ADVERTISEMENT

ರಾಮನಗರದತ್ತ ಮತ್ತೆ ಎಚ್‌ಡಿಕೆ ಚಿತ್ತ

ರಾಜ್ಯ ರಾಜಕಾರಣದತ್ತ ಕುಮಾರಸ್ವಾಮಿ ಇಂಗಿತ: ಅದೃಷ್ಟದ ಕ್ಷೇತ್ರದಲ್ಲಿ ಗರಿಗೆದರಿದ ಚರ್ಚೆ

ಓದೇಶ ಸಕಲೇಶಪುರ
Published 25 ಜನವರಿ 2026, 5:46 IST
Last Updated 25 ಜನವರಿ 2026, 5:46 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ರಾಮನಗರ: ‘ರಾಜ್ಯ ರಾಜಕೀಯದಿಂದ ನಾನು ದೂರ ಸರಿದಿಲ್ಲ. ನಾನು ಎಲ್ಲಿರಬೇಕು ಎಂದು ತೀರ್ಮಾನಿಸುವುದು ರಾಜ್ಯದ ಜನ. ರಾಜ್ಯ ರಾಜಕಾರಣಕ್ಕೆ ಯಾವಾಗ ಬರಬೇಕು ಎಂದು ಜನರು ಬಯಸುತ್ತಾರೊ ಆಗ ತೀರ್ಮಾನಿಸುವೆ’ – ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಇತ್ತೀಚಿನ ಈ ಮಾತು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿರುವ ಅವರು, ತಮ್ಮ ಅದೃಷ್ಟದ ಕ್ಷೇತ್ರವಾದ ರಾಮನಗರ ಕ್ಷೇತ್ರದಿಂದ ಮತ್ತೆ ರಾಜ್ಯ ರಾಜಕಾರಣದ ಇನ್ನಿಂಗ್ ಶುರು ಮಾಡಲಿದ್ದಾರೆ ಎಂಬ ಮಾತುಗಳು ಪಕ್ಷದೊಳಗೆ ಹರಿದಾಡುತ್ತಿವೆ. ಜಿಲ್ಲೆಯಲ್ಲಿ ಪಕ್ಷದ ಶಾಸಕ ಸ್ಥಾನವು ಶೂನ್ಯಕ್ಕಿಳಿದಿರುವ ಸಂದರ್ಭದಲ್ಲಿ, ಎಚ್‌ಡಿಕೆ ಮಾತುಗಳು ಕಾರ್ಯಕರ್ತರಲ್ಲಿ ಹುರುಪು ತಂದಿವೆ.

ಎಚ್‌ಡಿಕೆ ಕೇಂದ್ರ ಸಚಿವರಾಗಿದ್ದರೂ ರಾಜ್ಯ ಸರ್ಕಾರದ ವಿರುದ್ಧ ದನಿ ಮೊಳಗಿಸುತ್ತಲೇ ಇದ್ದಾರೆ. ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುತ್ತಿದ್ದಾರೆ. ಜೆಡಿಎಸ್–ಬಿಜೆಪಿ ಮೈತ್ರಿಕೂಟವು 2028ರ ವಿಧಾನಸಭಾ ಚುನಾವಣೆಯನ್ನು ಒಟ್ಟಿಗೆ ಎದುರಿಸಿ, ರಾಜ್ಯದ ಅಧಿಕಾರದ ಗದ್ದುಗೆ ಹಿಡಿಯುವ ಕನಸನ್ನು ಎರಡೂ ಪಕ್ಷಗಳ ರಾಷ್ಟ್ರ ನಾಯಕರು ಕಾಣುತ್ತಿರುವ ಹೊತ್ತಿನಲ್ಲೇ ಎಚ್‌ಡಿಕೆ ಅವರ ಮಾತು ವಿವಿಧ ರಾಜಕೀಯ ಸಾಧ್ಯತೆಗಳ ಬಗ್ಗೆ ಚರ್ಚೆ ಹುಟ್ಟು ಹಾಕಿದೆ.

ADVERTISEMENT

ಸುರಕ್ಷಿತ ಕ್ಷೇತ್ರ: ರಾಮನಗರವು ಎಚ್‌ಡಿಕೆ ಕುಟುಂಬದ ಪಾಲಿಗೆ ಸುರಕ್ಷಿತ ಮತ್ತು ಅದೃಷ್ಟದ ಕ್ಷೇತ್ರವಾಗಿದೆ. ಎಚ್.ಡಿ. ದೇವೇಗೌಡ ಅವರು ಇಲ್ಲಿಗೆ ಬಂದಾಗಿನಿಂದಲೂ ಕ್ಷೇತ್ರ ಅವರ ಕುಟುಂಬವನ್ನು ಕೈ ಹಿಡಿದಿದೆ. ದೇವೇಗೌಡರು ಮುಖ್ಯಮಂತ್ರಿ ಹುದ್ದೆಯಿಂದ, ಪ್ರಧಾನಿ ಹುದ್ದೆಗೆ ಹೋಗಿದ್ದು ಇಲ್ಲಿಂದಲೇ. ಎಚ್‌ಡಿಕೆ ಮೊದಲಿಗೆ ಸಿ.ಎಂ ಸ್ಥಾನಕ್ಕೇರಿದ್ದು ರಾಮನಗರ ಪ್ರತಿನಿಧಿಸುತ್ತಿದ್ದಾಗಲೇ ಎಂಬುದು ಗಮನಾರ್ಹ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಯಕರು ಕೈಗೊಂಡ ತಪ್ಪು ನಿರ್ಧಾರಗಳು ಹಾಗೂ ಅತಿಯಾದ ಆತ್ಮವಿಶ್ವಾಸ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಕಾರಣವಾಗಿತ್ತು. ಇಷ್ಟಾದರೂ ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರ ಬಲಿಷ್ಠ ಪಡೆ ಇದೆ.

ಎಚ್‌ಡಿಕೆ ಮತ್ತೆ ರಾಮನಗರದಲ್ಲಿ ರಾಜಕಾರಣ ಶುರು ಮಾಡಿದರೆ ಜಿಲ್ಲೆಯಲ್ಲಿ ಪಕ್ಷಕ್ಕೆ ಹೊಸ ಚೈತನ್ಯ ಸಿಗಲಿದೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕನಿಷ್ಠ ಎರಡ್ಮೂರು ಸ್ಥಾನದಲ್ಲಿ ಪಕ್ಷ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಪಕ್ಷದ ಹಿರಿಯ ಮುಖಂಡರೊಬ್ಬರು.

ಹಳೆ ಮೈಸೂರು ಭಾಗದ ರಾಮನಗರ, ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲೆಗಳು ಜೆಡಿಎಸ್‌ಗೆ ಭದ್ರಕೋಟೆಯಾಗಿದೆ. ಬಿಜೆಪಿ ಸಖ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಎರಡೂ ಕಡೆ ಮತ್ತೆ ಪಕ್ಷದ ಧ್ವಜ ಹಾರಿಸುವ ಮೂಲಕ, ನೆಲೆಯನ್ನು ಭದ್ರಪಡಿಸಿಕೊಳ್ಳುವ ಲೆಕ್ಕಾಚಾರ ಎಚ್‌ಡಿಕೆ ಮಾತಿನ ಹಿಂದಿದೆ.

ಅದಕ್ಕಾಗಿ, ನಿಖಿಲ್ ಅವರನ್ನು ಮಂಡ್ಯದಲ್ಲಿ ನಿಲ್ಲಿಸಿ, ಇಲ್ಲಿ ಎಚ್‌ಡಿಕೆ ಅವರು ಸ್ಪರ್ಧಿಸಲಿದ್ದಾರೆ. ಈ ನಿಟ್ಟಿಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಹ ಒತ್ತಡ ಹೇರುತ್ತಿದ್ದಾರೆ. ರಾಜ್ಯ ರಾಜಕಾರಣದ ಕುರಿತು ಯುಗಾದಿ ಹಬ್ಬದ ಹೊತ್ತಿಗೆ ಎಚ್‌ಡಿಕೆ ಮತ್ತುಷ್ಟು ಸುಳಿವು ನೀಡಲಿದ್ದಾರೆ ಎನ್ನುತ್ತಾರೆ ಮತ್ತೊಬ್ಬ ಮುಖಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.