ADVERTISEMENT

ಗಣೇಶ ಉತ್ಸವ: ಆರ್‌ಸಿಬಿ ಕಪ್ ಹಿಡಿದ ಗಣಪ....

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 2:04 IST
Last Updated 13 ಆಗಸ್ಟ್ 2025, 2:04 IST
<div class="paragraphs"><p>ವಿಜಯಪುರ ಪಟ್ಟಣದಲ್ಲಿ ಗಣೇಶ ಚತುರ್ಥಿಗೆ ಕಲಾವಿದ ರಾಜಗೋಪಾಲ್ ಕುಟುಂಬ ತಯಾರಿಸಿರುವ ಪರಿಸರಸ್ನೇಹಿ ಗಣಪ ಮೂರ್ತಿಗಳು</p></div>

ವಿಜಯಪುರ ಪಟ್ಟಣದಲ್ಲಿ ಗಣೇಶ ಚತುರ್ಥಿಗೆ ಕಲಾವಿದ ರಾಜಗೋಪಾಲ್ ಕುಟುಂಬ ತಯಾರಿಸಿರುವ ಪರಿಸರಸ್ನೇಹಿ ಗಣಪ ಮೂರ್ತಿಗಳು

   

ವಿಜಯಪುರ (ದೇವನಹಳ್ಳಿ): ಗಣೇಶ ಉತ್ಸವಕ್ಕೆ ಇನ್ನೂ 15 ದಿನಗಳಷ್ಟೇ ಬಾಕಿ ಇದೆ. ವಿಜಯಪುರ ಪಟ್ಟಣದಲ್ಲಿ ವಿಘ್ನ ನಿವಾರಕ ಗಣಪನ ಮೂರ್ತಿಗಳನ್ನು ಸಿದ್ಧಪಡಿಸಲು ಕಲಾವಿದರು ಹಗಲು–ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ. 

ವಿಜಯಪುರ ಪಟ್ಟಣದಿಂದ ಚನ್ನರಾಯಪಟ್ಟಣದ ಕಡೆಗೆ ಹೋಗುವ ರಸ್ತೆಯ ಎಡ ತಿರುವಿನಲ್ಲಿ ದೊಡ್ಡದಾದ ಗೋದಾಮು ಇದೆ. ಗೋದಾಮಿನಲ್ಲಿ ಗಣೇಶ ಮೂರ್ತಿ ತಯಾರಕ ರಾಜಗೋಪ್ ಅವರ ಕುಟುಂಬದ ನಾಲ್ವರು ಸದಸ್ಯರು ಹಾಗೂ ಇತರ ನಾಲ್ವರು ಕೂಲಿ ಕಾರ್ಮಿಕರು ಸೇರಿ ಒಟ್ಟಾರೆ ಎಂಟು ಮಂದಿ ಕಳೆದ ಎಂಟು ತಿಂಗಳಿನಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. 

ADVERTISEMENT

ತಂಡದ ವಿಶೇಷ: ಸ್ಥಳೀಯವಾಗಿ ಸಿಗುವ ಜೇಡಿಮಣ್ಣು ಹಾಗೂ ತೆಂಗಿನ ನಾರು, ಭತ್ತದ ಹುಲ್ಲು ಬಳಸಿ ‘ಪರಿಸರ ಸ್ನೇಹಿ’ ಮಣ್ಣಿನ ಮೂರ್ತಿಗಳನ್ನು ತಯಾರಿಸುವುದು ರಾಜಗೋಪಾಲ್ ಅವರ ತಂಡದ ವಿಶೇಷ. ಪರಿಸರದ ಬಗ್ಗೆ ಅತೀವ ಕಾಳಜಿ ಹೊಂದಿರುವ ಈ ಕಲಾವಿದರು ಜಲಮಾಲಿನ್ಯವಾಗಲಿ ಅಥವಾ ಜಲಚರಗಳಿಗೆ ತೊಂದರೆ ಉಂಟು ಮಾಡದಂತಹ ಪಂಚೆ, ಶಲ್ಯಗಳನ್ನು ಬಳಸಿ ಮೂರ್ತಿಗಳನ್ನು ಅಲಂಕರಿಸುತ್ತಾರೆ.

ಸಿದ್ಧಗೊಂಡ 200ಕ್ಕೂ ಅಧಿಕ ಮೂರ್ತಿಗಳು: ಪ್ರತಿ ವರ್ಷದಂತೆ ಈ ಬಾರಿಯೂ ಕೃಷ್ಣ ಗಣಪ ದರ್ಬಾರ್, ಸಿಂಹಾರೂಢ, ಗಜವಾಹನ, ಅಂಜನೇಯ, ನಾಗರಹಾವು, ಮಯೂರ ವಾಹನ, ಕಮಲಾರೂಢ, ನೃತ್ಯಪಟು, ವೀಣಾ, ಹಸು, ಮರದ ಕೊಂಬೆ, ಇಲಿಯ ಮೇಲೆ ಕುಳಿತ ಗಣಪ, ರಥ ಚಲಾಯಿಸುತ್ತಿರುವ ಗಣಪ, ಅಯ್ಯಪ್ಪಸ್ವಾಮಿ, ಶಿವಾಜಿ  ಹೀಗೆ 90ಕ್ಕೂ ಅಧಿಕ ಬಗೆಯಲ್ಲಿ ಕುಳಿತಿರುವ ಮೂರ್ತಿಗಳನ್ನು ಸಿದ್ಧಪಡಿಸಲಾಗಿದೆ.

ಬುಕ್ಕಿಂಗ್‌ಗೆ ಅವಕಾಶ: ಗಣೇಶ ಚತುರ್ಥಿಗೆ ಆಕರ್ಷಕ ಮೂರ್ತಿ ಪ್ರತಿಷ್ಠಾಪಿಸಲು ಯುವಕರ ಗುಂಪುಗಳ ನಡುವೆ ಭಾರಿ ಪೈಪೋಟಿ ಇರುತ್ತದೆ. ಹಲವರು ಮುಂಚಿತವಾಗಿ ಬಂದು ಇಷ್ಟದ ಮೂರ್ತಿಗಳಿಗೆ ಬುಕ್ಕಿಂಗ್ ಮಾಡಿದ್ದಾರೆ.

ಮೂರು ಅಡಿಯಿಂದ 9 ಅಡಿವರೆಗೆ ವಿವಿಧ ಭಂಗಿಯ ಗಣಪ ಮೂರ್ತಿಗಳನ್ನು ತಯಾರಿಸಿದ್ದೇವೆ. ಮೂರ್ತಿಯ ಗಾತ್ರದ ಆಧಾರದ ಮೇಲೆ ಸುಮಾರು ₹1,000–30,0000ರವರೆಗೆ ಮೌಲ್ಯದ ಮೂರ್ತಿಗಳಿವೆ. ಗ್ರಾಹಕರು ಇಂತಹದೇ ವಿನ್ಯಾಸದ ಮೂರ್ತಿ ಬೇಕು ಎಂದು ಕೇಳಿದರೆ, ಅಂಥ ಮೂರ್ತಿಗಳನ್ನು ತಯಾರಿಸುತ್ತೇವೆ ಎಂದು ಮೂರ್ತಿ ತಯಾರಕ ರಾಜಗೋಪಾಲ್ ತಿಳಿಸುತ್ತಾರೆ. 

ಆರ್‌ಸಿಬಿ ಕಪ್ ಹಿಡಿದ ಗಣಪ 

ಪಿಒಪಿ ಗಣೇಶ ನಿಷೇಧ
ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ರಾಸಾಯನಿಕಗಳಿಂದ ತಯಾರಿಸುವ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಇದರಿಂದ ಪರಿಸರಸ್ನೇಹಿ ಗಣಪ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನು ಅರಿತಿರುವ ಕಲಾವಿದರು 8 ತಿಂಗಳಿನಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿವರ್ಷ ಗಣೇಶ ಹಬ್ಬಕ್ಕೆ ಪರಿಸರಸ್ನೇಹಿ ಗಣಪ ಮೂರ್ತಿ ತಯಾರಿಸುತ್ತೇವೆ. ಮಣ್ಣಿನ ಗಣಪಗಳಿಗೆ ಬೇಡಿಕೆ ಇರುವುದರಿಂದ ಈ ಬಾರಿ 200ಕ್ಕೂ ಹೆಚ್ಚು ಮೂರ್ತಿಗಳನ್ನು ಸಿದ್ಧಪಡಿಸಿದ್ದೇವೆ. ಇದಕ್ಕಾಗಿ ಹೆಚ್ಚು ಬಂಡವಾಳ ಹೂಡಿದ್ದೇವೆ ಎಂದು ಮೂರ್ತಿ ತಯಾರಕ ರಾಜಗೋಪಾಲ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.