ರಾಮನಗರದ ಬಿ.ಎಂ. ರಸ್ತೆ ಬದಿ ಮಾರಾಟಕ್ಕಿಟ್ಟಿದ್ದ ವೈವಿಧ್ಯಮಯ ಗಣೇಶ ಮೂರ್ತಿಗಳು
ರಾಮನಗರ: ಗಣೇಶ ಚತುರ್ಥಿ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಪ್ರಮುಖ ರಸ್ತೆಗಳಲ್ಲಿ ಮಾರಾಟಕ್ಕೆ ಇಟ್ಟಿರುವ ವೈವಿಧ್ಯಮಯ ಗಣೇಶ ಮತ್ತು ಗೌರಿ ಮೂರ್ತಿಗಳು ಗಮನ ಸೆಳೆಯುತ್ತಿವೆ. ಹಬ್ಬದ ತಯಾರಿ ನಿಧಾನವಾಗಿ ಎಲ್ಲೆಡೆ ಆವರಿಸುತ್ತಿದೆ. ಮೂರ್ತಿ ಪ್ರತಿಷ್ಠಾಪಿಸಲು ಮೂರ್ತಿಗಳ ಖರೀದಿ ಜೊತೆಗೆ ಬೀದಿಗಳಲ್ಲಿ ಮಕ್ಕಳಿಂದ ಹಬ್ಬದ ಕಲೆಕ್ಷನ್ ಸಹ ಶುರುವಾಗಿದೆ.
ಅಯೋಧ್ಯೆ ಗಣೇಶ, ಶಿವ ಗಣಪ, ಲಾಲ್‌ಬಾಗ್ ಗಣೇಶ, ದರ್ಬಾರ್ ಗಣೇಶ, ಪಾಟೀಲ್ ಗಣೇಶ, ಪೇಪರ್ ಗಣೇಶ, ಆರ್‌ಸಿಬಿ ಗಣೇಶ, ಮೂಷಿಕ ವಾಹನಾರೂಢ ಗಣೇಶ, ಹಂಸಾರೂಢ ಗಣೇಶ, ಸಿಂಹಾರೂಢ ಗಣೇಶ ಸೇರಿದಂತೆ ಕಣ್ಣು ಕೋರೈಸುವಂತಹ ಬಗೆ ಬಗೆಯ ಗಣೇಶ ಮೂರ್ತಿಗಳು ನೋಡುಗರ ಮನ ಸೂರೆಗೊಳ್ಳುತ್ತಿವೆ. ಬಿ.ಎಂ. ರಸ್ತೆ, ಮುಖ್ಯ ರಸ್ತೆ, ಹಳೆ ಬಸ್ ನಿಲ್ದಾಣ ವೃತ್ತ ಸೇರಿದಂತೆ ವಿವಿಧೆಡೆ ಮೂರ್ತಿಗಳು ರಾರಾಜಿಸುತ್ತಿವೆ.
ಮನೆಗಳಲ್ಲಿ ಮೂರ್ತಿಗಳನ್ನು ಕೂರಿಸುವವರು ಹಾಗೂ ಬೀದಿಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮಂಡಳಿಯವರು, ಮುಂಚೆಯೇ ತಮಗೆ ಬೇಕಾದ ಆಕಾರದ ಮೂರ್ತಿಯನ್ನು ಬುಕ್ಕಿಂಗ್ ಮಾಡಿ ಗಣೇಶ ಚತುರ್ಥಿಯಂದು ತಂದು ಪ್ರತಿಷ್ಠಾಪಿಸುತ್ತಾರೆ. ಕೆಲವರು ಹೊಸದಾಗಿ ಬಂದಿರುವ ಡಿಸೈನ್‌ಗಳ ಮೊರೆ ಹೋದರೆ, ಉಳಿದವರು ಸಾಂಪ್ರದಾಯಿಕವಾಗಿ ಕೂರಿಸಿಕೊಂಡು ಬಂದಿದ್ದ ಮೂರ್ತಿಗಳನ್ನು ಖರೀದಿಸಿ ಭಕ್ತಿ ಮೆರೆಯುತ್ತಾರೆ.
ಪಿಒಪಿ ಮೂರ್ತಿ ಆತಂಕ: ಪ್ರತಿ ಸಲ ಹಬ್ಬ ಬಂದಾಗಲೂ ಮಣ್ಣಿನಲ್ಲಿ ಸುಲಭವಾಗಿ ಕರಗಬಲ್ಲ ಪರಿಸರ ಸ್ನೇಹಿ ಮೂರ್ತಿಗಳನ್ನೇ ಮನೆ ಹಾಗೂ ಬೀದಿಗಳಲ್ಲಿ ಪ್ರತಿಷ್ಠಾಪಿಸಬೇಕು ಎಂಬ ಕೂಗು ಇದ್ದೇ ಇದೆ. ಸರ್ಕಾರ ಸಹ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ (ಪಿಒಪಿ) ತಯಾರಿಸಿದ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ ಹಾಗೂ ಯಾವುದೇ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಿದೆ. ಇಷ್ಟಾದರೂ ಪಿಒಪಿ ಮೂರ್ತಿಗಳನ್ನು ಕದ್ದು ಮಾರಾಟ ಮಾಡುವುದು ಮಾತ್ರ ನಿಂತಿಲ್ಲ.
‘ಮುಂಚೆ ಪಿಒಪಿ ಮೂರ್ತಿಗೆ ಅವಕಾಶವಿದ್ದಾಗ ಸ್ಥಳೀಯವಾಗಿಯೇ ತಯಾರಿಸಲಾಗುತ್ತಿತ್ತು. ಪರಿಸರಕ್ಕೆ ಮಾರಕವಾದ ಮೂರ್ತಿಗಳನ್ನು ನಿಷೇಧಿಸಿದ ಬಳಿಕ ಸ್ಥಳೀಯವಾಗಿ ಯಾರೂ ತಯಾರಿಸುತ್ತಿಲ್ಲ. ಪಾರಂಪರಿಕವಾಗಿ ಮಣ್ಣಿನ ಮೂರ್ತಿಗಳನ್ನು ತಯಾರಿಸುವ ಸಮುದಾಯದವರಿಗೆ ಇದು ಒಂದು ರೀತಿಯಲ್ಲಿ ವರವಾಗಿದೆ’ ಎಂದು ಹಾರೋಹಳ್ಳಿಯ ಗಣೇಶ ಮೂರ್ತಿ ತಯಾರಕ ರವಿವರ್ಮ ‘ಪ್ರಜಾವಾಣಿ’ಗೆ ತಿಳಿಸಿದರು.
ಕಣ್ತಪ್ಪಿಸಿ ತರುತ್ತಾರೆ: ‘ಕಠಿಣ ನಿಯಮಗಳಿದ್ದರೂ ಕಣ್ತಪ್ಪಿಸಿ ಪಿಒಪಿ ಮೂರ್ತಿಗಳನ್ನು ಹೊರರಾಜ್ಯಗಳಲ್ಲಿ ತಯಾರಿಸಿ ಮಾರಾಟ ಮಾಡುವ ಜಾಲ ಯಾವಾಗಲೂ ಸಕ್ರಿಯವಾಗಿರುತ್ತದೆ. ಈ ಸಲ ತಮಿಳುನಾಡಿನ ಹೊಸೂರಿನಲ್ಲಿ ಪಿಒಪಿ ಮೂರ್ತಿಗಳನ್ನು ತಯಾರಿಸಿ, ತಿಂಗಳು ಮುಂಚೆಯೇ ಹಲವೆಡೆ ತಂದು ಸಂಗ್ರಹಿಸಿ ಇಟ್ಟುಕೊಂಡು ಮಾರುತ್ತಾರೆ’ ಎಂದು ದೂರಿದರು.
‘ಸಾರ್ವಜನಿಕರ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲು ಖರೀದಿಸುವ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದಕ್ಕೆ ಮುಂಚೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮಣ್ಣಿನ ಮೂರ್ತಿಯೊ ಅಥವಾ ಪಿಒಪಿ ಮೂರ್ತಿಯೊ ಎಂಬುದನ್ನು ಪರಿಶೀಲನೆ ನಡೆಸಬೇಕು. ಬಳಿಕ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು. ಆಗ ಮಾತ್ರ, ಪಿಒಪಿ ಮೂರ್ತಿಗಳಿಗೆ ಕಡಿವಾಣ ಬೀಳಲಿದೆ’ ಎಂದು ಒತ್ತಾಯಿಸಿದರು.
₹150ರಿಂದ ₹50 ಸಾವಿರ ಬೆಲೆ
ಗಣಪತಿ ಮೂರ್ತಿಗಳ ದರವನ್ನು ಅವುಗಳ ಗಾತ್ರ, ಎತ್ತರ ಹಾಗೂ ಆಕಾರಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿದೆ. ಈ ಸಲ ಮನೆಯಲ್ಲೇ ಕೂರಿಸಬಹುದಾದ ಅತೀ ಸಣ್ಣದಾದ ಗಣೇಶ ಮೂರ್ತಿಗಳು ದರ ಕನಿಷ್ಠ ₹150ರಿಂದ ಶುರುವಾಗಿ, ದೊಡ್ಡ ಗಾತ್ರದ 10ರಿಂದ 15 ಅಡಿಗಳವರೆಗಿನ ಮೂರ್ತಿಗಳ ದರವು ₹50 ಸಾವಿರ ದಾಟಿದೆ. ಗಣಪತಿ ಮೂರ್ತಿಗಳ ವಿನ್ಯಾಸ ಹಾಗೂ ಎತ್ತರಕ್ಕೆ ಅನುಗುಣವಾಗಿ ದರ ಇದೆ. ಕೆಲವರು ಈಗಾಗಲೇ ಮುಂಗಡ ಹಣ ನೀಡಿ ಮೂರ್ತಿಗಳಿಗೆ ಆರ್ಡರ್ ಮಾಡಿದ್ದರೆ, ಕೆಲವರು ಆಕರ್ಷಕ ವಿನ್ಯಾಸ ನೋಡಿ ಖರೀದಿಸುತ್ತಾರೆ ಎನ್ನುತ್ತಾರೆ ಗಣೇಶ ಮೂರ್ತಿ ವ್ಯಾಪಾರಿಗಳು.
ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ
ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತಗೊಂಡ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ (ಪಿಒಪಿ) ತಯಾರಿಸಿದ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ ಹಾಗೂ ಯಾವುದೇ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ನಗರಸಭೆಯು, ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಇಚ್ಚಿಸುವವರು ಸಂಬಂಧಿಸಿದ ಎಲ್ಲಾ ಇಲಾಖೆಗಳಿಂದ (ಸ್ಥಳೀಯ ಸಂಸ್ಥೆ, ಪೋಲೀಸ್, ಬೆಸ್ಕಾಂ) ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಸೂಚಿಸಿದೆ.
ಪೆಂಡಾಲುಗಳಲ್ಲಿ ಅಲಂಕಾರಿಕ ಪ್ಲಾಸ್ಟಿಕ್‌ಗಳ ಬಳಕೆ ಸೇರಿದಂತೆ ಎಲ್ಲಾ ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವಂತಿಲ್ಲ. ಗಣೇಶ ಮೂರ್ತಿ ವಿಸರ್ಜನೆಗಾಗಿ ರಂಗರಾಯರದೊಡ್ಡಿ ಕೆರೆ ಆವರಣದ ಸಿರಿ ಗೌರಿ ಕಲ್ಯಾಣಿಯಲ್ಲಿ ಸ್ಥಳ ನಿಗದಿಪಡಿಸಲಾಗಿದೆ. ಟ್ರಾಕ್ಟರ್‌ನಲ್ಲಿ ನೀರಿನ ಟ್ಯಾಂಕರ್ ಅಳವಡಿಸಿ ಗೌರಿ ಗಣೇಶ ಮೂರ್ತಿಗಳನ್ನು ಮನೆಗಳಿಂದಲೇ ವಿಸರ್ಜಿಸುವ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ನಗರಸಭೆ ತಿಳಿಸಿದೆ.
ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶ ಮೂರ್ತಿ ನಿಷೇಧಿಸಲಾಗಿದೆ. ಅಂತಹ ಮೂರ್ತಿಗಳು ಕಂಡುಬಂದರೆ ಸಾರ್ವಜನಿಕರು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಥವಾ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಬೇಕುಸಿ.ಆರ್. ಮಂಜುನಾಥ್, ಪ್ರಾದೇಶಿಕ ಅಧಿಕಾರಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ದಕ್ಷಿಣ ಜಿಲ್ಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.