ಕನಕಪುರ: ಶಾಸಕ ಜಿ.ಟಿ.ದೇವೇಗೌಡ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ತಾಲ್ಲೂಕು ಕಚೇರಿ ಮುಂಭಾಗ ಒತ್ತಾಯಿಸಿ ತಹಶೀಲ್ದಾರ್ ಸಂಜಯ್.ಎಂ ಅವರ ಮೂಲಕ ಸ್ವೀಕರ್‌ಗೆ ಮನವಿ ಸಲ್ಲಿಸಿದರು.
‘ವಿಧಾನಸೌಧದಲ್ಲಿ ಜನಪ್ರತಿನಿಧಿಗಳ ಮುಂದೆ ದಲಿತರನ್ನು ಅವಮಾನಿಸಿರುವ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು. ರಾಜಕೀಯವಾಗಿ ಬೆಳೆಯಲು ದಲಿತರು ಬೇಕು. ಬೆಳೆದ ಮೇಲೆ ದಲಿತರನ್ನು ಅವಮಾನಿಸುವುದು ಖಂಡನೀಯ’ ಎಂದು ದಲಿತ ಮುಖಂಡ ರಾಂಪುರ ನಾಗೇಶ್ ಕಿಡಿ ಕಾರಿದರು.
‘ದಲಿತರನ್ನು ಅವಮಾನಿಸಿರುವ ಜಿ.ಟಿ.ದೇವೇಗೌಡ ಅವರು ಸಾರ್ವಜನಿಕರವಾಗಿ ಕ್ಷಮೆಯಾಚಿಸಬೇಕು. ಅವರ ವಿರುದ್ಧ ಸ್ಪೀಕರ್ ಶಿಸ್ತುಕ್ರಮ ಜರುಗಿಸಬೇಕು. ಅದಕ್ಕಾಗಿ ರಾಜ್ಯದ ಎಲ್ಲೆಡೆ ದಲಿತ ಮುಖಂಡರು ಒತ್ತಾಯದ ಮನವಿ ಪತ್ರವನ್ನು ಸ್ಪೀಕರ್ ಅವರಿಗೆ ಸಲ್ಲಿಸುತ್ತಿದ್ದೇವೆ’ ಎಂದರು.
ಒಂದು ವೇಳೆ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ, ಸರ್ಕಾರವು ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸದಿದ್ದರೆ ಅವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ಸಂಜಯ್.ಎಂ ದಲಿತ ಮುಖಂಡರಿಂದ ಮನವಿ ಪತ್ರ ಸ್ವೀಕರಿಸಿದರು.
ದಲಿತ ಮುಖಂಡರಾದ ಸಾತನೂರು ಮಲ್ಲಿಕಾರ್ಜುನ್, ಮುತ್ತುರಾಜು, ದಿನೇಶ್, ನಟರಾಜು, ನಲ್ಲಳ್ಳಿ ಶಿವು, ಸುರೇಶ್, ಗಿರೀಶ್, ಗಣೇಶ್, ಡಿ.ಕೆ.ಭರತ್ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.