
ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಮಾದಕವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಡಿ(ಎನ್‌ಡಿಪಿಎಸ್) ಪೊಲೀಸರು 201 ಪ್ರಕರಣ ದಾಖಲಿಸಿ, 228 ಮಂದಿಯನ್ನು ಬಂಧಿಸಿದ್ದಾರೆ.
ಕಳೆದ 2025ನೇ ವರ್ಷದಲ್ಲಿ 66 ಪ್ರಕರಣಗಳು ದಾಖಲಾಗಿದ್ದು, 67 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಬಹುತೇಕ ಪ್ರಕರಣಗಳು ಗಾಂಜಾ ಮಾರಾಟ ಮತ್ತು ಸಾಗಾಟಕ್ಕೆ ಸಂಬಂಧಿಸಿದ್ದು ಎಂಬುದು ವಿಶೇಷ. ರಾಜಧಾನಿ ಸಮೀಪದಲ್ಲಿರುವ ಜಿಲ್ಲೆಯಲ್ಲಿ ಗಾಂಜಾ ಘಮಲಿನ ಅಮಲು ಹೆಚ್ಚುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.
ಕಳೆದ ವರ್ಷಕ್ಕಿಂತ ಹೆಚ್ಚಳ: 2024ನೇ ವರ್ಷಕ್ಕೆ ಹೋಲಿಸಿದರೆ 2025ರಲ್ಲಿ ದಾಖಲಾಗಿರುವ ಎನ್‌ಡಿಪಿಎಸ್ ಪ್ರಕರಣಗಳ ಸಂಖ್ಯೆ ಅರ್ಧದಷ್ಟು ಹೆಚ್ಚಳ ಕಂಡಿದೆ. 2024ರಲ್ಲಿ 38 ಪ್ರಕರಣಗಳನ್ನು ದಾಖಲಿಸಿ, 38 ಮಂದಿಯನ್ನು ಬಂಧಿಸಲಾಗಿದೆ. ಸುಮಾರು ₹12.65 ಲಕ್ಷ ಮೌಲ್ಯದ 48 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ.
2025ರಲ್ಲಿ ಪ್ರಕರಣಗಳ ಸಂಖ್ಯೆ 66ಕ್ಕೆ ಏರಿಕೆಯಾಗಿದ್ದು, 67 ಮಂದಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸುಮಾರು ₹46.14 ಲಕ್ಷ ಮೌಲ್ಯದ 73 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ಸತತ ಕಾರ್ಯಾಚರಣೆ ನಡುವೆಯೂ ಒಂದು ವರ್ಷದ ಅವಧಿಯಲ್ಲಿ 28 ಪ್ರಕರಣಗಳು ಹೆಚ್ಚಾಗಿವೆ ಎನ್ನುತ್ತವೆ ಪೊಲೀಸ್ ಮೂಲಗಳು.
₹78.75 ಲಕ್ಷ ಮೌಲ್ಯ: ಎನ್‌ಡಿಪಿಎಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂರು ವರ್ಷದಲ್ಲಿ ಸುಮಾರು ₹78.75 ಲಕ್ಷ ಮೌಲ್ಯದ 162 ಕೆ.ಜಿ ಗಾಂಜಾ ಹಾಗೂ ₹2.70 ಲಕ್ಷ ಮೌಲ್ಯದ 43 ಗ್ರಾಂ 31 ಮಿಲಿ ಸಿಂಥೆಟಿಕ್ ಡ್ರಗ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಗಳಲ್ಲಿ ಬಂಧಿತರಾಗಿರುವವರಲ್ಲಿ ಯುವಜನರೇ ಹೆಚ್ಚಾಗಿದ್ದಾರೆ.
2025ರಲ್ಲಿ ಜಿಲ್ಲೆಯಲ್ಲಿ ₹1.33 ಲಕ್ಷ ಮೌಲ್ಯದ 15 ಗ್ರಾಂ 1 ಮಿಲಿ ಸಿಂಥೆಟಿಕ್ ಡ್ರಗ್ ವಶಪಡಿಸಿಕೊಳ್ಳಲಾಗಿದೆ. ಮಾದಕವಸ್ತು ಸೇವನೆ ಮತ್ತು ಮಾರಾಟದ ವಿರುದ್ಧ ಶಾಲಾ–ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಖಚಿತ ಮಾಹಿತಿ ಮೇರೆಗೆ ಗಾಂಜಾ ಮಾರಾಟ ಮತ್ತು ಸಾಗಾಟ ಮಾಡುವವರ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿ ಬಂಧಿಸಲಾಗುತ್ತಿದೆ. ಕಳೆದ ಮೂರು ವರ್ಷದಲ್ಲಿ 10 ಮಂದಿಗೆ ಶಿಕ್ಷೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾದಕವಸ್ತು ಮಾರಾಟ ಮತ್ತು ಸಾಗಾಟ ತಡೆಗಾಗಿ ಎನ್‌ಡಿಪಿಎಸ್ ಹಳೆ ಪ್ರಕರಣಗಳ ಆರೋಪಿಗಳ ಮೇಲೆ ನಿಗಾ ಇಡಲಾಗಿದೆ. ಯುವಜನರು ಸೇರಿದಂತೆ ನಾಗರಿಕರಲ್ಲಿ ಮಾದಕವಸ್ತು ವಿರುದ್ಧ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ.– ಆರ್. ಶ್ರೀನಿವಾಸ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದ್ದ ಪೊಲೀಸರು!
ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಗೇರಿ ಹೋಬಳಿಯ ದೇವಗೆರೆಯಲ್ಲಿರುವ ಆದ್ವಿ ವಿಲ್ಲಾ ಸ್ಟೇ ಮತ್ತು ಆಯಾನ್ ರಿಟ್ರೀಟ್ ಹೋಂ ಸ್ಟೇಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ನ. 2ರಂದು ರಾತ್ರಿ ದಾಳಿ ನಡೆಸಿದ್ದ ಪೊಲೀಸರು ಹೋಂ ಸ್ಟೇ ಮಾಲೀಕ ಮತ್ತು ಆಯೋಜಕ ಸೇರಿದಂತೆ ಪಾರ್ಟಿಯಲ್ಲಿದ್ದ ಸುಮಾರು 90 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಪಾರ್ಟಿಯಲ್ಲಿದ್ದ ಯುವಕ– ಯುವತಿಯರು 19-23 ವರ್ಷದೊಳಗಿನವರಾಗಿದ್ದರು. ಎಲ್ಲರೂ ಬೆಂಗಳೂರಿನವರಾಗಿದ್ದು ಬಹುತೇಕರು ಕಾಲೇಜು ವಿದ್ಯಾರ್ಥಿಗಳಾಗಿದ್ದರು. ಗಾಂಜಾ ಸೇರಿದಂತೆ ಇತರ ನಿಷೇಧಿತ ಮಾದಕವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು ವರದಿಯಾಗಿತ್ತು.
6 ತಿಂಗಳಿಗೊಮ್ಮೆ ಮಾದಕವಸ್ತು ನಾಶ
ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಆರೋಪಿಗಳಿಂದ ವಶಪಡಿಸಿಕೊಳ್ಳುವ ಗಾಂಜಾ ಸೇರಿದಂತೆ ಇತರ ಮಾದಕವಸ್ತುಗಳನ್ನು 6 ತಿಂಗಳಿಗೊಮ್ಮೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಈ ರೀತಿ ನಾಶಪಡಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.