ಸಾವು (ಪ್ರಾತಿನಿಧಿಕ ಚಿತ್ರ)
ಬಿಡದಿ (ರಾಮನಗರ): ಹೋಬಳಿ ವ್ಯಾಪ್ತಿಯ ರೈಲು ಹಳಿ ಬಳಿ ಮೂರು ದಿನದ ಹಿಂದೆ ಅರೆ ನಗ್ನಾವಸ್ಥೆಯಲ್ಲಿ ಪತ್ತೆಯಾದ ಮಾತು ಬಾರದ ಮತ್ತು ಕಿವಿ ಕೇಳದ 15 ವರ್ಷದ ಬಾಲಕಿ ಶವ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ ಬಾಲಕಿ ಕೊಲೆಗೂ ಮುಂಚೆ ಅತ್ಯಾಚಾರ ಎಸಗಲಾಗಿದೆ ಎಂದು ಕುಟುಂಬದವರು ಮತ್ತು ಗ್ರಾಮಸ್ಥರು ಬಲವಾದ ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಬಿಡದಿ ಪೊಲೀಸರು ಎರಡು ದಿನದ ಹಿಂದೆಯೇ ಶವದ ಮರಣೋತ್ತರ ಪರೀಕ್ಷೆ ಮುಗಿಸಿ ಹಸ್ತಾಂತರಿಸಿದರೂ, ಅಂತ್ಯಕ್ರಿಯೆ ನಡೆಸದೆ ಮನೆ ಮುಂದೆಯೇ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು. ಪರೀಕ್ಷೆ ವರದಿ ಬರುವವರೆಗೆ ಶವ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು. ಸಮುದಾಯದ ಕೆಲವರು ಬಾಲಕಿ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನ್ಯಾಯಕ್ಕಾಗಿ ಅಭಿಯಾನ ಆರಂಭಿಸಿದ್ದಾರೆ.
ಮತ್ತೊಂದೆಡೆ ಜಿಲ್ಲಾ ಕೇಂದ್ರ ರಾಮನಗರದಲ್ಲಿ ಸಮುದಾಯದವರು ಪ್ರತಿಭಟನೆ ನಡೆಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಗ್ರಾಮಕ್ಕೆ ಹಾಗೂ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ಪ್ರಕರಣದ ಕಾವು ಹೆಚ್ಚುತ್ತಿದ್ದಂತೆ ಪೊಲೀಸರು, ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಸ್ಥಳೀಯ ನಾಯಕ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್.ನಟರಾಜ್ ನೇತೃತ್ವದಲ್ಲಿ ಕುಟುಂಬದವರ ಮನವೊಲಿಸಿ ಸಂಜೆ 4ರ ಹೊತ್ತಿಗೆ ಅಂತ್ಯಕ್ರಿಯೆ ನಡೆಸಿದರು.
ಡಿಸಿಎಂ ಭೇಟಿ: ವಿಷಯ ತಿಳಿದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗ್ರಾಮಕ್ಕೆ ಬುಧವಾರ ಸಂಜೆ 5.30ಕ್ಕೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ₹4,12,500 ಮೊತ್ತದ ಪರಿಹಾರದ ಚೆಕ್ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಅಂತ್ಯಸಂಸ್ಕಾರಕ್ಕೆ ₹50 ಸಾವಿರದ ಚೆಕ್ ಅನ್ನು ಬಾಲಕಿ ತಾಯಿಗೆ ವಿತರಿಸಿದರು. ಯಾವುದೇ ಒತ್ತಡ ಮತ್ತು ಪ್ರಭಾವಕ್ಕೆ ಮಣಿಯದೆ, ಎಲ್ಲ ಆಯಾಮಗಳಿಂದಲೂ ಪ್ರಕರಣದ ತನಿಖೆ ನಡೆಸಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.