ಅಮಾನತು
ಚನ್ನಪಟ್ಟಣ: ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬರ ತಲೆಕೂದಲು ಕತ್ತರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅತಿಥಿ ಶಿಕ್ಷಕಿಗೆ ಗೇಟ್‌ಪಾಸ್ ನೀಡಿರುವ ಶಿಕ್ಷಣ ಇಲಾಖೆಯು, ಶಾಲೆಯ ಮುಖ್ಯ ಶಿಕ್ಷಕ ಸಂಜೀವ ಕುಮಾರ್ ಅವರನ್ನು ಸಹ ಅಮಾನತು ಮಾಡಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ವಿ.ಸಿ. ಬಸವರಾಜೇಗೌಡ ಅವರು, ಈ ಕುರಿತು ಸೋಮವಾರ ಆದೇಶ ಹೊರಡಿಸಿದ್ದಾರೆ.
ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯೊಬ್ಬರು ಜುಲೈ 27ರಂದು ಎರಡು ಜಡೆ ಹಾಕಿಕೊಂಡು ಬಂದಿಲ್ಲವೆಂದು, ಅತಿಥಿ ಶಿಕ್ಷಕಿ ಪವಿತ್ರಾ ಅವರು ಕೂದಲು ಕತ್ತರಿಸಿ ಶಿಕ್ಷೆ ನೀಡಿದ್ದರು. ಘಟನೆ ಕುರಿತು ವಿದ್ಯಾರ್ಥಿನಿ ಪೋಷರು, ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಮಾರನೆಯ ದಿನ ಶಾಲೆಗೆ ಬಂದು ಮುಖ್ಯ ಶಿಕ್ಷಕ ಹಾಗೂ ಅತಿಥಿ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ವಿಷಯ ತಿಳಿದು ಶಾಲೆಗೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮರೀಗೌಡ ಅವರು, ಘಟನೆ ಕುರಿತು ವಿಚಾರಣೆ ನಡೆಸಿ ಉಪ ನಿರ್ದೇಶಕರಿಗೆ ವರದಿ ನೀಡಿದ್ದರು. ಮುಖ್ಯ ಶಿಕ್ಷಕರು ಶಾಲೆಯಲ್ಲಿದ್ದಾಗಲೇ ಘಟನೆ ನಡೆದಿರುವ ಕಾರಣ ಅವರೇ ಇದಕ್ಕೆ ಹೊಣೆ. ಹಾಗಾಗಿ, ಇಲಾಖೆ ಆಯುಕ್ತರ ಸೂಚನೆ ಮೇರೆಗೆ ಅಮಾನತು ಮಾಡಿ ಆದೇಶ ಹೊರಡಿಸಿರುವುದಾಗಿ ಉಪ ನಿರ್ದೇಶಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.