ADVERTISEMENT

ಶ್ರಮಿಕರಿಗೆ ಜನಪದವೇ ದಿವ್ಯೌಷಧ: ಎಚ್. ನಿರ್ಮಲಾ

ನಮ್‌ ಹಾಡು ನಮ್‌ ಪಾಡು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 3:27 IST
Last Updated 16 ಫೆಬ್ರುವರಿ 2021, 3:27 IST
ಚನ್ನಪಟ್ಟಣದಲ್ಲಿ ನಡೆದ ‘ಹಾಡುಹಬ್ಬ’ ನಮ್ ಹಾಡು ನಮ್ ಪಾಡು ಕಾರ್ಯಕ್ರಮವನ್ನು ಬಿಸಿಯೂಟ ತಯಾರಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಎಚ್. ನಿರ್ಮಲಾ ಉದ್ಘಾಟಿಸಿದರು
ಚನ್ನಪಟ್ಟಣದಲ್ಲಿ ನಡೆದ ‘ಹಾಡುಹಬ್ಬ’ ನಮ್ ಹಾಡು ನಮ್ ಪಾಡು ಕಾರ್ಯಕ್ರಮವನ್ನು ಬಿಸಿಯೂಟ ತಯಾರಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಎಚ್. ನಿರ್ಮಲಾ ಉದ್ಘಾಟಿಸಿದರು   

ಚನ್ನಪಟ್ಟಣ: ಗ್ರಾಮೀಣ ಭಾಗದ ಶ್ರಮಿಕ ವರ್ಗಕ್ಕೆ ಜನಪದವೇ ದಿವ್ಯೌಷಧ ಎಂದು ಬಿಸಿಯೂಟ ತಯಾರಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಎಚ್. ನಿರ್ಮಲಾ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಾಣಗಹಳ್ಳಿಯ ನವ್ಯ ಸಂಗಮ ಸಾಮಾಜಿಕ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ಜೀವೋದಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಹಾಡುಹಬ್ಬ’ ನಮ್ ಹಾಡು ನಮ್ ಪಾಡು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಬೆನ್ನೆಲುಬಾದ ಶ್ರಮಿಕರು ಶ್ರಮವಹಿಸಿ ದುಡಿಯುವಾಗ ಜನಪದ ಹಾಡುಗಳನ್ನು ಕಟ್ಟಿ ಹಾಡುತ್ತಾ ತಮ್ಮ ನೋವು ಮರೆಯುತ್ತಿದ್ದರು. ಜನಪದ ಶ್ರೇಷ್ಠ ಸಾಹಿತ್ಯವಾಗಿದೆ. ಜನಪದರ ಆಚಾರ, ನಡೆ, ನುಡಿ ಗ್ರಾಮೀಣ ಜೀವನದೊಂದಿಗೆ ಬೆರೆತು ಹೋಗಿದೆ. ಜನಪದವನ್ನು ಪಠ್ಯವಾಗಿ ರೂಪಿಸುವ ಮೂಲಕ ನಶಿಸಿ ಹೋಗುತ್ತಿರುವ ಜಾನಪದ ಕಲೆಗಳ ಪೋಷಿಸುವ ಅಗತ್ಯವಿದೆ ಎಂದರು.

ADVERTISEMENT

ಧನ್ವಂತರಿ ಜೈವಿಕ ವಿಜ್ಞಾನ ಸಂಸ್ಥೆಯ ಸಂಚಾಲಕ ಗೋವಿಂದು ಮಾತನಾಡಿ, ಅಸಂಘಟಿತ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಲಾವಿದರ ಸಂಘ, ಸಂಸ್ಥೆಗಳು ಮುಂಚೂಣಿಯಲ್ಲಿವೆ. ಸರ್ಕಾರ ನಿಜವಾದ ಕಲಾವಿದರಿಗೆ ಸಹಾಯ ನೀಡುವ ಮೂಲಕ ಕಲೆ, ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿ ಶ್ರೀಧರ್ ಮಾತನಾಡಿ, ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಸಂಘ, ಸಂಸ್ಥೆಗಳ ಪಾತ್ರ ಅಮೂಲ್ಯವಾಗಿದೆ. ಇಂದಿನ ಯುವಸಮೂಹ ಚಲನಚಿತ್ರ, ಧಾರಾವಾಹಿ, ಮೊಬೈಲ್, ಅಂತರ್ಜಾಲಗಳಿಂದ ದೂರವಿದ್ದು, ಜನಪದದ ಉಳಿವಿಗೆ ಶ್ರಮಿಸಬೇಕು ಎಂದು ಹೇಳಿದರು.

ತಾಲ್ಲೂಕಿನ ಸಿಂಗರಾಜಿಪುರ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ದೇವರಾಜು ಅಧ್ಯಕ್ಷತೆವಹಿಸಿದ್ದರು. ಟ್ರಸ್ಟ್ ಕಾರ್ಯದರ್ಶಿ ಜಯಸಿಂಹ ಪ್ರಾಸ್ತಾವಿಕ ಮಾತನಾಡಿದರು. ಜಂಗಮ ಚಿಗುರು ಕಲಾ ತಂಡದ ಮುತ್ತುರಾಜ್ ತಂಡ ಗೀತಗಾಯನ ನಡೆಸಿಕೊಟ್ಟಿತು.
ಮುಖಂಡರಾದ ರವಿ, ರೋಸ್‌ಮೇರಿ, ಮಹೇಶ್, ಸತೀಶ್, ಮಂಜುನಾಥ್, ಪುಟ್ಟಸ್ವಾಮಿ ಭಾಗವಹಿಸಿದ್ದರು. ಸೌಭಾಗ್ಯಾ ಮತ್ತು ತಂಡ, ಜಯಮ್ಮ ಮತ್ತು ತಂಡ, ಚಿಕ್ಕಮ್ಮ ಮತ್ತು ತಂಡ ಸೋಬಾನೆ ಪದ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.