ADVERTISEMENT

ಗಂಡೋರಿ ಜಲಾಶಯ ನೀರು ಪೋಲು

ಎರಡು ತಿಂಗಳಿಂದ ಎಡದಂಡೆ ಕಾಲುವೆಗೆ ನೀರು: ಕಮಲಾಪುರಕ್ಕೆ ಜಲ ಸಂಕಟ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 9:23 IST
Last Updated 17 ಫೆಬ್ರುವರಿ 2020, 9:23 IST
ಕಮಲಾಪುರ ತಾಲ್ಲೂಕಿನ ಗಂಡೋರಿ ಜಲಾಶಯದಲ್ಲಿ ಕಮಲಾಪುರಕ್ಕೆ ನೀರೊದಗಿಸುವ ಇಂಟೆಕ್‌ ವೆಲ್‌ ಬರಿದಾಗಿದೆ
ಕಮಲಾಪುರ ತಾಲ್ಲೂಕಿನ ಗಂಡೋರಿ ಜಲಾಶಯದಲ್ಲಿ ಕಮಲಾಪುರಕ್ಕೆ ನೀರೊದಗಿಸುವ ಇಂಟೆಕ್‌ ವೆಲ್‌ ಬರಿದಾಗಿದೆ   

ಕಮಲಾಪುರ: ತಾಲ್ಲೂಕಿನ ಗಂಡೋರಿ ನಾಲಾ (ಬೆಳಕೋಟಾ) ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದೆ.

ಸೋರಿಕೆಯಾಗುತ್ತಿರುವ ನೀರನ್ನು ಮೊದಲು ಗಂಡೋರಿ ನಾಲೆಗೆ ಹರಿಬಿಡುತ್ತಿದ್ದರು. ಈಗ ಕಾಲುವೆಗೆ ಬಿಡಲಾರಂಭಿಸಿದ್ದಾರೆ. ರೈತರ ಜಮೀನುಗಳಲ್ಲಿ ಬೆಳೆ ಇಲ್ಲದಿದ್ದರೂ ಕಾಲುವೆಯಲ್ಲಿ ನೀರು ಹರಿಯುತ್ತಿರುವುದು ಕಂಡು ರೈತರು ಆಶ್ಚರ್ಯಗೊಂಡಿದ್ದಾರೆ. ಆಗ ಜಲಾಶಯದಲ್ಲಿ ಸೋರಿಕೆ ಇರುವುದು ಗೊತ್ತಾಗಿದೆ.

ಜಲಾಶಯದ ಗರಿಷ್ಠ ನೀರಿನ ಮಟ್ಟ 467 ಮೀಟರ್‌ ಇದ್ದು, ಸದ್ಯ 463 ಮೀಟರ್‌ ನೀರಿದೆ. ಒಟ್ಟು 1.998 ಟಿಎಂಸಿ ಸಂಗ್ರಹ ಸಾಮರ್ಥ್ಯದ ಈ ಜಲಾಶಯದಲ್ಲಿ ಸದ್ಯ1.305 ಟಿಎಂಸಿ ಸಂಗ್ರಹವಿದೆ. ಇದರಲ್ಲಿ 1.158 ಟಿಎಂಸಿ ಬಳಸಬಹುದಾಗಿದೆ.

ADVERTISEMENT

ಕಮಲಾಪುರಕ್ಕೆ ನೀರೊದಗಿಸುವ ಬಹು ಗ್ರಾಮ ಕುಡಿಯುವ ನೀರಿನ ಇಂಟ್ಯಾಕ್‌ ವೆಲ್‌ ಈಗಾಗಲೇ ಬರಿದಾಗಿದೆ. ಕೆಲ ದಿನಗಳಲ್ಲಿ ಎಂಜಿನ್‌ ಅಳವಡಿಸಬೇಕಾಗುತ್ತದೆ. ಇತ್ತ ಪಟ್ಟಣದಲ್ಲಿ ಬಾವಿ, ಕೊಳವೆ ಬಾವಿ, ಸುತ್ತಲಿನ ಸಣ್ಣ ಕೆರೆಗಳು ಬತ್ತುವ ಸ್ಥಿತಿಯಲ್ಲಿವೆ. ಬೆಳಕೋಟಾ ಜಲಾಶಯವೇ ನೀರಿಗೆ ಅಧಾರವಾಗಿದೆ. ಇಂಥ ಸನ್ನಿವೇಶದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದನ್ನು ತಡೆಯಲು ನೀರಾವರಿ ಇಲಾಖೆ ಸಿಬ್ಬಂದಿ ಕಾರ್ಯೋನ್ಮುಖವಾಗದಿರುವ ಬಗ್ಗೆ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

‘ಸುಮಾರು ಎರಡು ತಿಂಗಳಿಂದ ಎಡದಂಡೆ ಕಾಲುವೆಗೆ ನೀರು ಹರಿಯುತ್ತಿದೆ. ಇದರಿಂದ ಪ್ರತಿ ದಿನ ಸುಮಾರು 40 ಕ್ಯುಸೆಕ್‌ ನೀರು ಪೋಲಾಗುತ್ತಿದೆ. ಇದುವರೆಗೂ 2400 ಕ್ಯುಸೆಕ್ಸ್ ನೀರು ವ್ಯರ್ಥವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ಕಮಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್‌ ಸತ್ತಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರು ಪೊಲು ಮಾಡುವುದೆಂದರೆ ಜನರ ಜೀವದ ಜೊತೆ ಚಲ್ಲಾಟವಾಡಿದಂತೆ. ಇವರು ಮಾಡಿದ ತಪ್ಪಿಗೆ ಇಡೀ ವ್ಯವಸ್ಥೆಗೆ ಕೆಟ್ಟ ಹೆಸರು ಬರುತ್ತದೆ. ದುಡ್ಡು ಕೊಟ್ಟರೆ ನೀರು ಸಿಗುವುದಿಲ್ಲ. ಇದ್ದ ನೀರು ಕಾಪಾಡುವುದು ನಮ್ಮ ಕರ್ತವ್ಯ. ನೀರಾವರಿ ಅಧಿಕಾರಿಗಳೇ ಈ ರೀತಿ ವರ್ತಸಿದರೆ ಸಾಮಾನ್ಯರಿಗೆ ಏನು ಹೇಳಬೇಕು ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.