ADVERTISEMENT

ಗಣೇಶ ಪ್ರತಿಷ್ಠಾಪನೆ ಸಂಭ್ರಮ

ಮನೆಗಳಲ್ಲೂ ಮೂರ್ತಿ ಪೂಜೆ: ಇಂದು ವಿಸರ್ಜನೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 5:07 IST
Last Updated 12 ಸೆಪ್ಟೆಂಬರ್ 2021, 5:07 IST
ಛತ್ರದ ಬೀದಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ನೀಲಗಣಪತಿ
ಛತ್ರದ ಬೀದಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ನೀಲಗಣಪತಿ   

ರಾಮನಗರ: ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ವಿವಿಧೆಡೆ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಗಮನ ಸೆಳೆಯುವಂತೆ ಇವೆ.

ಜಿಲ್ಲೆಯಾದ್ಯಂತ ಶುಕ್ರವಾರ ಸಂಭ್ರಮದಿಂದ ಗಣೇಶ ಹಬ್ಬವನ್ನು ಆಚರಿಸಲಾಯಿತು. ಗಣೇಶ ಚೌತಿ ಪ್ರಯುಕ್ತ ಜಿಲ್ಲೆಯ ದೇವಾಲಯಗಳಲ್ಲಿ ಶುಕ್ರವಾರ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ‘ಎ’ ದರ್ಜೆ ದೇವಾಲಯಗಳ ಪೈಕಿ ಕೆಲವು ಬಾಗಿಲು ಹಾಕಿದ್ದವು. ಇನ್ನೂ ಕೆಲವು ದೇಗುಲಗಳಲ್ಲಿ ದೇವರ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಕೊರೊನಾ ನಡುವೆಯೂ ಜಿಲ್ಲೆಯ ಮನೆಗಳಲ್ಲಿ ಗಣೇಶೋತ್ಸವ ಸಂಭ್ರಮ ಮನೆ ಮಾಡಿತ್ತು. ಕೆಲವರು ಮನೆಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದರು. ಈ ವೇಳೆ ವಿವಿಧ ಭಕ್ಷ್ಯಗಳನ್ನು ನೈವೇದ್ಯ ಮಾಡಿ ಗಣಪನಿಗೆ ಅರ್ಪಿಸಿ, ಇಷ್ಟಾರ್ಥ ಸಿದ್ಧಿಸುವಂತೆ ಸಿದ್ಧಿ ವಿನಾಯಕನನ್ನು ಬೇಡಿದರು. ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಗಳನ್ನು ಸಂಜೆಯೇ ವಿಸರ್ಜನೆ ಮಾಡಲಾಯಿತು.

ADVERTISEMENT

ಸರ್ಕಾರ ಗರಿಷ್ಠ 4 ಅಡಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕೆಂಬ ಆದೇಶ ಹೊರಡಿಸಿದ್ದ ಕಾರಣ, ಸಣ್ಣ ಮೂರ್ತಿಗಳಿಗೆ ಬೇಡಿಕೆ ಬಂದಿತ್ತು. ಸಾರ್ವಜನಿಕ ಗಣೇಶೋತ್ಸವ 4 ಅಡಿ ಎತ್ತರದ ಮೂರ್ತಿಗಳಿಗೆ ಮಾತ್ರ ಸೀಮಿತವಾಗಿತ್ತು. ಸರ್ಕಾರದ ಕೋವಿಡ್‌ ನಿಯಮಾವಳಿಗಳ ಹಿನ್ನೆಲೆಯಲ್ಲಿ ಗಣೇಶ ಹಬ್ಬ ಹಿಂದಿನಷ್ಟು ಅಬ್ಬರ ಇಲ್ಲದಿದ್ದರೂ ಅರ್ಥಪೂರ್ಣ ಆಚರಣೆಗೆ ಸಮಿತಿಗಳು ಮುಂದಾಗಿವೆ. ಚಿಕ್ಕಚೊಕ್ಕ ಮೂರ್ತಿಗಳನ್ನು ಸರಳ ರೀತಿಯಲ್ಲಿ ಉತ್ಸವವನ್ನು
ಆಚರಿಸಲಾಗುತ್ತಿದೆ.

ಜಿಲ್ಲಾಡಳಿತವು ಹಬ್ಬ ಆಚರಣೆಯನ್ನು ಐದು ದಿನಕ್ಕೆ ಸೀಮಿತಗೊಳಿಸಿದೆ. ಮೂರನೇ ದಿನವಾದ ಭಾನುವಾರವೂ ವಿವಿಧೆಡೆ ಮೂರ್ತಿಗಳ ವಿಸರ್ಜನೆಗೆ ಸಿದ್ಧತೆ ನಡೆದಿದೆ.

ವಿದೇಶದಲ್ಲೂ ಆಚರಣೆ:ನಾರ್ಥನ್ ಐರ್ಲೆಂಡ್‌ನ ಕ್ವೀನ್ಸ್ ಯೂನಿವರ್ಸಿಟಿಯಲ್ಲಿ ರಾಮನಗರದ ಯುವಕರು ಗಣೇಶ ಹಬ್ಬವನ್ನು ಆಚರಣೆ ಮಾಡಿದ್ದಾರೆ.

ರಾಮನಗರದ ಮಂಜುನಾಥ ನಗರ ನಿವಾಸಿ ಯಧು ಎಂಬ ಯುವಕ ಅಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಅಲ್ಲಿಯೇ ಗಣೇಶನ ಮೂರ್ತಿ ಇಟ್ಟು ಪೂಜೆ ಸಲ್ಲಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವೇಳೆ ಸ್ನೇಹಿತರ ಜೊತೆ ಸೇರಿ ಗಣೇಶನ ಮೂರ್ತಿ ಹೊತ್ತು
ಸಂಭ್ರಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.