
ಮಾಗಡಿ: ‘ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಮಂಗಳವಾರ ಮೈಸೂರಿನಲ್ಲಿ ಭೇಟಿಯಾಗಿದ್ದಾರೆ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಇಬ್ಬರ ಬಳಿ ಬೇಡಿಕೆ ಮಂಡಿಸಿದ್ದೇನೆ’ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ.
ತಾಲ್ಲೂಕಿನ ಮತ್ತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಹೈಕಮಾಂಡ್ ನಿರ್ಧಾರ ಏನು ಎಂದು ಕಾಯ್ದು ನೋಡಬೇಕು. ನಾನು ಆಶಾವಾದಿಯಾಗಿದ್ದೇನೆ’ ಎಂದರು.
ಸಾರ್ವಜನಿಕರ ಸಮಸ್ಯೆ ಇತ್ಯರ್ಥಕ್ಕೆ ಕಸಬಾ ಮತ್ತು ಮಾಡಬಾಳ್ ಹೋಬಳಿಗೆ ಸಂಬಂಧಪಟ್ಟ ತಾಲ್ಲೂಕು ಕಚೇರಿಯಲ್ಲಿ ಜ.20ರಂದು ಕಂದಾಯ ಹಾಗೂ ಸರ್ವೆ ಆದಾಲತ್ ನಡೆಸಲಾಗುತ್ತಿದೆ. ಜನರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಒಂದು ತಿಂಗಳು ಕಾಲಾವಕಾಶ ಕೊಡುತ್ತೇವೆ. ತಿಂಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಜಿಲ್ಲಾಧಿಕಾರಿಯನ್ನು ಮಾಗಡಿಗೆ ಕರೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕುದೂರು ಹಾಗೂ ತಿಪ್ಪಸಂದ್ರ ಹೋಬಳಿ ಕೇಂದ್ರಗಳಲ್ಲಿ ದಿನ ನಿಗದಿ ಮಾಡಿ ತಹಸೀಲ್ದಾರ್, ಸಹಾಯಕ ಉಪ ಭೂ ನಿರ್ದೇಶಕರು ಹಾಗೂ ಸಿಬ್ಬಂದಿ ಜೊತೆ ನಾನು ಸ್ಥಳದಲ್ಲಿಯೇ ಇದ್ದು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗುವುದು. ತಾಲ್ಲೂಕಿನಲ್ಲಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆ ಹೆಚ್ಚಾಗಿರುವುದದರಿಂದ ಕನಿಷ್ಠ 6 ತಿಂಗಳಿಗೊಮ್ಮೆ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಗ್ರಾಮಗಳಿಗೆ ಖುದ್ದಾಗಿ ತೆರಳಿ ಮೂಲಸೌಕರ್ಯ ಕುಂದುಕೊರತೆ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದು ಪರಿಹಾರ ಸೂಚಿಸಲಾಗುವುದು ಎಂದರು.
ತಹಶೀಲ್ದಾರ್ ಶರತ್ ಕುಮಾರ್, ತಾ.ಪಂ.ಇಒ ಜೈಪಾಲ್, ದಿಶಾ ಸಮಿತಿ ಮಾಜಿ ಸದಸ್ಯ ಜೆ.ಪಿ.ಚಂದ್ರೇಗೌಡ, ಪೂಜಾರಿಪಾಳ್ಯ ಕೃಷ್ಣಮೂರ್ತಿ, ಸೀಗೆಕುಪ್ಪೆ ಶಿವಣ್ಣ, ಲೋಕೇಶ್, ಕೋರಮಂಗಲ ಶ್ರೀನಿವಾಸ್, ಕೆಂಪೇಗೌಡ, ಚಕ್ರಬಾವಿ ದೀಪಕ್, ಗಟ್ಟಿಪುರ ಶ್ರೀನಿವಾಸ್, ಮಹದೇವ್, ಕೃಷಿ ಇಲಾಖೆ ವಿಜಯಾ ಸವಣೂರು, ಅರಣ್ಯ ಇಲಾಖೆ ಅಧಿಕಾರಿ ಚೈತ್ರಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.