ADVERTISEMENT

ಪಂಚಾಯಿತಿ ಚುನಾವಣೆಗೆ ಫೇಸ್‌ಬುಕ್‌ ಪ್ರಚಾರ

ಸಾಮಾಜಿಕ ಜಾಲತಾಣಗಳ ಮೊರೆ ಹೋದ ಅಭ್ಯರ್ಥಿಗಳು

ಆರ್.ಜಿತೇಂದ್ರ
Published 20 ಡಿಸೆಂಬರ್ 2020, 19:30 IST
Last Updated 20 ಡಿಸೆಂಬರ್ 2020, 19:30 IST
ರಾಮನಗರ ತಾಲ್ಲೂಕಿನ ಗ್ರಾ.ಪಂ.ನ ಅಭ್ಯರ್ಥಿಯೊಬ್ಬರ ಪರ ಫೇಸ್‌ಬುಕ್‌ನಲ್ಲಿ ಮತಯಾಚನೆ ಮಾಡಿರುವುದು
ರಾಮನಗರ ತಾಲ್ಲೂಕಿನ ಗ್ರಾ.ಪಂ.ನ ಅಭ್ಯರ್ಥಿಯೊಬ್ಬರ ಪರ ಫೇಸ್‌ಬುಕ್‌ನಲ್ಲಿ ಮತಯಾಚನೆ ಮಾಡಿರುವುದು   

ರಾಮನಗರ: ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದ್ದು, ಅಭ್ಯರ್ಥಿಗಳು ಮನೆಮನೆ ಪ್ರಚಾರದ ಜೊತೆಗೆ ಆನ್‌ಲೈನ್‌ ಮೊರೆ ಹೋಗಿದ್ದಾರೆ.

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮೊದಲಾದ ಜನಪ್ರಿಯ ಜಾಲತಾಣಗಳಲ್ಲಿಯೂ ಗ್ರಾಮ ಪಂಚಾಯಿತಿ ಪ್ರಚಾರವು ಸದ್ದಿಲ್ಲದೇ ನಡೆದಿದೆ. ಅದರಲ್ಲೂ ಈ ಬಾರಿ ಚುನಾವಣೆಯಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕೆ ಇಳಿದಿದ್ದು, ಆನ್‌ಲೈನ್‌ ಪ್ರಚಾರಕ್ಕೂ ಆದ್ಯತೆ ನೀಡಿದ್ದಾರೆ. ದಿನನಿತ್ಯ ತಾವು ಪ್ರಚಾರ ನಡೆಸಿದ್ದನ್ನು ಜಾಲತಾಣದಲ್ಲಿ ಅ‍ಪ್‌ಲೋಡ್‌ ಮಾಡುತ್ತಿದ್ದಾರೆ. ಇದರಿಂದಾಗಿ ಹಳ್ಳಿಗಳಲ್ಲಿ ಇರದವರಿಗೂ ಚುನಾವಣೆಯ ಅಬ್ಬರ ಕಾಣತೊಡಗಿದೆ.

ಹೊಸತಾಗಿ ಸ್ಪರ್ಧೆ ಮಾಡುತ್ತಿರುವವರು ತಾವು ಆರಿಸಿಬಂದಲ್ಲಿ ಮಾಡುವ ಕೆಲಸಗಳ ಪಟ್ಟಿಯನ್ನು ಫೇಸ್‌ಬುಕ್‌ನಲ್ಲಿ ಹರಿಬಿಟ್ಟಿದ್ದಾರೆ. ಈ ಹಿಂದೆ ಸ್ಪರ್ಧಿಸಿ ಗೆದ್ದು ಮತ್ತೆ ಸ್ಪರ್ಧೆ ಮಾಡುತ್ತಿರುವವರು ತಮ್ಮ ಆಡಳಿತಾವಧಿಯಲ್ಲಿ ಆದ ಕೆಲಸ–ಕಾರ್ಯಗಳ ಕಾಮಗಾರಿಗಳನ್ನು ಚಿತ್ರ ಸಮೇತ ಹಾಕಿ ಮತಯಾಚನೆ ಮಾಡಿದ್ದಾರೆ. ಇಂತಹ ಪೋಸ್ಟ್‌ಗಳಿಗೆ ತಮ್ಮ ಬೆಂಬಲಿಗರು ಹಾಗೂ ಮತಕ್ಷೇತ್ರದ ಮತದಾರರನ್ನು ಫೇಸ್‌ಬುಕ್ ಟ್ಯಾಗ್ ಮಾಡುತ್ತಿದ್ದು, ಅವರ ಗಮನಕ್ಕೆ ಬರುವಂತೆ ಮಾಡಿದ್ದಾರೆ.

ADVERTISEMENT

‘ಕೆಲಸದ ಕಾರಣಕ್ಕೆ ಸಾಕಷ್ಟು ಮಂದಿ ಊರಿನಿಂದ ಹೊರಗೆ ಇದ್ದಾರೆ. ಅವರೆಲ್ಲ ಚುನಾವಣೆ ದಿನವಷ್ಟೇ ಬಂದು ಮತದಾನ ಮಾಡಿ ಹೋಗುತ್ತಾರೆ. ಹೆಚ್ಚಿನವರಿಗೆ ಯಾವ ಅಭ್ಯರ್ಥಿಗಳು ಇದ್ದಾರೆಂದೇ ಗೊತ್ತಾಗುವುದಿಲ್ಲ. ಈ ಸಂದರ್ಭದಲ್ಲಿ ಪ್ರಚಾರ ಮಾಡಲು ಸಾಮಾಜಿಕ ಜಾಲತಾಣಗಳು ಹೆಚ್ಚು ಅನುಕೂಲ ಆಗಿವೆ’ ಎಂದು ಅಭ್ಯರ್ಥಿಯೊಬ್ಬರು ಹೇಳುತ್ತಾರೆ.

ಇನ್ನೂ ಹಲವು ಅಭ್ಯರ್ಥಿಗಳು ತಮ್ಮ ಕ್ಷೇತ್ರದ ಮತದಾರರ ವಾಟ್ಸ್‌ಆ್ಯಪ್‌ ಗುಂಪುಗಳನ್ನು ಮಾಡಿಕೊಂಡು ದಿನನಿತ್ಯ ತಪ್ಪದೇ ಸಂದೇಶ ಕಳುಹಿಸತೊಡಗಿದ್ದಾರೆ. ಶುಭ ಮುಂಜಾನೆ–ಶುಭ ರಾತ್ರಿ ಸಂದೇಶಗಳ ಜೊತೆಗೆ ಕರಪತ್ರಗಳನ್ನು ಕಳುಹಿಸಿ ಮತ್ತೆ ಮತ್ತೆ ಆನ್‌ಲೈನ್‌ನಲ್ಲೇ ಮತದಾರರಿಗೆ ಕೈ ಮುಗಿದು ಬೇಡತೊಡಗಿದ್ದಾರೆ.

ಗಮನ ಸೆಳೆವ ಕರಪತ್ರಗಳು

ಅಭ್ಯರ್ಥಿಗಳು ಮುದ್ರಿಸಿ ಹಂಚುತ್ತಿರುವ ಕರಪತ್ರಗಳು ಮತದಾರರ ಗಮನ ಸೆಳೆಯುವಂತೆ ಇವೆ. ಕೆಲವರು ತಮ್ಮ ಹೆಸರು, ಭಾವಚಿತ್ರ ಹಾಗೂ ಚಿಹ್ನೆ ಮುದ್ರಿಸಿ ಸುಮ್ಮನಾಗಿದ್ದಾರೆ. ಇನ್ನೂ ಕೆಲವರು ತಾವು ಆರಿಸಿಬಂದಲ್ಲಿ ಮಾಡುವ ಕೆಲಸಗಳ ಪಟ್ಟಿಯನ್ನೇ ನೀಡಿದ್ದಾರೆ. ‘‘ಹಣ, ಹೆಂಡ ಹಂಚುವುದಿಲ್ಲ. ಹಾಗೆಯೇ ನಿಮ್ಮ ಕೆಲಸ ಮಾಡಿಕೊಡಲು ಹಣ ಕೇಳುವುದಿಲ್ಲ. ಮುಂದಿನ ಐದು ವರ್ಷ ನಿಮ್ಮ ಆದೇಶದಂತೆ ನಡೆಯುತ್ತೇನೆ’ ಎಂದೆಲ್ಲ ಸಂದೇಶ ಬರೆದಿದ್ದಾರೆ. ಇನ್ನೂ ಕೆಲವು ಅಭ್ಯರ್ಥಿಗಳು ಆರಿಸಿಬಂದಲ್ಲಿ ನರೇಗಾ ಕಾಮಗಾರಿ ಕೆಲಸ, ದೇವಸ್ಥಾನ ಜೀರ್ಣೋದ್ದಾರ, ನೊಂದವರಿಗೆ ವಿವಿಧ ಸವಲತ್ತು ಕೊಡಿಸುವ ಭರವಸೆಯನ್ನೂ ನೀಡಿದ್ದಾರೆ.

ಊರು ಬಿಟ್ಟವರಿಗೆ ಕರೆ!

ಕೆಲಸ ಮೊದಲಾದ ಕಾರಣಗಳಿಗೆ ಪರ ಊರುಗಳಿಗೆ ವಲಸೆ ಹೋಗಿರುವ, ಆದರೆ ಊರಿನಲ್ಲೇ ಮತದಾನದ ಹಕ್ಕು ಹೊಂದಿರುವ ಮತದಾರರ ಪಟ್ಟಿಯನ್ನು ಪ್ರತಿ ಅಭ್ಯರ್ಥಿಯೂ ಸಿದ್ಧಪಡಿಸಿಕೊಂಡಿದ್ದಾರೆ. ಅಂತಹವರಿಗೆ ಮೊಬೈಲ್‌ ಕರೆ ಮಾಡುತ್ತಿರುವ ಅಭ್ಯರ್ಥಿಗಳು, ತಮ್ಮ ಪರಿಚಯ, ಸ್ನೇಹ–ಸಂಬಂಧ ಎಲ್ಲವನ್ನೂ ನೆನಪು ಮಾಡಿಕೊಟ್ಟು ತಪ್ಪದೇ ಬಂದು ತಮ್ಮ ಪರ ಮತದಾನ ಮಾಡುವಂತೆ ಕೋರುತ್ತಿದ್ದಾರೆ. ಕೆಲವು ಅಭ್ಯರ್ಥಿಗಳಂತೂ ಮತದಾರರು ಬಂದು ಹೋಗಲು ತಗುಲುವ ಪ್ರಯಾಣ ವೆಚ್ಚವನ್ನೂ ಭರಿಸುವುದಾಗಿ ಆಮಿಷ ಒಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.