ADVERTISEMENT

ಟೊಯೊಟಾ ಅಧಿಕಾರಿಗಳ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ಕಿಡಿ

ಮಧ್ಯಸ್ಥಿಕೆ ಸಭೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 15:51 IST
Last Updated 24 ಡಿಸೆಂಬರ್ 2020, 15:51 IST
ಸುದ್ದಿಗೋಷ್ಠಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದರು   

ಬಿಡದಿ: ಟೊಯೊಟಾದ ಸ್ಥಳೀಯ ಆಡಳಿತ ವ್ಯವಸ್ಥಾಪಕರು ಜಪಾನ್‌ನಲ್ಲಿರುವ ಕಂಪನಿಯ ಮುಖ್ಯಸ್ಥರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕಾರ್ಮಿಕರ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಗುರುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಟೊಯೊಟಾ ಆಡಳಿತಾಧಿಕಾರಿಗಳಲ್ಲಿ ನಾನು ಸಾಕಷ್ಟು ಬಾರಿ ವಿನಂತಿಸಿಕೊಂಡಿದ್ದೇನೆ. ಆದರೆ ಅವರು ಈ ವಿಷಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವಂತಿದೆ. ಇತ್ತೀಚೆಗೆ ವಿಸ್ಟ್ರಾನ್ ಕಂಪನಿಯ ಮೇಲೆ ನರಸಾಪುರದಲ್ಲಿ ನಡೆದಿರುವ ಘಟನೆಗೆ ಯಾರು ಹೊಣೆ? ಅಂತಹ ಘಟನೆ ಮರುಕಳಿಸಿದರೆ ಕರ್ನಾಟಕದಲ್ಲಿ ಬಂಡವಾಳ ಹೂಡಲು ಯಾರು ಬರುತ್ತಾರೆ?‘ ಎಂದು ಪ್ರಶ್ನಿಸಿದರು.

‘ಟೊಯೊಟಾ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಬಿಕ್ಕಟ್ಟು ನಿವಾರಣೆಗೆ ನಮ್ಮೆಲ್ಲರನ್ನೂ ಒಳಗೊಂಡಂತೆ ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಮತ್ತು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ತಿಂಗಳ ಹಿಂದೆಯೇ ತಿಳಿಸಿದ್ದೆ. ಆದರೆ ಅವರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

ಗುತ್ತಿಗೆ ಪದ್ಧತಿ ದುರ್ಬಳಕೆ: ರಾಜ್ಯದಲ್ಲಿ ನೆಲ, ಜಲ, ವಿದ್ಯುತ್ ಮತ್ತು ತೆರಿಗೆ ವಿನಾಯಿತಿ ಎಲ್ಲಾ ಸೌಲಭ್ಯವನ್ನು ಪಡೆಯುವ ಬಂಡವಾಳ ಹೂಡಿಕೆದಾರರು ಹೊರ ರಾಜ್ಯದವರಿಗೆ ಕಾಯಂ ಕೆಲಸ ಕೊಡುವುದು, ಸ್ಥಳೀಯರನ್ನು ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳುವ ಕೆಟ್ಟ ಪದ್ದತಿ ರಾಜ್ಯದ ಎಲ್ಲಾ ಕಡೆ ಆರಂಭವಾಗಿದೆ. ಸ್ಥಳೀಯರಿಗೆ ಕೆಲಸ ಕೊಡುತ್ತೇವೆಂದು ಹೇಳಿ ದ್ರೋಹ ಬಗೆಯುವ ವಾತಾವರಣ ಸೃಷ್ಠಿಯಾಗಿದೆ. ಸಂಸ್ಥೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡ ಸ್ಥಳೀಯರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ಮಾಲೀಕರು ಮೋಸ ಮಾಡುತ್ತಿದ್ದಾರೆ. ಗುತ್ತಿಗೆ ಆಧಾರದ ಪದ್ದತಿಯ ದುರ್ಬಳಕೆ ಆಗುತ್ತಿದ್ದು, ಆರು ತಿಂಗಳು ದುಡಿಸಿಕೊಂಡು ಹೊರದಬ್ಬುವ ಕೆಲಸ ನಡೆಯುತ್ತಿದೆ. ಇದಕ್ಕೆಲ್ಲಾ ಕಡಿವಾಣ ಹಾಕದಿದ್ದರೇ ಕಾರ್ಮಿಕರ ಸ್ಥಿತಿ ಮುಂದಿನ ದಿನಗಳಲ್ಲಿ ಮತ್ತಷ್ಟು ಹೀನಾಯವಾಗಲಿದೆ ಎಂದು ಎಚ್ಚರಿಸಿದರು.

ಕೋವಿಡ್ ನಿಯಂತ್ರಣ: ಎಡವಟ್ಟು ಬೇಡ

‘ಕೋವಿಡ್‌ ನಿಯಂತ್ರಣ ವಿಚಾರದಲ್ಲಿ ಸರ್ಕಾರ ಮತ್ತೆ ತಪ್ಪು ಮಾಡದೇ ಆಲೋಚಿಸಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು’ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

‘ನೈಟ್ ಕರ್ಫ್ಯು ಜಾರಿಗೊಳಿಸಲು ಹೊರಟ ಸರ್ಕಾರದ ನಿರ್ಧಾರ ಬಾಲಿಶತನದ್ದಾಗಿದೆ. ಇದರ ಸಾಧಕ-ಭಾದಕಗಳು ಹಾಗೂ ಅದರ ಪರಿಣಾಮಗಳ ಬಗ್ಗೆ ಯಾವುದೇ ಚರ್ಚೆ ನಡೆಸದೇ ಏಕಾಏಕಿ ಆದೇಶ ಹೊರಡಿಸಿದ್ದು ಸರಿಯಲ್ಲ. ಇಂತಹ ತೀರ್ಮಾನಗಳಿಂದ ಸರ್ಕಾರ ತನ್ನ ಗಂಭೀರತೆ ಕಳೆದುಕೊಳ್ಳುತ್ತಿದೆ’ ಎಂದು ದೂರಿದರು. ಮೊದಲು ಹೊರ ದೇಶಗಳಿಂದ ಬಂದವರನ್ನು ವಿಮಾನ ನಿಲ್ದಾಣದಲ್ಲಿಯೇ ಕಟ್ಟುನಿಟ್ಟಾಗಿ ತಪಾಸಣೆ ಮಾಡಬೇಕು. ಅದು ಅವರನ್ನು ಸ್ವಇಚ್ಛೆಯಿಂದ ಓಡಾಡಲು ಬಿಟ್ಟಿರುವುದು ಅಪಾಯದ ಮುನ್ಸೂಚನೆಯಾಗಿದೆ. ಹೊಸ ವೈರಸ್ ನಿಯಂತ್ರಣಕ್ಕೆ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.