ADVERTISEMENT

ಹಾರೋಹಳ್ಳಿ: 6 ತಿಂಗಳಲ್ಲಿ 253 ನಾಯಿ ಕಡಿತ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 2:03 IST
Last Updated 26 ಜುಲೈ 2025, 2:03 IST
ಹಾರೋಹಳ್ಳಿಯಲ್ಲಿ ಗುಂಪಾಗಿರುವ ಬೀದಿ ನಾಯಿಗಳು
ಹಾರೋಹಳ್ಳಿಯಲ್ಲಿ ಗುಂಪಾಗಿರುವ ಬೀದಿ ನಾಯಿಗಳು   

ಹಾರೋಹಳ್ಳಿ: ತಾಲ್ಲೂಕಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿ ಕಡಿತ ಪ್ರಕರಣಗಳು ಹೆಚ್ಚಾಗಿವೆ. ಕಳೆದ ಆರು ತಿಂಗಳಿನಲ್ಲಿ 253 ಪ್ರಕರಣಗಳು ದಾಖಲಾಗಿವೆ.

ಮಕ್ಕಳು, ವಯೋವೃದ್ಧರು ನಾಯಿ ದಾಳಿಗೆ ಗುರಿಯಾಗಿದ್ದು, ರಸ್ತೆಯಲ್ಲಿ ಓಡಾಡಲು ಭಯಬೀಳುವಂತಾಗಿದೆ. 2025ರ ಜನವರಿಯಿಂದ ಜೂನ್ ಅಂತ್ಯದವರೆಗೆ ತಾಲ್ಲೂಕಿನಾದ್ಯಂತ 253 ಮಂದಿ ಬೀದಿ ನಾಯಿ ಕಡಿತಕ್ಕೆ ತುತ್ತಾಗಿದ್ದಾರೆ. ಇದರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚಿದೆ. ಜನವರಿಯಲ್ಲಿ 30, ಫೆ.40, ಮಾರ್ಚ್‌ 29, ಏಪ್ರಿಲ್ 36, ಮೇ 54, ಜೂನ್ 64 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ.

ಜೊತೆಗೆ ಆಡು, ಕುರಿ, ಹಸು, ಕೋಳಿಗಳ ಮೇಲೆಯೂ ನಾಯಿಗಳು ದಾಳಿ ನಡೆಸುತ್ತಿದ್ದು, ರೈತರನ್ನು ಆತಂಕಕ್ಕೆ ದೂಡಿದೆ. 

ADVERTISEMENT

ಆರೋಗ್ಯ ಇಲಾಖೆಯು ನಾಯಿ ಕಡಿತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಚಿಕಿತ್ಸೆ ನೀಡುವ ಮೂಲಕ ರೇಬಿಸ್ ತಡೆಗೆ ಕ್ರಮ ವಹಿಸಲಾಗುತ್ತಿದೆ. ಜೊತೆಗೆ ನಾಯಿ ಕಡಿತದ ಬಗ್ಗೆ ನಿರ್ಲಕ್ಷ್ಯ ಬೇಡ. ಇದರಿಂದ ರೇಬಿಸ್ ಬರುತ್ತದೆ. ಹಾಗಾಗಿ ಚಿಕಿತ್ಸೆ ಪಡೆಯಿರಿ ಎಂದು ಅರಿವು ಮೂಡಿಸುತ್ತಿದೆ. 

ಬೀದಿ ನಾಯಿಗಳ ನಿಯಂತ್ರಣಕ್ಕೆ ಸರ್ಕಾರ ಹಲವು ನೀತಿ ನಿಯಮಗಳನ್ನು ರೂಪಿಸಿದೆ. ಹಾಗಾಗಿ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಇತ್ತ ಗಮನಹರಿಸಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ ಎಂಬ ಒತ್ತಾಯ ಕೇಳಿ ಬಂದಿದೆ.  

ತಾಲ್ಲೂಕಿನಲ್ಲಿ ಲಸಿಕೆಗೆ ಯಾವುದೇ ಕೊರತೆಯಿಲ್ಲ. ಕೊರತೆ ಉಂಟಾದರೆ ಆಸ್ಪತ್ರೆ ಅನುದಾನದಲ್ಲಿ ಲಸಿಕೆ ಖರೀದಿಸಿ ಸಂಗ್ರಹಿಸಲಾಗುವುದು.
ಮಂಜುನಾಥ್ ತಾಲ್ಲೂಕು ಆರೋಗ್ಯಾಧಿಕಾರಿ
ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕೆ ಸ್ಥಳೀಯ ಆಡಳಿತ ಸಂಸ್ಥೆಯ ಗಮನಕ್ಕೆ ತರಲಾಗಿದೆ. ಜೊತೆಗೆ ಬೀದಿ ನಾಯಿ ಹಾವಳಿ ಕುರಿತು  ಜಾಗೃತಿ ಮೂಡಿಸಲಾಗುತ್ತಿದೆ.
ಮಂಜುನಾಥ್ ಹಿರಿಯ ಆರೋಗ್ಯ ನಿರೀಕ್ಷಕ ಸಮುದಾಯ ಆರೋಗ್ಯ ಕೇಂದ್ರ ಹಾರೋಹಳ್ಳಿ
‘ನನ್ನ ಮಗಳಿಗೆ ಎರಡು ತಿಂಗಳ ಹಿಂದೆ ನಾಯಿ ಕಚ್ಚಿದೆ. ತುರ್ತು ಚಿಕಿತ್ಸೆ ಕೊಡಿಸಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ’. 
ಮಹಮ್ಮದ್ ವಾರೀಶ್ ಜನತಾ ಕಾಲೊನಿ ಹಾರೋಹಳ್ಳಿ
ಹಾರೋಹಳ್ಳಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸೂಕ್ತ ಕ್ರಮ ತಗೆದುಕೊಳ್ಳಿ 
ನ್ಯಾಮತ್ ಹಾರೋಹಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.