ADVERTISEMENT

ಗಾಲ್ಫ್‌ ಕ್ಲಬ್‌ ಬಂದ್‌: ₹ 8 ಲಕ್ಷ ಪರಿಹಾರಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 21:45 IST
Last Updated 17 ಜನವರಿ 2023, 21:45 IST

ರಾಮನಗರ: ಈಗಲ್‌ಟನ್‌ ಗಾಲ್ಫ್‌ ಕ್ಲಬ್‌ ಮುಚ್ಚಿದ್ದಕ್ಕೆ ಪ್ರತಿಯಾಗಿ ಸದಸ್ಯರಿಗೆ ಆಗಿರುವ ₹ 8 ಲಕ್ಷ ನಷ್ಟ ತುಂಬಿಕೊಡುವಂತೆ ರಾಮನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಮಂಗಳವಾರ ಆದೇಶ ನೀಡಿದೆ.

‘ಹಣವನ್ನು 45 ದಿನಗಳಲ್ಲಿ ದೂರುದಾರರಿಗೆ ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಹಣ ಪಾವತಿಸುವವರೆಗೆ ವಾರ್ಷಿಕ ಶೇ 9ರಂತೆ ಬಡ್ಡಿ ನೀಡಬೇಕು‘ ಎಂದು ಅಧ್ಯಕ್ಷ ಎಚ್‌. ಚನ್ನೇಗೌಡ ಹಾಗೂ ಸದಸ್ಯೆ ರೇಣುಕಾದೇವಿ ದೇಶಪಾಂಡೆ ಅವರಿದ್ದ ಆಯೋಗ ಆದೇಶಿಸಿದೆ.

ಹಿನ್ನೆಲೆ: ಬಿಡದಿಯಲ್ಲಿರುವ ಈಗಲ್‌ಟನ್‌ ಗಾಲ್ಫ್‌ ವಿಲೇಜ್‌ನ ವಿಲ್ಲಾವೊಂದರ ನಿವಾಸಿ ಪ್ರದೀಪ್‌ ಸುಸರ್ಲಾ ಎಂಬುವರು 2018ರ ಅಕ್ಟೋಬರ್ 2ರಂದು ₹ 11.80 ಲಕ್ಷ ಪಾವತಿಸಿ ಈಗಲ್‌ಟನ್‌ ಗಾಲ್ಫ್‌ ಕ್ಲಬ್‌ನ ಅಜೀವ ಸದಸ್ಯತ್ವ ಪಡೆದಿದ್ದರು. ಒಂದು ವರ್ಷ ಸೌಲಭ್ಯ ಬಳಸಿಕೊಂಡಿದ್ದರು. ನಂತರ ಸರ್ಕಾರದ ಆದೇಶದಂತೆ ಗಾಲ್ಫ್ ಕ್ಲಬ್‌ ಬಂದ್‌ ಆದ ಪರಿಣಾಮ ನಷ್ಟ ಭರಿಸುವಂತೆ ರೆಸಾರ್ಟ್‌ ಮಾಲೀಕರ ವಿರುದ್ಧ 2022ರ ಏಪ್ರಿಲ್‌ 19ರಂದು ಆಯೋಗಕ್ಕೆ ದೂರು ನೀಡಿದ್ದರು.

ADVERTISEMENT

ದೂರುದಾರರು ₹11.80 ಲಕ್ಷ ಸದಸ್ಯತ್ವ ಶುಲ್ಕ ಪಾವತಿಸಿದ್ದಾರೆ. ಅದರಲ್ಲಿ ₹1.80 ಲಕ್ಷ ಜಿಎಸ್‌ಟಿ ಪಾವತಿಯಾಗಿದೆ. ಮೂರು ವರ್ಷ ಗಾಲ್ಫ್‌ ಸೌಲಭ್ಯ ಬಳಸಿದ್ದಕ್ಕಾಗಿ ₹2 ಲಕ್ಷ ಕಡಿತಗೊಳಿಸಿ, ಉಳಿದ ₹8 ಲಕ್ಷವನ್ನು ದೂರುದಾರರಿಗೆ ಪಾವತಿಸಲು ಆಯೋಗ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.