
ಚನ್ನಪಟ್ಟಣ: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮತ್ತಷ್ಟು ಆರ್ಥಿಕ ಶಕ್ತಿ ತುಂಬಲು ಸರ್ಕಾರ ಗೃಹಲಕ್ಷ್ಮಿ ಸಹಕಾರ ಸಂಘಗಳನ್ನು ಸ್ಥಾಪಿಸಲಿದೆ. ಈ ಯೋಜನೆ ಅಡಿ ತಾಲ್ಲೂಕಿನಲ್ಲಿ 17 ಗೃಹಲಕ್ಷ್ಮಿ ಸಹಕಾರ ಸಂಘ ಸ್ಥಾಪಿಸಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಬೋರ್‌ವೆಲ್ ರಂಗನಾಥ್ ತಿಳಿಸಿದರು.
ನಗರದ ತಾ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಮತ್ತು ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಸರ್ಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಗೃಹಲಕ್ಷ್ಮಿ ಸಹಕಾರ ಸಂಘಗಳನ್ನು ಸ್ಥಾಪಿಸಿ ಈ ಭಾಗದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಸದಸ್ಯರನ್ನಾಗಿಸಿ ಸರ್ಕಾರದಿಂದ ಹೆಚ್ಚಿನ ಆರ್ಥಿಕ ನೆರವು, ಸಾಲ ಸೌಲಭ್ಯಗಳನ್ನು ನೀಡಿ ಮಹಿಳೆಯರು ಸ್ವಉದ್ಯೋಗ ಪ್ರಾರಂಭಿಸಲು ಅನುಕೂಲ ಮಾಡಿಕೊಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಗಿದೆ. ತಾಲ್ಲೂಕಿನಲ್ಲಿ ಶೇ 96 ರಷ್ಟು ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. 74 ಸಾವಿರಕ್ಕೂ ಹೆಚ್ಚು ಕುಟುಂಬಗಳು ಅನ್ನಭಾಗ್ಯ ಯೋಜನೆ ಪಡೆಯುತ್ತಿವೆ. 75 ಸಾವಿರಕ್ಕೂ ಹೆಚ್ಚು ಕುಟುಂಬಗಳು ಗೃಹಜ್ಯೋತಿ ಯೋಜನೆಯ ಲಾಭ ಪಡೆಯುತ್ತಿವೆ. ಜೊತೆಗೆ ಶಕ್ತಿ ಯೋಜನೆ, ಯುವಶಕ್ತಿ ಯೋಜನೆಯು ಸಪರ್ಪಕವಾಗಿ ಜಾರಿಯಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನ ಅನ್ನಭಾಗ್ಯ ಯೋಜನೆಯಲ್ಲಿ ಕೆಲ ಫಲಾನುಭವಿಗಳಿಗೆ ಯೋಜನೆಯ ಪಡಿತರ ಸಿಗುತ್ತಿಲ್ಲ. ಕೆಲವು ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ ಮಾಡಿ ಅನ್ನಭಾಗ್ಯ ಯೋಜನೆ ಕಡಿತ ಮಾಡಿರುವ ಆರೋಪ ಇದೆ. ಈ ನಿಟ್ಟಿನಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಲಾಗುವುದು. ಶಕ್ತಿ ಯೋಜನೆಯಡಿ ವಿದ್ಯಾರ್ಥಿನಿಯರಿಗೆ ಅಗತ್ಯ ಸಮಯದಲ್ಲಿ ಬಸ್ ಸೌಲಭ್ಯ ಹಾಗೂ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳ ಜೊತೆ ಸಭೆ ಮಾಡಲಾಗಿದೆ ಎಂದು ತಿಳಿಸಿದರು.
ತಾ.ಪಂ. ಇಒ ಸಂದೀಪ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಎಸ್.ಸಿ. ಶೇಖರ್, ತಾಲ್ಲೂಕು ಸಮಿತಿಯ ಸದಸ್ಯರಾದ ರಮೇಶ್ ಮೈಲನಾಯಕನ ಹೊಸಹಳ್ಳಿ, ಅಭಿಲಾಷ್ ಬೈರಾಪಟ್ಟಣ, ಪುಷ್ಪಲತಾ ಮಳೂರು, ಸುಕನ್ಯ ಎಸ್.ಎಂ. ಹಳ್ಳಿ, ಫರೀದ್ ಖಾನ್, ಶಿವು ಕೋಡಂಬಹಳ್ಳಿ, ಕೃಷ್ಣ, ರಾಘವೇಂದ್ರ ಮಂಗಳವಾರಪೇಟೆ, ಬಸವರಾಜು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.