
ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಜಿಬಿಡಿಎ) ತಾಲ್ಲೂಕಿನ ಬಿಡದಿ ಹೋಬಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆ ಪರವಾಗಿರುವ ರೈತರು, ಭೂ ಸ್ವಾಧೀನಕ್ಕೆ ನಿಗದಿಪಡಿಸಿರುವ ಪರಿಹಾರ ದರ ಸ್ವಾಗತಿಸಿ ಹೊಸೂರು ಗ್ರಾಮದ ಸಮುದಾಯ ಭವನದಲ್ಲಿ ಶುಕ್ರವಾರ ಸಭೆ ನಡೆಸಿದರು.
ಯೋಜನೆ ವಿರೋಧಿಸಿರುವ ರೈತರು ಹೋಬಳಿಯ ಭೈರಮಂಗಲದಲ್ಲಿ ಕಳೆದ 70 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಬೆನ್ನಲ್ಲೇ, ಯೋಜನೆ ಪರ ಇರುವ ರೈತರು ಸಹ ಸಭೆ ನಡೆಸಿದರು. ‘ಹೋರಾಟದ ಹೆಸರಿನಲ್ಲಿ ಯೋಜನೆ ಕುರಿತು ಸುಳ್ಳು ಮಾಹಿತಿಯ ಅಪಪ್ರಚಾರ ಮಾಡುತ್ತಾ, ರೈತರ ದಿಕ್ಕು ತಪ್ಪಿಸಿ ಗೊಂದಲ ಸೃಷ್ಟಿಸಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯೋಜನಾ ಪ್ರದೇಶದ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಶಾಸಕ ಎಚ್.ಸಿ. ಬಾಲಕೃಷ್ಣ ಅವರು, ಗರಿಷ್ಠ ಪರಿಹಾರದ ದರ ನಿಗದಿಯಾಗುವಂತೆ ನೋಡಿಕೊಳ್ಳುವ ಮೂಲಕ, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಬಿಡಿಎ ನಿರ್ದೇಶಕಿ ಕಲ್ಯಾಣ ಕುಮಾರಿ ಮಾತನಾಡಿ, ‘ಯೋಜನೆ ಕೈಬಿಡುವಂತೆ ಹೋರಾಟ ನಡೆಸುತ್ತಿರುವವರು, ಗೊಂದಲ ಸೃಷ್ಟಿಸುತ್ತಿದ್ದಾರೆ. ಭೂ ಸ್ವಾಧೀನಕ್ಕೆ ಕಡಿಮೆ ಪರಿಹಾರ ನೀಡುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಪಾಲುದಾರಿಗೆ ಪಡೆದುಕೊಂಡರೆ ನೋಂದಣಿಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಯಾರೂ ಗೊಂದಲಕ್ಕೆ ಒಳಗಾಗಬಾರದು’ ಎಂದು ಮನವಿ ಮಾಡಿದರು.
‘ಯೋಜನೆಗೆ ಭೂ ಕೊಡುವವರಿಗೆ ಎಕರೆಗೆ ಕನಿಷ್ಠ ₹2.07 ಕೋಟಿ ಪರಿಹಾರ ಸಿಗಲಿದೆ. ಪಾಲುದಾರಿಗೆ ಬಯಸುವವರಿಗೆ ವಸತಿ ಉದ್ದೇಶದ ನಿವೇಶನದಲ್ಲಿ 50:50 ಅನುಪಾತದಲ್ಲಿ ಹಾಗೂ ವಾಣಿಜ್ಯ ಉದ್ದೇಶದ ನಿವೇಶನದಲ್ಲಿ 45:55 ಅನುಪಾತದಲ್ಲಿ ಪಾಲುದಾರಿಗೆ ಸಿಗಲಿದೆ. ನೋಂದಣಿ ಶುಲ್ಕವನ್ನು ಪ್ರಾಧಿಕಾರವೇ ಭರಿಸಲಿದೆ. ಯೋಜನಾ ಪ್ರದೇಶದ ಜನರಿಗಾಗಿ ಉದ್ಯೋಗ ಮತ್ತು ಕೌಶಲ ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ಸ್ಥಳೀಯರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಲು ಮೀಸಲಾತಿ ಸಹ ನೀಡಲಾಗುತ್ತಿದೆ’ ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹೊಸೂರು ರಾಜಣ್ಣ ಮಾತನಾಡಿ, ‘ಹಿಂದೆ ಮುಖ್ಯಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಸೇರಿದಂತೆ ಬೆಂಗಳೂರಿನ ಸುತ್ತ 5 ಉಪನಗರಗಳನ್ನು ನಿರ್ಮಿಸುವುದಾಗಿ ಘೋಷಿಸಿದರು. ಆಗ ರೈತರೆಲ್ಲರೂ ಪ್ರತಿಭಟಿಸಿದ್ದೆವು. ಆಗ, ನಮ್ಮ ಸಭೆ ಕರೆದು ಅನುಕೂಲ ಮಾಡಿಕೊಡುವ ಭರವಸೆ ನೀಡಿದ್ದರು. ಡಿಎಲ್‌ಎಫ್ ಸಂಸ್ಥೆಯಿಂದ ಯೋಜನೆಗಾಗಿ ₹300 ಕೋಟಿ ಪಡೆದು ಈ ಭಾಗದ ಜಮೀನನ್ನು ಕೆಂಪು ವಲಯ ಎಂದು ಘೋಷಿಸಿದರು’ ಎಂದು ಹೇಳಿದರು.
‘ತಮ್ಮ ಅವಧಿಯಲ್ಲೇ ಯೋಜನೆ ಅನುಷ್ಠಾನಗೊಳಿಸಲಾಗದ ಕುಮಾರಸ್ವಾಮಿ ಅವರು ನಂತರ ಅಧಿಕಾರ ಕಳೆದುಕೊಂಡರು. ಇಡೀ ಪ್ರದೇಶ ಕೆಂಪು ವಲಯವಾಗಿದ್ದರಿಂದ ರೈತರು ತುಂಬಾ ಸಂಕಷ್ಟ ಅನುಭವಿಸಿದರು. ಅಭಿವೃದ್ಧಿಗೆ ಕೆಲಸಗಳಿಗೆ ಗ್ರಹಣ ಹಿಡಿದಿತ್ತು. ಇದಕ್ಕೆಲ್ಲಾ ಕುಮಾರಸ್ವಾಮಿ ಅವರೇ ಕಾರಣ. ಆ ಗ್ರಹಣವನ್ನು ಡಿ.ಕೆ. ಶಿವಕುಮಾರ್ ಅವರು ಬಿಡಿಸಿ, ಯೋಜನೆಗೆ ಚಾಲನೆ ನೀಡಿದ್ದಾರೆ. ರೈತರನ್ನೂ ಸಹ ಪಾಲುದಾರರನ್ನಾಗಿ ಮಾಡಿಕೊಂಡು, ಉತ್ತಮ ಪರಿಹಾರ ದರದೊಂದಿಗೆ ಅನುಷ್ಠಾನಗೊಳಿಸುತ್ತಿದ್ದಾರೆ. ಇದಕ್ಕೆ ನಮ್ಮ ಬೆಂಬಲವಿದೆ ಎಂದರು.
ಭೈರಮಂಗಲ ವಿಎಸ್‌ಎಸ್‌ಎನ್ ಅಧ್ಯಕ್ಷ ಎಚ್.ಎಸ್. ಸಿದ್ದರಾಜು, ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿಯ ಗೌತಮ್ ಗೌಡ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.