ADVERTISEMENT

ಗಮನ ಸೆಳೆದ ಅಂಗವಿಕಲರ ಆಟೋಟ

ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜನೆ: ನೂರಾರು ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 14:20 IST
Last Updated 6 ಡಿಸೆಂಬರ್ 2019, 14:20 IST
ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಅಂಗವಿಕಲರ ಕ್ರೀಡಾಕೂಟದಲ್ಲಿ ಶಾಟ್‌ಪಟ್‌ ಥ್ರೋ ಮಾಡಿದ ಸ್ಪರ್ಧಿ
ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಅಂಗವಿಕಲರ ಕ್ರೀಡಾಕೂಟದಲ್ಲಿ ಶಾಟ್‌ಪಟ್‌ ಥ್ರೋ ಮಾಡಿದ ಸ್ಪರ್ಧಿ   

ರಾಮನಗರ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಅಂಗವಿಕಲರು ಉತ್ಸಾಹದ ಚಿಲುಮೆಗಳಾಗಿದ್ದರು. ತಮ್ಮ ದೈಹಿಕ ನ್ಯೂನತೆಗಳನ್ನು ಮೀರಿ ನಿಂತು ಆಟೋಟಗಳಲ್ಲಿ ಪಾಲ್ಗೊಳ್ಳುವ ಮೂಲಕ ಎಲ್ಲರ ಗಮನ ಸೆಳೆದರು.

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಅಂಗವಿಕಲರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ನಡೆಯಿತು. ಅವರಿಗೆಂದೇ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ದೈಹಿಕ ಸ್ವರೂಪ ಅಂಗವಿಕಲತೆಯ 6-ರಿಂದ 10 ವರ್ಷದ ಅಂಗವಿಕಲರಿಗೆ ಬಾಲ್ ಇನ್ ದಿ ಬಕೆಟ್, ಬ್ಯಾಂಬಿಂಗ್ ದಿ ಸಿಟಿ ಸ್ಪರ್ಧೆಗಳು, 11-ರಿಂದ 15 ವರ್ಷದವರಿಗೆ ಬಾಲ್ ಇನ್ ದಿ ಬಕೆಟ್ ಬ್ಯಾಂಬಿಂಗ್ ದಿ ಸಿಟಿ ಸ್ಪರ್ಧೆಗಳು ಹಾಗೂ 16 ವರ್ಷ ಮೇಲ್ಪಟ್ಟವರಿಗೆ ಬಾಲ್ ಇನ್ ದಿ ಬಕೆಟ್ ಹಾಗೂ ಬ್ಯಂಬಿಂಗ್ ದಿ ಸಿಟಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ADVERTISEMENT

ವಾಕ್ ಶ್ರವಣ ನ್ಯೂನ್ಯತೆ ಸ್ವರೂಪ ವಿಕಲಚೇತನತೆಯ 6ರಿಂದ -10 ವರ್ಷದ ಹಾಗೂ 11ರಿಂದ 15 ವರ್ಷದ ಅಂಗವಿಕಲರಿಗೆ ಶಾಟ್‌ಪಟ್‌ ಎಸೆತ, 50 ಮೀಟರ್ಸ್‌ ಓಟ, 16 ವರ್ಷ ಮೇಲ್ಪಟ್ಟವರಿಗೆ 5 ಕೆ.ಜಿ. ಶಾಟ್ ಪಟ್ ಎಸೆತ ಹಾಗೂ 100 ಮೀಟರ್ಸ್‌ ಓಟದ ಸ್ಪರ್ಧೆಗಳು ನಡೆದವು.

ದೃಷ್ಟಿ ದೋಷ (ಪೂರ್ಣ ಅಂಧತ್ವ) ಸ್ವರೂಪ ಅಂಗವಿಕಲತೆಯ 6ರಿಂದ -16 ವರ್ಷ ಮೇಲ್ಪಟ್ಟವರಿಗೆ ಮಡಿಕೆ ಒಡೆಯುವ ಸ್ಪರ್ಧೆ, ಅಲ್ಪ ಅಂಧತ್ವದ 6-ರಿಂದ 15 ವರ್ಷದವರಿಗೆ 50 ಮೀಟರ್ಸ್‌ ಓಟದ ಸ್ಪರ್ಧೆ ಹಾಗೂ 16 ವರ್ಷ ಮೇಲ್ಪಟ್ಟ ಅಂಗವಿಕಲರಿಗೆ 100 ಮೀಟರ್ ಓಟದ ಸ್ಪರ್ಧೆ, ಬುದ್ಧಿಮಾಂದ್ಯತೆಯ 6ರಿಂದ -15 ವರ್ಷದ ಅಂಗವಿಕಲರಿಗೆ 50 ಮೀಟರ್ಸ್‌ ಓಟ, ಟೆನ್ನಿಸ್ ಬಾಲ್ ಎಸೆತ ಹಾಗೂ 50 ಮೀಟರ್ಸ್‌ ಓಟದ ಸ್ಪರ್ಧೆಗಳು ನಡೆದವು. 16 ವರ್ಷ ಮೇಲ್ಪಟ್ಟವರಿಗೆ 100 ಮೀಟರ್ಸ್‌ ಓಟದ ಸ್ಪರ್ಧೆ, ಟೆನಿಸ್‌ ಬಾಲ್ ಎಸೆತ ಹಾಗೂ 100 ಮೀಟರ್ಸ್‌ ಓಟದ ಸ್ಪರ್ಧೆ, 16 ವರ್ಷ ಮೇಲ್ಪಟ್ಟ ಎಲ್ಲಾ ವಿಧದ ಅಂಗವಿಕಲ ಮಹಿಳೆಯರಿಗೆ ಜಾನಪದ ಗೀತೆ ಗಾಯನ ಸ್ಪರ್ಧೆ ನಡೆಯಿತು.

ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ 250 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ದೈಹಿಕ ಶಿಕ್ಷಕರ ಶಿಕ್ಷಕರ ನೆರವಿನೊಂದಿಗೆ ಒಟ್ಟು 94 ಸ್ಪರ್ಧಿಗಳು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಗೆ ಆಯ್ಕೆ ಮಾಡಲಾಯಿತು.

‘ಸರ್ಕಾರವು ಅಂಗವಿಕಲರಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಅಂಗವಿಕಲರು ಅವುಗಳನ್ನು ಪಡೆದು ಸ್ವಾವಲಂಬಿಗಳಾಗಿ ಜೀವನ ಸಾಗಿಸಬೇಕು. ನಿಮ್ಮಲ್ಲಿಯೂ ಅಗಾಧವಾದ ಪ್ರತಿಭೆಗಳಿದ್ದು ಅವುಗಳನ್ನು ಪ್ರದರ್ಶಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ತಿಳಿಸಿದರು.

ಬಿಜಿಎಸ್ ಅಂಧರ ಶಾಲೆಯ ಮುಖ್ಯಶಿಕ್ಷಕ ಶಿವರಾಮ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ವಿ. ಜ್ಯೋತಿ, ವಿವಿಧೋದ್ದೇಶ ಪುನರ್ವಸತಿ ಸಂಘಟನೆ ಕಾರ್ಯಕರ್ತ ಅಸ್ಲಂ ಪಾಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.