
ಹಾರೋಹಳ್ಳಿ: ಒಡವೆ ಮಾಡಿಸಿಕೊಡುವುದಾಗಿ ನಂಬಿಸಿ ಗಟ್ಟಿಚಿನ್ನ ಪಡೆದು ವಂಚನೆ ಮಾಡಿದ್ದ ಆರೋಪಿಯನ್ನು ಕಗ್ಗಲಿಪುರ ಪೊಲೀಸರು ಪಶ್ಚಿಮ ಬಂಗಾಳದ ಕೋಲ್ಕತ್ತಾದ ಸಮೀಪ ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಕ್ತ ಶೇಖ್, ಬಂಧಿತರು. ಆರೋಪಿಗಳಿಂದ ₹15 ಲಕ್ಷ ಮೌಲ್ಯದ 100 ಗ್ರಾಂ. ಚಿನ್ನ ವಶಕ್ಕೆ ಪಡೆಯಲಾಗಿದೆ.
ಆರೋಪಿ ಮುಕ್ತ ಶೇಖ್, ಇವರ ಸಹಚರರಾದ ಹಸಿಬುಲ್ ಶೇಖ್ ಮತ್ತು ಸಂಟು ಶೇಖ್ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ವೀರಸಂದ್ರ ಗ್ರಾಮದ ತಮ್ಮ ಮನೆಗೆ ಭೇಟಿ ನೀಡಿ ಒಡೆವೆ ಮಾಡಿಸಿಕೊಡುವುದಾಗಿ 550 ಗ್ರಾಂ ಗಟ್ಟಿ ಚಿನ್ನ ಪಡೆದು 30 ಗ್ರಾಂ ಚಿನ್ನ ಕಳ್ಳತನ ಮಾಡಿದ್ದಾರೆ ಎಂದು ಸಂತೋಷ್ ಅವರು ನ.29ರಂದು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಕಗ್ಗಲಿಪುರ ಪೊಲೀಸರು ಪ್ರಕರಣದ ತನಿಖೆ ಕೈಗೊಂಡು, ಆರೋಪಿಗಳ ಪತ್ತೆಗಾಗಿ ಮಾಹಿತಿ ಸಂಗ್ರಹಿಸಿ, ಆರೋಪಿ ಮುಕ್ತ ಶೇಕ್ ಅವರನ್ನು ಡಿ.24ರಂದು ಬಂಧಿಸಿ ಇಲ್ಲಿಗೆ ಕರೆ ತಂದು ವಿಚಾರಣೆ ನಡೆಸಿದಾಗ ಆರೋಪಿಗಳು ಚಿನ್ನದ ವ್ಯಾಪಾರಿಗಳಿಂದ ಒಡವೆಗಳನ್ನು ವಿನ್ಯಾಸ ಮಾಡಿಕೊಡುವುದಾಗಿ ನಂಬಿಸಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಸಿಬುಲ್ ಶೇಖ್ ಮತ್ತು ಸಂಟು ಶೇಖ್ ತಲೆಮರೆಸಿಕೊಂಡಿದ್ದು, ಇವರಿಬ್ಬರ ಪತ್ತೆ ವಿಶೇಷ ತಂಡ ರಚಿಸಲಾಗಿದ್ದು, ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.