಕಡೆ ರಸ್ತೆಯುಬ್ಬು (ಹಂಪ್ಸ್) ಅಳವಡಿಸಬೇಕಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಕನಕಪುರದ ಸರ್ಕಲ್ ಇನ್‌ಸ್ಪೆಕ್ಟರ್ ಅನಂತರಾಮ್ ‘ಪ್ರಜಾವಾಣಿ’ ತಿಳಿಸಿದರು.

‘ಕೆಳಸೇತುವೆ ನಿರ್ಮಾಣದ ಅಗತ್ಯವಿದೆ’

‘ಬೈಪಾಸ್ ರಸ್ತೆ ನಿರ್ಮಾಣಕ್ಕೆ ಮುಂಚೆ ಗಡಸಳ್ಳಿ ಮಾರ್ಗವಾಗಿ ಚನ್ನಪಟ್ಟಣ ಕಬ್ಬಾಳು ಕಂಚನಹಳ್ಳಿಗೆ ಬಸ್ ಮಾರ್ಗವಿತ್ತು. ಹಳ್ಳಿಗಳ ಜನರು ಈ ರಸ್ತೆಯಲ್ಲೇ ಓಡಾಡುತ್ತಿದ್ದರು. ಇದೀಗ ಬೈಪಾಸ್ ರಸ್ತೆ ಬಂದ ಬಳಿಕ ರಸ್ತೆಯಲ್ಲಿ ಓಡಾಡುವ ಜನಕ್ಕೆ ತೊಂದರೆಯಾಗಿದೆ. ಜೀವ ಕೈಯಲ್ಲಿಡಿದುಕೊಂಡು ರಸ್ತೆ ದಾಟಬೇಕಿದೆ. ತಿಂಗಳಿಗೆ ನಾಲ್ಕೈದು ಅಪಘಾತಗಳು ಸಂಭವಿಸುತ್ತಿವೆ. ಸಾವು–ನೋವು ಸಾಮಾನ್ಯವಾಗಿದೆ. ಸ್ಥಳೀಯ ವಾಹನಗಳ ಓಡಾಟ ಹಾಗೂ ಜನರು ರಸ್ತೆ ದಾಟಲು ಪೂರಕವಾಗಿ ಜಂಕ್ಷನ್‌ನಲ್ಲಿ ಕೆಳ ಸೇತುವೆ ನಿರ್ಮಾನ ಮಾಡಬೇಕು. ಇದರಿಂದ ಅಪಘಾತಗಳು ಸಹ ತಗ್ಗಲಿವೆ’ ಎಂದು ವಿರೂಪಸಂದ್ರದ ಸತೀಶ್ ಪಿ.ವಿ ಒತ್ತಾಯಿಸಿದರು.

ಹೆದ್ದಾರಿಯಲ್ಲಿ ವಾಹನಗಳು ಅತಿ ವೇಗವಾಗಿ ಸಂಚರಿಸುವುದರಿಂದ ಜೀವ ಕೈಯಲ್ಲಿಡಿದುಕೊಂಡು ರಸ್ತೆ ದಾಟಬೇಕಿದೆ. ಜಂಕ್ಷನ್‌ನಲ್ಲಿ ಸಿಗ್ನಲ್ ಅಳವಡಿಸುವ ಜೊತೆಗೆ ರಸ್ತೆ ಉಬ್ಬು ನಿರ್ಮಿಸಬೇಕು.
- ವೀರಭದ್ರಯ್ಯ, ಗಡಸಹಳ್ಳಿ
ಗಡಸಳ್ಳಿ ಜಂಕ್ಷನ್‌ನಲ್ಲಿ ಕಬ್ಬಾಳು ರಸ್ತೆ ಕಡೆಗೆ ಹೋಗುವ ಮಾರ್ಗ
ಗಡಸಹಳ್ಳಿ ಜಂಕ್ಷನ್‌ಗೆ ಕಬ್ಬಾಳು ಕಡೆಯಿಂದ ಬಂದು ರಸ್ತೆ ದಾಟಿದ ಬಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.