ADVERTISEMENT

ರೈತರ ಕೆಲಸ ಮಾಡದಿದ್ದರೆ ಮುಖಕ್ಕೆ ಹೊಡಿತಿನಿ: ಶಾಸಕ ಎಚ್.ಸಿ. ಬಾಲಕೃಷ್ಣ ತರಾಟೆ

ಜನ ಸಂಪರ್ಕ ಸಭೆ: ತಹಶೀಲ್ದಾರ್, ಎಡಿಎಲ್‌ಆರ್‌ಗೆ ಶಾಸಕ ಬಾಲಕೃಷ್ಣ ತರಾಟೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 21:50 IST
Last Updated 13 ಅಕ್ಟೋಬರ್ 2025, 21:50 IST
ಮಾಗಡಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ತಹಶೀಲ್ದಾರ್ ಶರತ್ ಕುಮಾರ್ ಮತ್ತು ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಆನಂದಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು
ಮಾಗಡಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ತಹಶೀಲ್ದಾರ್ ಶರತ್ ಕುಮಾರ್ ಮತ್ತು ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಆನಂದಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು   

ಮಾಗಡಿ: ‘ನಿಮ್ಮ ಯೋಗ್ಯತೆಗೆ ರೈತರ ಕೆಲಸವನ್ನು ಸರಿಯಾಗಿ ಮಾಡುವುದಕ್ಕೆ ಆಗುವುದಿಲ್ಲವೆ? ಹೀಗೆ ಮಾಡಿದರೆ ನಿಮ್ಮ ಮುಖಕ್ಕೆ ಹೊಡಿತಿನಿ. ನಿಮ್ಮಿಂದಾಗಿ ಜನ ನಮಗೆ ಉಗಿಯುತ್ತಿದ್ದಾರೆ. ನಿಮ್ಮ ಘನ ಕಾರ್ಯಕ್ಕೆ ಇಬ್ಬರನ್ನೂ ರಸ್ತೆಯಲ್ಲಿ ನಿಲ್ಲಿಸಿ ಹಾರ ಹಾಕಿ ಸನ್ಮಾನ ಮಾಡ್ತಿನಿ‌. ರೈತರ ವಿಷಯದಲ್ಲಿ ತಮಾಷೆ ಮಾಡುತ್ತಿದ್ದೀರಾ...?

ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಮಾಗಡಿ ತಹಶೀಲ್ದಾರ್ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ರೀತಿ ಇದು.

‘ಪೋಡಿ ದುರಸ್ತಿಗೆ ಅರ್ಜಿ ಕೊಟ್ಟು ತಿಂಗಳುಗಳಾದರೂ ಅಧಿಕಾರಿಗಳು ಕೆಲಸ ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದು ರೈತರೊಬ್ಬರು ಅಳಲು ತೋಡಿಕೊಂಡರು.

ADVERTISEMENT

ಆಗ ಬಾಲಕೃಷ್ಣ ಅವರು ಪಕ್ಕದಲ್ಲಿದ್ದ ತಹಶೀಲ್ದಾರ್ ಶರತ್‌ ಕುಮಾರ್ ಅವರನ್ನು ಅರ್ಜಿ ಕುರಿತು ವಿಚಾರಿಸಿದರು. ಅವರು ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಆನಂದಕುಮಾರ್ ಅವರತ್ತ ಬೆರಳು ತೋರಿಸಿದರು. ಆನಂದಕುಮಾರ್‌ ಮತ್ತೆ ತಹಶೀಲ್ದಾರ್‌ ಅವರತ್ತ ಮುಖ ಮಾಡಿದರು.

ಇದರಿಂದ ಕೆರಳಿದ ಬಾಲಕೃಷ್ಣ, ‘ಜನ ಸಂಪರ್ಕ ಸಭೆಯಲ್ಲಿ ಬರುವ ಅರ್ಜಿಗಳನ್ನು ಮುಂದಿನ ಸಭೆಯ ಹೊತ್ತಿಗೆ ವಿಲೇವಾರಿ ಮಾಡಬೇಕು. ನಿನ್ನ ಮೇಲೆ ಅವನು, ಅವನ ಮೇಲೆ ನೀನು ಹೇಳಿಕೊಂಡು ರೈತರ ಕೆಲಸ ಮಾಡದೆ ತಮಾಷೆ ಮಾಡುತ್ತಿದ್ದೀರಾ? ಇಬ್ಬರಿಗೆ ನಾಚಿಕೆ ಆಗುವುದಿಲ್ಲವೆ?’ ಎಂದು ಹರಿಹಾಯ್ದರು.

‘ತಾಲ್ಲೂಕು ಆಡಳಿತಾಧಿಕಾರಿಯಾದ ನೀನು ಅರ್ಜಿ ಕುರಿತು ಏನಾಗಿದೆ ಎಂದು ತಿಳಿದುಕೊಂಡು ಪರಿಹರಿಸದೆ, ಅವನ ಮೇಲೆ ಹೇಳುತ್ತಿದ್ದಿಯಾ? ನಾವು ಕೊಡುವ ಗೌರವವನ್ನು ಉಳಿಕೊಂಡು ಕೆಲಸ ಮಾಡಿ. ಈಗಲೇ ರೈತನ ದೂರು ಏನೆಂದು ಬರೆದುಕೊಂಡು ನಾಳೆಯೊಳಗೆ ಸಮಸ್ಯೆ ಬಗೆಹರಿಸಬೇಕು’ ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.