
ಐಸಿಡಿಎಸ್ ಸುವರ್ಣ ಮಹೋತ್ಸವ ಸಮಾರಂಭ, ಗೃಹಲಕ್ಷ್ಮಿ ವಿವಿದೋದ್ದೇಶ ಸಹಕಾರ ಸಂಘ ಹಾಗೂ ಅಕ್ಕಪಡೆ ಯೋಜನೆಗಳಿಗೆ ಚಾಲನೆ ಕಾರ್ಯಕ್ರಮದ ಜಿಲ್ಲಾಮಟ್ಟದ ಪೂರ್ವಭಾವಿ ಸಭೆಯಲ್ಲಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು, ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ರಾಮನಗರ: ‘ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ಸುರಕ್ಷತೆಗಾಗಿ ಅಕ್ಕಪಡೆ ಸ್ಥಾಪಿಸಿ ಸ್ತ್ರೀಯರಿಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಇಲಾಖೆ ವತಿಯಿಂದ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ (ಐಸಿಡಿಎಸ್) ಸುವರ್ಣ ಮಹೋತ್ಸವ ಸಮಾರಂಭ, ಗೃಹಲಕ್ಷ್ಮಿ ವಿವಿದೋದ್ದೇಶ ಸಹಕಾರ ಸಂಘ ಹಾಗೂ ಅಕ್ಕಪಡೆ ಯೋಜನೆಗಳಿಗೆ ಚಾಲನೆ ಕಾರ್ಯಕ್ರಮದ ಜಿಲ್ಲಾಮಟ್ಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಸ್ತ್ರೀಯರು ಹಾಗೂ ಮಕ್ಕಳ ಹಿತದೃಷ್ಟಿಯಿಂದ ಜಿ ಪ್ರಧಾನಿ ಇಂದಿರಾ ಗಾಂಧಿ ಅವರು, 50 ವರ್ಷಗಳ ಹಿಂದೆ ಐಸಿಡಿಎಸ್ ಯೋಜನೆ ಜಾರಿಗೆ ತಂದು ಅಂಗನವಾಡಿ ಆರಂಭಿಸಿದರು. ಯೋಜನೆಯ ಸುವರ್ಣ ಮಹೋತ್ಸವವನ್ನು ಸಂಭ್ರಮಿಸುವ ಜೊತೆಗೆ, ಮುಂದಿನ 50 ವರ್ಷಕ್ಕೆ ಸ್ತ್ರೀ ಸಬಲೀಕರಣಕ್ಕೆ ಅಣಿಗೊಳಿಸುವುದಕ್ಕೆ ಹೆಜ್ಜೆ ಇಡುವ ಗಳಿಗೆ ಇದಾಗಿದೆ’ ಎಂದರು.
₹3 ಲಕ್ಷದವರೆಗೆ ಸಾಲ: ‘ಗೃಹಲಕ್ಷ್ಮಿ ಸಂಘಕ್ಕೆ ಗೃಹಲಕ್ಷ್ಮಿಯೋಜನೆ ಫಲಾನುಭವಿಗಳು ₹1 ಸಾವಿರ ಕೊಟ್ಟು ಷೇರುದಾರರರಾಗಬೇಕು. ಪ್ರತಿ ತಿಂಗಳು ಉಳಿತಾಯ ಖಾತೆಗೆ ₹200 ಜಮಾ ಮಾಡಬೇಕು. ಆರು ತಿಂಗಳ ಬಳಿಕ ಸಂಘದ ಸದಸ್ಯರಿಗೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಅಲ್ಲಿನ ಬಡ್ಡಿದರದಲ್ಲೇ ಗರಿಷ್ಠ ₹3 ಲಕ್ಷದವರೆಗೆ ಸಾಲ ನೀಡಲಾಗುತ್ತದೆ’ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿ 2.80 ಲಕ್ಷ ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಈ ಪೈಕಿ ಕನಿಷ್ಠ 2.50 ಲಕ್ಷ ಮಂದಿಯನ್ನು ಸಂಘದ ಷೇರುದಾರರನ್ನಾಗಿ ಮಾಡಬೇಕು. ಗೃಹಲಕ್ಷ್ಮಿ ಯಶಸ್ಸಿಗೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರೇ ಕಾರಣ. ಅದೇ ರೀತಿ ಗೃಹಲಕ್ಷ್ಮಿ ಸಂಘ ಕೂಡ ಮನೆ ಮನೆ ತಲುಪುವಂತಾಗಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.
ಪೊಲೀಸ್ ಮಾದರಿಯ ಪಡೆ: ‘ಗೃಹ ಇಲಾಖೆ ಸಹಯೋಗದಲ್ಲಿ ಪೊಲೀಸ್ ಮಾದರಿಯಲ್ಲಿ ಅಕ್ಕಪಡೆ ಆರಂಭಿಸಲಾಗಿದೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ 10 ಮಹಿಳೆಯರಂತೆ ರಾಜ್ಯದಾದ್ಯಂತ 300 ಮಂದಿ ಪಡೆಯಲ್ಲಿಲಿದ್ದಾರೆ. ಅವರಿಗೆ ತಲಾ ₹15 ಸಾವಿರ ಸಂಬಳ ನಿಗದಿಪಡಿಸಲಾಗಿದ್ದು, ಕರ್ತವ್ಯಕ್ಕಾಗಿ ಒಂದು ವಾಹನ ಸಹ ನೀಡಲಾಗಿದೆ’ ಎಂದು ಹೇಳಿದರು.
‘ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗುವ ಪಡೆಯು, ಯುವತಿಯರು ಮತ್ತು ಮಹಿಳೆಯರ ಸುರಕ್ಷತೆ ಬಗ್ಗೆ ನಿಗಾ ಇಡಲಿದೆ. ಚುಡಾಯಿಸುವವರಿಗೆ, ಕಿರುಕುಳ ನೀಡುವವರಿಗೆ ತಕ್ಕ ಪಾಠ ಕಲಿಸಿ, ಪೊಲೀಸರಿಗೆ ಒಪ್ಪಿಸಲಿದೆ. ಶಾಲಾ- ಕಾಲೇಜುಗಳಿಗೆ ಭೇಟಿ ನೀಡಿ, ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಿದೆ’ ಎಂದು ಪಡೆಯ ಕಾರ್ಯವೈಖರಿ ಬಗ್ಗೆ ವಿವರಿಸಿದರು.
ಅಂಧ ವಿದ್ಯಾರ್ಥಿಗೆ ಲ್ಯಾಪ್‌ಟಾಪ್ ವಿತರಿಸಿದ ಸಚಿವರು, ಗರ್ಭಿಣಿಯರಿಗೆ ಸೀಮಂತ ಮಾಡಿದರು. ನೆಲಮಂಗಲ ಶಾಸಕ ಶ್ರೀನಿವಾಸ್, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಎಸ್. ಗಂಗಾಧರ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜ್ ಗಾಣಕಲ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್ ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ, ಗ್ಯಾರಂಟಿ ಸಮಿತಿ ತಾಲ್ಲೂಕು ಅಧ್ಯಕ್ಷ ವಿ.ಎಚ್. ರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ದಿನೇಶ್ ಜೆ.ಆರ್ ಹಾಗೂ ಇತರರು ಇದ್ದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೇ ಬೇಡವೇ ಎಂಬುದರ ಕುರಿತು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಸಚಿವ ಸಂಪುಟ ವಿಸ್ತರಣೆ ವಿಷಯದಲ್ಲೂ ಹೈಕಮಾಂಡ್ ತೀರ್ಮಾನವೇ ಅಂತಿಮ.– ಲಕ್ಷ್ಮಿ ಹೆಬ್ಬಾಳಕರ, ಸಚಿವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
‘ಗೌರವಧನ ಹೆಚ್ಚಳ ಮತ್ತೊಂದು ಗ್ಯಾರಂಟಿ’
‘ಕಳೆದ ಬಾರಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಮ್ಮ ಗೌರವ ಧನವನ್ನು ₹2 ಸಾವಿರ ಹೆಚ್ಚಿಸುವಂತೆ ಒತ್ತಾಯಿಸಿದ್ದರು. ಆದರೆ ₹1 ಸಾವಿರ ಮಾತ್ರ ಹೆಚ್ಚಿಸಲಾಗಿತ್ತು. ಈ ಸಲದ ಬಜೆಟ್‌ನಲ್ಲಿ ಮತ್ತೊಂದು ಸಾವಿರ ಹೆಚ್ಚಿಸಲಾಗುವುದು. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಲಾಗುವುದು. ಇದು ನಮ್ಮ ಸರ್ಕಾರದ ಮತ್ತೊಂದು ಗ್ಯಾರಂಟಿ’ ಎಂದು ಲಕ್ಷ್ಮಿ ಹೆಬ್ಬಾಳಕರ ವಿಶ್ವಾಸ ವ್ಯಕ್ತಪಡಿಸಿದರು.
‘ಶೂನ್ಯ ಬಡ್ಡಿಯಲ್ಲಿ ಸಾಲ ಕೊಡಿ’ ‘ಗೃಹಲಕ್ಷ್ಮಿ ಸಂಘದ ಮೂಲಕ ಮಹಿಳೆಯರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಸಚಿವರಾದ ಲಕ್ಷ್ಮಿ ಹೆಬ್ಬಾಳಕರ ಅವರ ಕ್ರಮ ಕೈಗೊಳ್ಳಬೇಕು. ನಮ್ಮ ಸರ್ಕಾರ ಮಧ್ಯವರ್ತಿಗಳ ಹಾವಳಿ ಇಲ್ಲದೆ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಪಾವತಿಸುತ್ತಿದೆ. ಮಹಿಳಾ ಪರವಾದ ಹಲವು ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ದೇಶದಲ್ಲಿ ಮತ್ತು ರಾಜ್ಯದಲ್ಲಿ ಜಾರಿಗೆ ತಂದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.
‘ಡಿಕೆಶಿ ಸಿ.ಎಂ ಆಗೋದು ಖಚಿತ’
‘ಜಿಲ್ಲೆಯ ಜನರ ಆಶೀರ್ವಾದದಿಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಹ ಮುಂದೆ ಮುಖ್ಯಮಂತ್ರಿಯಾಗಲಿದ್ದಾರೆ. ಇಲ್ಲಿಂದ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿ ಪ್ರಧಾನಿ ಹುದ್ದೆಗೇರಿದ್ದಾರೆ. ರಾಮಕೃಷ್ಣ ಹೆಗಡೆ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ಸಹ ಇಲ್ಲಿಂದಲೇ ಗೆದ್ದು ಸಿ.ಎಂ ಸ್ಥಾನ ಅಲಂಕರಿಸಿದ್ದಾರೆ. ನಮ್ಮ ನಾಯಕ ಶಿವಕುಮಾರ್ ಅವರು ಸಹ ಸಿ.ಎಂ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರವಿ ಹೇಳಿದರು.
ಅವರ ಮಾತಿಗೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು ಸಹ ದನಿಗೂಡಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರಿಗೆ ಪ್ರಶಸ್ತಿ
ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ರಾಮನಗರ ತಾಲ್ಲೂಕಿನ ದ್ಯಾವಲಿಂಗಯ್ಯನಪಾಳ್ಯದ ಅಂಗನವಾಡಿ ಕಾರ್ಯಕರ್ತೆ ಪುಟ್ಟಲಕ್ಷ್ಮಮ್ಮ ಸಹಾಯಕಿ ನಾಗಮ್ಮ ಚನ್ನಪಟ್ಟಣ ತಾಲ್ಲೂಕಿನ ಭೈರಾಪಟ್ಟಣದ ಕಾರ್ಯಕರ್ತೆ ನೇತ್ರಾವತಿ ಬಿ.ವಿ ಸಹಾಯಕಿ ಶಿವಲಿಂಗಮ್ಮ ಮಾಗಡಿ ತಾಲ್ಲೂಕಿನ ಮರೂರಿನ ಕಾರ್ಯಕರ್ತೆ ಸೌಭಾಗ್ಯ ಸಹಾಯಕಿ ಚಾಮರಾಜಮ್ಮ ಕನಕಪುರ ತಾಲ್ಲೂಕಿನ ಕೆಬ್ಬೆರೆಯ ಕಾರ್ಯಕರ್ತೆ ಉಮಾಕಾಂತಿ ಎಂ.ಎಂ ಸಹಾಯಕಿ ಲಕ್ಷ್ಮಿ ಸಿ. ಹಾಗೂ ಹಾರೋಹಳ್ಳಿ ತಾಲ್ಲೂಕಿನ ಟಿ. ಮಣಿಯಾಂಬಳ್‌ನ ಕಾರ್ಯಕರ್ತೆ ಸುನಂದಮ್ಮ ಸಹಾಯಕಿ ರಾಜೇಶ್ವರಿ ಅವರಿಗೆ ಸಚಿವೆ ಲಕ್ಷ್ಮೆ ಹೆಬ್ಬಾಳಕರ ಅವರು ‘ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ–ಸಹಾಯಕಿ ಪ್ರಶಸ್ತಿ’ ಪ್ರಧಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.