ADVERTISEMENT

ದೇವಸ್ಥಾನ ಅಭಿವೃದ್ಧಿಗೆ ಸರ್ಕಾರ ನಿರ್ಲಕ್ಷ್ಯ

ಸರ್ಕಾರದ ಧೋರಣೆಗೆ ಕಲ್ಲಹಳ್ಳಿ ಶ್ರೀನಿವಾಸ ದೇಗುಲದ ಭಕ್ತರ ಅಸಮಾಧಾನ

ಬರಡನಹಳ್ಳಿ ಕೃಷ್ಣಮೂರ್ತಿ
Published 8 ಆಗಸ್ಟ್ 2022, 4:57 IST
Last Updated 8 ಆಗಸ್ಟ್ 2022, 4:57 IST
ಕನಕಪುರ ತಾಲ್ಲೂಕಿನ ಕಲ್ಲಹಳ್ಳಿಯ ಶ್ರೀನಿವಾಸ ದೇವಾಲಯ
ಕನಕಪುರ ತಾಲ್ಲೂಕಿನ ಕಲ್ಲಹಳ್ಳಿಯ ಶ್ರೀನಿವಾಸ ದೇವಾಲಯ   

ಕನಕಪುರ: ತಾಲ್ಲೂಕಿನ ಪ್ರಸಿದ್ಧ ಚಿಕ್ಕ ತಿರುಪತಿಯೆಂದೇ ಹೆಸರಾಗಿರುವ ಕಲ್ಲಹಳ್ಳಿ ಶ್ರೀನಿವಾಸ ದೇವಾಲಯವನ್ನು ಸರ್ಕಾರ ಅಭಿವೃದ್ಧಿಪಡಿಸುತ್ತಿಲ್ಲ. ಆದರೆ, ದೇವಾಲಯದ ಹುಂಡಿ ಹಣವನ್ನು ಮಾತ್ರ ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ಭಕ್ತರು ದೂರುತ್ತಾರೆ.

ಸುಮಾರು 800 ವರ್ಷಗಳಷ್ಟು ಹಳೆಯದಾದ ಪುರಾತನ ದೇವಾಲಯ ಇದಾಗಿದೆ. ತುಂಬಾ ಪ್ರಸಿದ್ಧ ದೇಗುಲವಾಗಿರುವುದರಿಂದ ರಾಜ್ಯದ ನಾನಾ ಭಾಗಗಳಿಂದ ಭಕ್ತರ ದಂಡೇ ಇಲ್ಲಿಗೆ ಹರಿದುಬರುತ್ತದೆ.ವಾರ್ಷಿಕವಾಗಿ ದೇವಾಲಯದ ಹುಂಡಿಯಲ್ಲಿ ₹40 ರಿಂದ ₹50 ಲಕ್ಷ ಸಂಗ್ರಹವಾಗುತ್ತದೆ.

ಇಷ್ಟು ಪ್ರಮಾಣದ ಆದಾಯವಿರುವ ಈ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದ್ದು, ‘ಎ’ ಶ್ರೇಣಿ ಹೊಂದಿದೆ. ಜಾತ್ರೆ ಸಂದರ್ಭದಲ್ಲಿ ಮಾತ್ರವೇ ದೇವಸ್ಥಾನಕ್ಕೆ ಸುಣ್ಣ-ಬಣ್ಣ ಬಳಿಯಲಾಗುತ್ತದೆ. ಇದನ್ನು ಹೊರತುಪಡಿಸಿ, ದೇವಸ್ಥಾನದ ಇತರೆ ಅಭಿವೃದ್ಧಿಗೆ ನಯಾಪೈಸೆಯನ್ನೂ ಸರ್ಕಾರ ನೀಡುತ್ತಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಸರ್ಕಾರ ಈವರೆಗೂ ಹಳೆಯದಾದ ದೇವಾಲಯವನ್ನು ಅಭಿವೃದ್ಧಿಪಡಿಸುವ ಗೋಜಿಗೆ ಹೋಗಿಲ್ಲ. ಬೆಂಗಳೂರಿನ ಸಿಂದೆ ಬ್ರದರ್ಸ್ ಕುಟುಂಬವು ದೇವಾಲಯದ ಜೀರ್ಣೋದ್ಧಾರ ಮಾಡಿದೆ. ದೇವಾಲಯದ ಸುತ್ತಲೂ ತಡೆಗೋಡೆ ನಿರ್ಮಿಸಿ, ದೇವಸ್ಥಾನದ ಹೆಬ್ಬಾಗಿಲಿಗೆ ರಾಜಗೋಪುರವನ್ನು ನಿರ್ಮಿಸಿದ್ದಾರೆ.

ದೇವಾಲಯದ ಮುಂದಿನ ಜಾಗದಲ್ಲಿ ಕಲ್ಯಾಣ ನಿರ್ಮಿಸಲು ಸಿಂದೆ ಬ್ರದರ್ಸ್ ಕುಟುಂಬ ನಿರ್ಧರಿಸಿತ್ತು. ಆದರೆ, ಸರಿಯಾದ ಸಹಕಾರ ಸಿಗದ ಕಾರಣ ಇದು ಸಾಕಾರಗೊಂಡಿಲ್ಲ. ಈ ಜಾಗದಲ್ಲಿ ವಾಸವಿದ್ದವರು ಮನೆಗಳನ್ನು ಖಾಲಿ ಮಾಡಿದ್ದಾರೆ. ಕೆಲವರು ಹಿತ್ತಲು ಜಾಗವನ್ನು ತಿಪ್ಪೆ ಮಾಡಿಕೊಂಡಿದ್ದಾರೆ.

ದೇವಾಲಯಕ್ಕೆ ಬರುವ ಭಕ್ತರಿಗಾಗಿ ನಿರ್ಮಿಸಿರುವ ಶೌಚಾಲಯಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಕೆಲವು ಸಂದರ್ಭದಲ್ಲಿ ಬಾಗಿಲು ಹಾಕಿರುತ್ತಾರೆ. ದೇವಾಲಯದ ಮುಂಭಾಗ, ಸುತ್ತಲೂ ಸರಿಯಾದ ನಿರ್ವಹಣೆ ಮಾಡುತ್ತಿಲ್ಲ. ಸ್ವಚ್ಛತೆಯಿಲ್ಲವೆಂದು ಗ್ರಾಮಸ್ಥರು ದೂರುತ್ತಾರೆ.

ನಿತ್ಯಾ ಪೂಜಾ ಸಮಿತಿಯವರು ಶ್ರಾವಣ ಶನಿವಾರದ ದಿನಗಳಲ್ಲಿ ಬೆಳಿಗ್ಗೆ ಪ್ರಸಾದ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡುತ್ತಾರೆ. ಜಾತ್ರೆ ಸಂದರ್ಭದಲ್ಲಿ ದೇವರು ಮತ್ತು ತೇರಿನ
ಶೃಂಗಾರವನ್ನು ಭಕ್ತರೇ ಮಾಡುತ್ತಾರೆ.ಆದರೆ, ದೇಗುಲದ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ರೀತಿಯ ಸಹಕಾರ ಇಲ್ಲ
ಎನ್ನುವುದು ಭಕ್ತರು ಮತ್ತು ತಾಲ್ಲೂಕಿನ ಜನತೆಯ ಆರೋಪವಾಗಿದೆ.

ಮೂರು ವರ್ಷವಾದರೂ ದುರಸ್ತಿಯಾಗದ ಕಳಶ

ದೇವಸ್ಥಾನದ ಅಭಿವೃದ್ಧಿ ಸೇರಿದಂತೆ ಎಲ್ಲಾ ಚಟುವಟಿಕೆಗಳು ಭಕ್ತರ ಸಹಕಾರದಿಂದಲೇ ನಡೆಯುತ್ತಿವೆ. ದೇವಸ್ಥಾನದ ತೇರು, ತೇರಿನ ಮನೆ, ದಾಸೋಹ ಭವನವನ್ನೂ ಭಕ್ತರೇ ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೆ, ವಿಶೇಷ ಸಂದರ್ಭ, ಹಬ್ಬ, ಜಾತ್ರೆ ವೇಳೆ ದಾಸೋಹ ಮತ್ತು ಪ್ರಸಾದ ವಿತರಣೆಯು ಭಕ್ತರ ಸಹಕಾರದಿಂದಲೇ ನಡೆಯುತ್ತಿದೆ.

ಅಂದಿನ ಕಾಲದಲ್ಲಿ ನಿರ್ಮಿಸಿದ್ದ ಗರ್ಭಗುಡಿ ಮೇಲೆ ಅಂದು ಪ್ರತಿಷ್ಠಾಪಿಸಿದ್ದ ಕಳಶಕ್ಕೆ ಹಾನಿಯಾಗಿ 3 ವರ್ಷವೇ ಆಗಿದೆ. ಆದರೆ, ಅದನ್ನು ಇನ್ನೂ ಸರಿಪಡಿಸಿಲ್ಲ. ದಾಸೋಹ ಭವನ ಅಭಿವೃದ್ಧಿಯು ಅರ್ಧಕ್ಕೆ ನಿಂತಿದೆ. ತೇರಿನ ಮನೆಯ ಬಾಗಿಲು ಮುರಿದು 3 ವರ್ಷವೇ ಆಗಿದ್ದು, ಇನ್ನೂ ದುರಸ್ತಿಗೊಳಿಸಿಲ್ಲ. ತೇರನ್ನು ಸದ್ಯಕ್ಕೆ ಅದರಲ್ಲೇ ನಿಲ್ಲಿಸಲಾಗುತ್ತಿದೆ.ತೇರಿನ ಮನೆಗೆ ಬಾಗಿಲು ಹಾಕದಿರುವುದರಿಂದ ಕಿಡಿಕೇಡಿಗಳು ತೇರಿಗೆ ಹಾನಿ ಮಾಡಬಹುದು ಎಂದು ಭಕ್ತರು ಆತಂಕವಾಗಿದೆ.

ಗರ್ಭಗುಡಿಯ ಮೇಲಿನ ಕಳಶ ಮುರಿದು, ಭಿನ್ನವಾಗಿದೆ. ಆದರೂ ಅದನ್ನು ಸರಿಪಡಿಸುತ್ತಿಲ್ಲ ಎಂದು ದೇವಸ್ಥಾನದ ಅರ್ಚಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.