ADVERTISEMENT

ರಾಮನಗರ: ದೊಡ್ಡ ಗಣೇಶ ಮೂರ್ತಿಗೆ ಸಂಭ್ರಮದ ವಿದಾಯ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 2:14 IST
Last Updated 15 ಸೆಪ್ಟೆಂಬರ್ 2025, 2:14 IST
ರಾಮನಗರದ ಮುಖ್ಯರಸ್ತೆಯಲ್ಲಿ ಪ್ರತಿಷ್ಠಾಪಿದ್ದ ದೊಡ್ಡ ಗಣೇಶ ಮೂರ್ತಿಯನ್ನು ಭಾನುವಾರ ರಂಗರಾಯರದೊಡ್ಡಿ ಕೆರೆಯಲ್ಲಿ ಕ್ರೇನ್ ಮೂಲಕ ವಿಸರ್ಜಿಸಲಾಯಿತು
ರಾಮನಗರದ ಮುಖ್ಯರಸ್ತೆಯಲ್ಲಿ ಪ್ರತಿಷ್ಠಾಪಿದ್ದ ದೊಡ್ಡ ಗಣೇಶ ಮೂರ್ತಿಯನ್ನು ಭಾನುವಾರ ರಂಗರಾಯರದೊಡ್ಡಿ ಕೆರೆಯಲ್ಲಿ ಕ್ರೇನ್ ಮೂಲಕ ವಿಸರ್ಜಿಸಲಾಯಿತು   

ರಾಮನಗರ: ನಗರದ ಮುಖ್ಯರಸ್ತೆಯಲ್ಲಿ ಮತ್ತು ಎಂ.ಜಿ. ರಸ್ತೆಯಲ್ಲಿ ಪ್ರತಿಷ್ಠಾಪಿದ್ದ ಗಣೇಶ ಮೂರ್ತಿಗಳನ್ನು ಭಾನುವಾರ ನಗರದ ಹೊರವಲಯದ ರಂಗರಾಯರದೊಡ್ಡಿ ಕೆರೆಯಲ್ಲಿ ವಿಸರ್ಜಿಸಲಾಯಿತು. ವಿದ್ಯಾ ಗಣಪತಿ ಸೇವಾ ಸಂಘವು ಪ್ರತಿಷ್ಠಾಪಿಸುವ ಈ ಗಣೇಶ ಮೂರ್ತಿಯು, ನಗರದ ದೊಡ್ಡ ಗಣೇಶ ಮೂರ್ತಿ ಎಂದೇ ಪ್ರಸಿದ್ದಿಯಾಗಿದೆ.

ವಿಸರ್ಜನೆಗೆ ಮುಂಚೆ ಮುಖ್ಯರಸ್ತೆಯಲ್ಲಿನ ಆಸ್ಥಾನ ಮಂಟಪದಿಂದ ಹೊರಟ ಮೂರ್ತಿಯ ಮೆರವಣಿಗೆಯು ಛತ್ರದ ಬೀದಿ, ಮಂಡಿಪೇಟೆ, ಬಾಲಗೇರಿ, ಅಗ್ರಹಾರ, ಎಂ.ಜಿ. ರಸ್ತೆ, ಕಾಯಿಸೊಪ್ಪಿನಬೀದಿ, ನಗರಸಭೆ ರಸ್ತೆ, ಶೆಟ್ಟಹಳ್ಳಿ ಬೀದಿ, ಕಾಮನಗುಡಿ ಸರ್ಕಲ್, ಹಳೇ ಬಸ್ ನಿಲ್ದಾಣ, ಮಾಗಡಿ ರಸ್ತೆ ಮತ್ತು ಐಜೂರಿನ ಮಲ್ಲೇಶ್ವರ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂತಿಮವಾಗಿ ರಂಗರರಾಯರ ದೊಡ್ಡಿ ಕೆರೆ ತಲುಪಿತು.

ಜಾನಪದ ಕಲಾ ತಂಡಗಳಾದ ಪೂಜಾ ಕುಣಿತ, ವೀರಗಾಸೆ, ಗಾರುಡಿ, ಚಿಲಿಪಿಲಿ ಗೊಂಬೆ, ಕೇರಳದ ಚಂಡೆ, ತಮಟೆ ಕಲಾವಿದರ ಜನಪದ ಕಲಾ ಮೇಳಗಳು ಹಾಗೂ ಡಿ.ಜೆ ಸೌಂಡ್ ಸಹ ಮೆರವಣಿಗೆಗೆ ಮತ್ತಷ್ಟು ಮೆರಗು ತಂದಿತು. ಯುವಜನರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು.

ADVERTISEMENT

ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಗೆ ಶನಿವಾರ ರಾತ್ರಿ 10 ಗಂಟೆಗೆ ಮುಖ್ಯರಸ್ತೆಯ ದೊಡ್ಡ ಗಣೇಶ ಮೆರವಣಿಗೆಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ನಗರಸಭೆ ಅಧ್ಯಕ್ಷ ಕೆ. ಶೆಷಾದ್ರಿ ಶಶಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಸನ ರಘು, ಸಮಾಜ ಸೇವಕರಾದ ನಾಗಲಾಪುರ ಚಿಕ್ಕಸ್ವಾಮಿ, ಜನತಾ ನಾಗೇಶ್, ರಾಮಚಂದ್ರು, ಪೌರ ಕಾರ್ಮಿಕರು, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚು
ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾಗಣಪತಿ ಸೇವಾ ಸಂಘದಿಂದ ಸನ್ಮಾನಿಸಲಾಯಿತು.

ರಾಮನಗರದ ಮುಖ್ಯರಸ್ತೆಯಲ್ಲಿ ಪ್ರತಿಷ್ಠಾಪಿದ್ದ ದೊಡ್ಡ ಗಣೇಶ ಮೂರ್ತಿ ವಿಸರ್ಜನೆಗೆ ಮುನ್ನ ಶನಿವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹಾಗೂ ಇತರರು ಇದ್ದಾರೆ

ವಾಗ್ವಾದ: ಮೆರವಣಿಗೆ ಸಂದರ್ಭದಲ್ಲಿ ಡಿ.ಜೆ ಸೌಂಡ್‌ ಬಳಸಲಾಯಿತು. ಆಗ ಪೊಲೀಸರು ಸೌಂಡ್ ಆಫ್ ಮಾಡುವಂತೆ ಸೂಚಿಸಿದರು. ಆಗ ಆಯೋಜಕರು ಮತ್ತು ಪೊಲೀಸರ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು. ರಾಜ್ಯದಾದ್ಯಂತ ಡಿ.ಜೆ ಬಳಕೆಯನ್ನು ನಿರ್ಬಂಧಿಸಲಾಗಿದ್ದು, ಹಾಗೆಯೇ ಮೆರವಣಿಗೆ ನಡೆಸುವಂತೆ ಪೊಲೀಸರು ಮನವೊಲಿಸಲು ಪ್ರಯತ್ನಿಸಿದರು.

ಆದರೆ, ಆಯೋಜಕರು ಪಟ್ಟು ಸಡಿಲಿಸಲಿಲ್ಲ. ಕಡೆಗೆ ಪೊಲೀಸರು, ಕಡಿಮೆ ಶಬ್ದ ಬಳಸುವಂತೆ ಸೂಚಿಸಿ ಮೆರವಣಿಗೆಗೆ ಅವಕಾಶ ಕೊಟ್ಟರು. ಅಲ್ಲದೆ, ಮೆರವಣಿಗೆಯುದ್ದಕ್ಕೂ ಬಿಗಿ ಬಂದೋಬಸ್ತ್ ಮಾಡಿ, ಅಹಿತಕರ ಘಟನೆಗೆ ಅವಕಾಶವಿಲ್ಲದಂತೆ ಮುನ್ನೆಚ್ಚರಿಕೆ ವಹಿಸಿದರು.

ಗಮನ ಸೆಳೆದ ದೊಡ್ಡ ಗಣೇಶ ಮೂರ್ತಿಯ ಮೆರವಣಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.