
ಮಾಗಡಿವಪಟ್ಟಣದ ಕೋಟೆ ಮೈದಾನದಲ್ಲಿ ನಡೆದ ಸರ್ಕಾರಿ ನೌಕರರ ಕ್ರೀಡಾ ಕೂಟವನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಉದ್ಘಾಟಿಸಿದರು.
ಮಾಗಡಿ: ಶಾಸಕ ಎಚ್.ಸಿ. ಬಾಲಕೃಷ್ಣ ಭಾನುವಾರ ಮಾಗಡಿ ತಹಶೀಲ್ದಾರ್ ಶರತ್ ಕುಮಾರ್ ಅವರ ಕ್ಷಮೆ ಯಾಚಿಸಿದ ಪ್ರಸಂಗ ನಡೆಯಿತು.
‘ಕೆಲಸ ಮಾಡದಿದ್ದರೆ ಜನರು ಚಪ್ಪಲಿಯಿಂದ ಹೊಡೆಯುತ್ತಾರೆ’ ಎಂದು ಬಾಲಕೃಷ್ಣ ಈಚೆಗೆ ತಾಲ್ಲೂಕು ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಎಲ್ಲರ ಎದುರೇ ಮಾಗಡಿ ತಹಶೀಲ್ದಾರ್ ಶರತ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅವರ ಈ ನಡೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿತ್ತು.
ಪಟ್ಟಣದ ಕೋಟೆ ಮೈದಾನದಲ್ಲಿ ಭಾನುವಾರ ಸರ್ಕಾರಿ ನೌಕರರ ತಾಲ್ಲೂಕು ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು ವೇದಿಕೆಯಲ್ಲಿಯೇ ತಹಶೀಲ್ದಾರ್ ಕ್ಷಮೆ ಕೋರಿದರು. ಜೊತೆಗೆ ಅಂದು ತಾವು ಆ ರೀತಿ ವರ್ತಿಸಲು ಕಾರಣ ಏನು ಎಂದು ಕಾರಣಗಳನ್ನು ಬಿಚ್ಚಿಟ್ಟರು.
‘ಜನರ ಕೆಲಸ ಮಾಡುತ್ತಾರೆ ಎಂದು ಒಂದು ರೂಪಾಯಿ ಕೂಡ ಅಪೇಕ್ಷಿಸದೆ ಇನ್ನೂ ಯುವಕರಾಗಿರುವ ತಹಶೀಲ್ದಾರ್ ಶರತ್ ಅವರನ್ನು ತಾಲ್ಲೂಕಿಗೆ ಕರೆತಂದೆ. ಅವರು ರೈತರ ಸಮಸ್ಯೆ ಬಗೆಹರಿಸದಿದ್ದರೆ ಹೇಗೆ? ಹಳ್ಳಿಗಾಡಿನಿಂದ ಬಂದಿರುವ ನಾನು ಸಹಜವಾಗಿ ಆಡುಭಾಷೆಯಲ್ಲಿ ನೇರವಾಗಿ ಮಾತನಾಡಿದ್ದೇನೆ. ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ’ ಎಂದು ಸಭೆಯಲ್ಲಿದ್ದ ತಹಶೀಲ್ದಾರ್ ಶರತ್ ಕುಮಾರ್ ಅವರತ್ತ ಹೊರಳಿ ಹೇಳಿದರು.
‘ಜನರಿಗೆ ನ್ಯಾಯ ಕೊಡುವ ಕೆಲಸ ಮಾಡಬೇಕು. ಜನರು ಅಧಿಕಾರಿಗಳನ್ನು ಬೈಯ್ಯುವುದಿಲ್ಲ. ನನ್ನನ್ನು ಬೈಯ್ಯುತ್ತಾರೆ. ಯಾರಿಗೂ ಮನಸ್ಸಿಗೆ ನೋವಾಗುವಂತೆ ಬೈಯ್ಯುವ ಉದ್ದೇಶ ಇರಲಿಲ್ಲ. ಸಮಯ, ಸಂದರ್ಭ ಹಾಗೂ ಸನ್ನಿವೇಶ ಹಾಗೆ ಮಾಡಿಸಿದೆ’ ಎಂದು ಸಮಜಾಯಿಷಿ ನೀಡಿದರು.
ನಾನು ನೇರವಾಗಿ ಮಾತನಾಡುತ್ತೇನೆ ಶಾಲು ಸುತ್ತಿಕೊಂಡು ಮಾತನಾಡುವ ಜಾಯಮಾನ ನನ್ನದಲ್ಲ. ಸರ್ಕಾರಿ ನೌಕರರು ಉತ್ತಮವಾಗಿ ಕೆಲಸ ಮಾಡಿದರೆ ಪಾದ ಮುಟ್ಟಿ ನಮಸ್ಕರಿಸುತ್ತೇನೆ. ಸರ್ಕಾರಿ ಕೆಲಸ ದೇವರ ಕೆಲಸ ಎಂದು ಕೆಲಸ ಮಾಡುವ ಅಧಿಕಾರಿಗಳಿಗೆ ದೀರ್ಘ ದಂಡ ನಮಸ್ಕಾರ ಹಾಕುತ್ತೇನೆ–ಎಚ್.ಸಿ. ಬಾಲಕೃಷ್ಣ ಶಾಸಕ
‘ರೈತನಿಂದ ಅಧಿಕಾರಿಗಳು ಲಂಚ ಪಡೆದರೆ ಹೇಗೆ? ಕೂಲಿ ಮಾಡಿ ರೈತ ಲಂಚ ನೀಡಬೇಕು. ಐಎಎಸ್ ಅಧಿಕಾರಿ ಡಿ.ಕೆ.ರವಿ ಸತ್ತಾಗ ಇಡೀ ಜಿಲ್ಲೆಯ ಜನರು ಕಣ್ಣೀರು ಹಾಕಿದ್ದರು. ಅಂತಹ ಅಧಿಕಾರಿಗಳು ಇದ್ದರೆ ನಾವ್ಯಾಕೆ ಬೈಯ್ಯುತ್ತೇವೆ? ಈಗ ದುರ್ಬಿನ್ ಹಾಕಿ ಒಳ್ಳೆಯ ಅಧಿಕಾರಿಗಳನ್ನು ಹುಡುಕುವ ಸ್ಥಿತಿಗೆ ಬಂದಿದ್ದೇವೆ’ ಎಂದರು.
‘ನಾನು ಯಾರಿಂದಲೂ ಒಂದು ರೂಪಾಯಿ ಕೇಳುವುದಿಲ್ಲ. ನನ್ನ ಕ್ಷೇತ್ರದ ಜನತೆಗೆ ನ್ಯಾಯ ಸಿಗಬೇಕು ಎಂಬುವುದು ನನ್ನ ಉದ್ದೇಶವೇ ಹೊರತು ಅಧಿಕಾರಿಗಳನ್ನು ಬೈಯ್ಯುವ ಇರಾದೆ ಖಂಡಿತ ಇಲ್ಲ. ಈ ಎಲ್ಲ ನೋವಿನಿಂದ ತಹಶೀಲ್ದಾರ್ ಶರತ್ ಕುಮಾರ್ ಅವರಿಗೆ ಬೈದಿದ್ದೇನೆಯೇ ಹೊರತು ಬಾಕಿ ವಿಚಾರ ಮನಸ್ಸಿನಲ್ಲಿ ಇಟ್ಟುಕೊಂಡು ಮಾತನಾಡಿಲ್ಲ. ಒಳ್ಳೆ ಕೆಲಸ ಮಾಡಿದರೆ ಅವರನ್ನು ಪೂಜಿಸುತ್ತೇನೆ’ ಎಂದರು.