ಮಾಗಡಿ: ಹಿಂದಿನ ಯೋಜನೆಯಾಗಿರುವ ಹೇಮಾವತಿ ಕಾಮಗಾರಿಗೆ ತುಮಕೂರಿನಲ್ಲಿ ಏಕೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಎಂದು ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎ.ಎಚ್.ಬಸವರಾಜು ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ವರ್ಷಗಳ ಹಿಂದೆಯೇ ತಾಲ್ಲೂಕಿನ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಸಮಯದಲ್ಲಿ ತುಮಕೂರಿನ ಕೆಲ ಜನಪ್ರತಿನಿಧಿಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದ ಹಂತದಲ್ಲೇ ಯೋಜನೆ ಅನುಮೋದನೆ ಪಡೆಯುವಾಗ ಇವರೇನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.
ಹೇಮಾವತಿ ವಿಚಾರವಾಗಿ ತುಮಕೂರಿನ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯ ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳನ್ನು ಸರ್ಕಾರ ಕೂಡಲೇ ಸಭೆ ಕರೆದು ಅವರಿಗೆ ಯೋಜನೆ ಮಾಹಿತಿ ಸರಿಯಾಗಿ ನೀಡಬೇಕು. ಸೌಹಾರ್ದಯುತವಾಗಿ ಈ ಯೋಜನೆ ಅನುಷ್ಠಾನಗೊಳಿಸಲು ಪ್ರಯತ್ನ ಪಡಬೇಕೆಂದು ಒತ್ತಾಯಿಸಿದರು.
ಹೇಮಾವತಿ ಯೋಜನೆ ಹಿರಿಯ ಹೋರಾಟಗಾರ ಟಿ.ಎ.ರಂಗಯ್ಯ, ಗ್ಯಾರಂಟಿ ಯೋಜನೆ ಅನುಷ್ಠಾನ ಅಧ್ಯಕ್ಷ ಎಚ್.ಎಂ.ರೇವಣ್ಣ ಅವರ ಕನಸಿನ ಕೂಸು. ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಒಬಿಸಿ ತಾಲ್ಲೂಕು ಘಟಕದ ಅಧ್ಯಕ್ಷ ಕುಮಾರಸ್ವಾಮಿ, ಬಿಜೆಪಿ ಹಿರಿಯ ಮುಖಂಡ ಮಾರಪ್ಪ, ಯುವ ಮುಖಂಡ ಕೆಂಚನಹಳ್ಳಿ ಕಿರಣ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.