ಚನ್ನಪಟ್ಟಣ: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಗುರುವಾರ ಬೆಳಗ್ಗೆ ನಗರದ ಗಾಂಧಿ ಭವನದ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದ ಗಾಂಧಿವಾದಿ ಕೆಂಗಲ್ ರುದ್ರಯ್ಯ ಎರಡು ತಾಸಿನ ನಂತರ ಉಪವಾಸ ಸತ್ಯಾಗ್ರಹ ವಾಪಸ್ ಪಡೆದರು.
ಶಿಥಿಲಾವಸ್ಥೆ ತಲುಪಿರುವ ನಗರದ ಗಾಂಧಿ ಭವನ ಮರುನಿರ್ಮಾಣ ಹಾಗೂ ರೈತರ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
ಬೆಳಗ್ಗೆ ಉಪವಾಸ ಸತ್ಯಾಗ್ರಹ ಆರಂಭಿಸಿದ ನಂತರ ಹಿರಿಯ ನಾಗರೀಕರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಬೆಂಬಲ ನೀಡಿದರು. ಎರಡು ತಾಸಿನ ನಂತರ ಶಾಸಕ ಸಿ.ಪಿ. ಯೋಗೇಶ್ವರ್ ದೂರವಾಣಿಯಲ್ಲಿ ರುದ್ರಯ್ಯ ಅವರ ಜೊತೆ ಮಾತನಾಡಿ ಎಲ್ಲ ಸಮಸ್ಯೆಗಳನ್ನೂ ಪರಿಹರಿಸಲಾಗುವುದು. ಒಂದು ತಿಂಗಳು ಸಮಯ ಕೊಡಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹ ವಾಪಸ್ ಪಡೆದರು.
ಸ್ಥಳಕ್ಕೆ ಬಂದ ತಹಶೀಲ್ದಾರ್ ಬಿ.ಎನ್. ಗಿರೀಶ್ ಅವರು ರುದ್ರಯ್ಯ ಅವರಿಗೆ ತಂಪು ಪಾನೀಯ ಕುಡಿಸಿ ಸತ್ಯಾಗ್ರಹ ಅಂತ್ಯಗೊಳಿಸಿದರು.
ತಹಶೀಲ್ದಾರ್, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ರುದ್ರಯ್ಯ ಹಾಗೂ ಇತರರು ಅಹವಾಲು ನೀಡಿದರು. ಕಾಡಾನೆ ದಾಳಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ರೈತರ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಆಗ್ರಹಿಸಿದರು. ಇದಕ್ಕೆ ಅಧಿಕಾರಿಗಳು ಸಹ ಒಪ್ಪಿಗೆ ಸೂಚಿಸಿದರು.
ಪತ್ರಕರ್ತ ಸು.ತ.ರಾಮೇಗೌಡ, ರೈತ ಸಂಘದ ಸಿ.ಪುಟ್ಟಸ್ವಾಮಿ, ಕೆ.ಮಲ್ಲಯ್ಯ, ಅನಸೂಯಮ್ಮ, ಕೃಷ್ಣಯ್ಯ, ನಾಗವಾರ ಶಂಭೂಗೌಡ, ಗೋ.ರಾ. ಶ್ರೀನಿವಾಸ್, ನಿರ್ಮಲ, ಬಿ.ಟಿ.ನಾಗೇಶ್, ಚಕ್ಕೆರೆ ಯೋಗೇಶ್, ಗೋವಿಂದಯ್ಯ, ದೊಡ್ಡೇಗೌಡ, ವಸಂತಕುಮಾರ್, ಕಾಡಯ್ಯ, ಡಿಪಿಎಸ್ ಪುಟ್ಟಸ್ವಾಮಿಗೌಡ, ವಿ.ಬಿ.ಚಂದ್ರು, ಚನ್ನಪ್ಪ, ಕೂರಣಗೆರೆ ಕೃಷ್ಣಪ್ಪ, ಬೆಸ್ಕಾಂ ಶಿವಲಿಂಗಯ್ಯ, ಕರಿಯಪ್ಪ, ವಿಜಯ್ ಕುಮಾರ್, ಶಿವಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.