
ಬಿಡದಿಯ ತಮ್ಮ ನಿವಾಸದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎ. ಮಂಜುನಾಥ್ ಮಾತನಾಡಿದರು.
ಬಿಡದಿ (ರಾಮನಗರ): ಹೋಬಳಿಯ ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ (ಜಿಬಿಐಟಿ) ವಿರುದ್ಧ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಬೆಂಬಲಿಸಿರುವ ಕೇಂದ್ರ ಕೈಗಾರಿಕಾ ಸಚಿವ ಹಾಗೂ ಆಗಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಜ. 25ರಂದು ರೈತರ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಕುರಿತು ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಪಕ್ಷದ ಜಿಲ್ಲಾಧ್ಯಕ್ಷ ಎ. ಮಂಜುನಾಥ್, ‘ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ ಭೈರಮಂಗಲದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಕುಮಾರಸ್ವಾಮಿ ಅವರು ಪಾಲ್ಗೊಳ್ಳುವ ಮೂಲಕ, ರೈತರ ಹೋರಾಟದ ದನಿಗೆ ಮತ್ತಷ್ಟು ಶಕ್ತಿ ತುಂಬಲಿದ್ದಾರೆ’ ಎಂದರು.
‘ಧರಣಿಯಲ್ಲಿ ಯೋಜನೆ ವ್ಯಾಪ್ತಿಯ ರೈತರು, ಜೆಡಿಎಸ್ ಕಾರ್ಯಕರ್ತರು, ರೈತಪರ, ಕನ್ನಡಪರ, ದಲಿತ ಪರ ಹಾಗೂ ಪ್ರಗತಿಪರ ಸಂಘಟನೆಗಳು, ಚಿಂತಕರು ಸೇರಿದಂತೆ ರೈತಪರ ಕಾಳಜಿ ಇರುವ ಎಲ್ಲರೂ ಪಾಲ್ಗೊಂಡು ಅನ್ನದಾತರಿಗೆ ಬೆಂಬಲ ವ್ಯಕ್ತಪಡಿಸಬೇಕು’ ಎಂದು ಮನವಿ ಮಾಡಿದರು.
‘ಯೋಜನಾ ಪ್ರದೇಶದಲ್ಲಿರುವ ಒಟ್ಟು 3,409 ಕುಟುಂಬಗಳ ಪೈಕಿ ಸುಮಾರು 400 ಕುಟುಂಬಗಳು ಮಾತ್ರ ಯೋಜನೆಗೆ ಒಪ್ಪಿಗೆ ನೀಡಿವೆ. ಆದರೆ, ಯೋಜನೆಗೆ ಎಲ್ಲರೂ ಒಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಸುಳ್ಳು ಹೇಳಿ, ಭೂ ಸ್ವಾಧೀನಕ್ಕೆ ಪರಿಹಾರ ದರ ಸಹ ನಿಗದಿಪಡಿಸಿದ್ದಾರೆ. ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದರೆ ಕಾನೂನು ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದರು.
‘ಭೂ ಸ್ವಾಧೀನವಾಗಲಿರುವ ಜಮೀನಿಗೆ ಪರಿಹಾರ ನೀಡಲು ನೂರಾರು ಕೋಟಿ ಹಣ ಬೇಕು. ಸರ್ಕಾರದ ಬಳಿ ರಸ್ತೆ ಗುಂಡಿ ಮುಚ್ಚುವುದಕ್ಕೆ ಹಣವಿಲ್ಲ. ಇನ್ನು ಜಮೀನಿಗೆ ಪರಿಹಾರ ನೀಡಲು, ಟೌನ್‌ಶಿಪ್ ಮಾಡಲು ಎಲ್ಲಿಂದ ಹಣ ತರುತ್ತಾರೆ. ರೈತ ವಿರೋಧಿ ಯೋಜನೆಯನ್ನು ಸರ್ಕಾರ ರದ್ದುಗೊಳಿಸಬೇಕು. ಇಲ್ಲದಿದ್ದರೆ ಜೈಲ್ ಭರೋ ಚಳವಳಿ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಬಿಡದಿ ಪುರಸಭೆ ಅಧ್ಯಕ್ಷೆ ಭಾನುಪ್ರಿಯ, ರಾಮನಗರ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಪುರಸಭೆ ಸದಸ್ಯರಾದ ದೇವರಾಜು, ರಮೇಶ್, ರೈತ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರೆಡ್ಡಿ, ಜೆಡಿಎಸ್ ಮುಖಂಡರಾದ ಜನತಾ ನಾಗೇಶ್, ಅಂಜನಾಪುರ ವಾಸು, ಶೇಷಪ್ಪ, ಸೋಮೇಗೌಡ, ಖಲೀಲ್, ಇಟ್ಟಮಡು ಗೋಪಾಲ್, ನರಸಿಂಹಯ್ಯ, ಪಾದರಹಳ್ಳಿ ಚರಣ್, ಚಂದ್ರಶೇಖರ್ ಹಾಗೂ ಇತರರು ಇದ್ದರು.
ಕುಮಾರಸ್ವಾಮಿ ಅವರಿಗೆ ರಾಜ್ಯ ರಾಜಕಾರಣಕ್ಕೆ ಬರುವ ಆಸಕ್ತಿ ಇಲ್ಲ. ಆದರೆ ಜನ ಅವರು ರಾಜ್ಯಕ್ಕೆ ಬರಬೇಕು ಎಂದು ಬಯಸುತ್ತಿದ್ದಾರೆ. ಈ ಕುರಿತು ಅವರು ಮುಂದಿನ ದಿಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ– ಎ. ಮಂಜುನಾಥ್ ಜಿಲ್ಲಾಧ್ಯಕ್ಷ ಜೆಡಿಎಸ್ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ