ADVERTISEMENT

ಹಾರೋಹಳ್ಳಿ ಪುರಸಭೆ: 5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:53 IST
Last Updated 24 ಫೆಬ್ರುವರಿ 2026, 6:53 IST
ಹಾರೋಹಳ್ಳಿ ಪುರಸಭೆ ಕಚೇರಿ
ಹಾರೋಹಳ್ಳಿ ಪುರಸಭೆ ಕಚೇರಿ   

ಹಾರೋಹಳ್ಳಿ: ಪಟ್ಟಣದ ಪುರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕಳೆದ ಐದು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಇದರಿಂದ ನೇರ ನೇಮಕಾತಿ ಅಡಿ ನೇಮಕವಾಗಿರುವ ಪೌರಕಾರ್ಮಿಕರು ಪರದಾಡುವಂತಾಗಿದೆ.

ಹಾರೋಹಳ್ಳಿ ಪುರಸಭೆ ವ್ಯಾಪ್ತಿಯ ಒಟ್ಟು 42 ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಹೊರಗುತ್ತಿಗೆಯಲ್ಲಿ 24 ಮಂದಿ, ಹಾರೋಹಳ್ಳಿ ಗ್ರಾಮ ಪಂಚಾಯಿತಿಯಿಂದ ನೇಮಕಗೊಂಡ ನಾಲ್ವರು ಹಾಗೂ ನೇರವಾಗಿ ನೇಮಕಗೊಂಡ 14 ಇತರ ಪೌರ ಕಾರ್ಮಿಕರಿದ್ದಾರೆ. ಈ ಪೈಕಿ 11 ಮಂದಿಗೆ 5 ತಿಂಗಳಿನಿಂದ ವೇತನ ಬಂದಿಲ್ಲ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ, ನೇಮಕಾತಿ ಪತ್ರ ಬರದ ಕಾರಣಕ್ಕೆ ಈ ತೊಂದರೆಯಾಗಿದೆ ಎಂಬ ಉತ್ತರ ಬರುತ್ತಿದೆ ಎಂದು ಸಂತ್ರಸ್ತರು ಹೇಳುತ್ತಾರೆ. 

ಪಟ್ಟಣ ಪ್ರದೇಶ ಸ್ವಚ್ಛವಾಗಿರುವುದರಿಂದ ಎಲ್ಲರೂ ನೆಮ್ಮದಿಯಿಂದ ಬದುಕುತ್ತಾರೆ. ಆದರೆ, ಪಟ್ಟಣದ ಶುಚಿತ್ವ ಮತ್ತು ಸುಂದರ ಪಟ್ಟಣಕ್ಕಾಗಿ ಹಗಲಿರುಳು ಶ್ರಮಿಸುವ ಪೌರ ಕಾರ್ಮಿಕರ ನರಕಯಾತನೆ ಮಾತ್ರ ಯಾರೂ ಕೇಳುವವರಿಲ್ಲವಾಗಿದೆ. ಇದರಿಂದ ಬದುಕು ನರಕಯಾತನೆಯಾಗಿದೆ ಎಂದು ಎಂದು ಸಂತ್ರಸ್ತರು ಅಲವತ್ತುಕೊಂಡರು. 

ADVERTISEMENT

5 ತಿಂಗಳಿನಿಂದ ವೇತನ ಪಾವತಿಯಾಗದ ಹೊರತಾಗಿಯೂ, ನಗರದ ಸ್ವಚ್ಛಗೊಳಿಸುವ ಕಾಯಕವನ್ನು ನಾವು ನಿಲ್ಲಿಸಿಲ್ಲ. ಸಂಬಳವಿಲ್ಲದೆಯೂ ಕಾರ್ಯ ನಿರ್ವಹಿಸುತ್ತಿದ್ದೇವೆ. ಹೀಗಾಗಿ, ಶೀಘ್ರವೇ ವೇತನ ಪಾವತಿ ಮಾಡಬೇಕು ಎಂಬುದು ಪೌರ ಕಾರ್ಮಿಕರ ಒತ್ತಾಯವಾಗಿದೆ. 

‘ನಾವು ಜೀತದಾಳುಗಳೇ’

ನಾವೆಲ್ಲರೂ ಸಂಬಳಕ್ಕಾಗಿಯೇ ಕೆಲಸ ಮಾಡುತ್ತೇವೆ. ವೇತನ ಬರುವುದು ಒಂದು ದಿನ ತಡವಾದರೂ ಚಡಪಡಿಕೆ ಶುರುವಾಗುತ್ತದೆ. ಆದರೆ ನಮಗೆ ಐದು ತಿಂಗಳಿನಿಂದ ವೇತನದ ನಯಾಪೈಸೆಯನ್ನೂ ಪಾವತಿ ಮಾಡಿಲ್ಲ. ಹಾಗಿದ್ದರೆ ನಮ್ಮನ್ನು ನೀವು ಪೌರ ಕಾರ್ಮಿಕರು ಎಂದು ಪರಿಗಣಿಸಿರುವಿರೇ ಅಥವಾ ಜೀತದಾಳುಗಳು ಎಂದು ಪರಿಗಣಿಸಿರುವಿರೇ ಎಂದು ಪೌರ ಕಾರ್ಮಿಕರು ಆಕ್ರೋಶದಿಂದ ಪ್ರಶ್ನಿಸಿದರು. 

ಐದು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಮನೆ ನಡೆಸಲು ಸಾಧ್ಯವೇ ಇಲ್ಲ ಎಂಬಂಥ ಅವಸ್ಥೆಯಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸಿ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು
–ಹೆಸರು ಹೇಳಲು ಇಚ್ಛಿಸದ ಪೌರ ಕಾರ್ಮಿಕ
11 ಮಂದಿ ಪೌರ ಕಾರ್ಮಿಕರು 5 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂಬ ವಿಚಾರ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ಸಮಸ್ಯೆ ಪರಿಹರಿಸಲು ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವೆ
–ಶೇಖರ್, ಯೋಜನಾ ನಿರ್ದೇಶಕ ರಾಮನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.