ಕನಕಪುರ: ಅಪಘಾತ ವಲಯವಾಗಿರುವ ಬೆಂಗಳೂರು ಹೆದ್ದಾರಿ ಮತ್ತು ಬೈಪಾಸ್ ರಸ್ತೆಯ ಜಂಕ್ಷನ್‌ನಲ್ಲಿ ಕೆಳಸೇತುವೆ ನಿರ್ಮಾಣ ಮಾಡಬೇಕೆಂದು ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಯಿತು.
ಬೆಂಗಳೂರು ರಸ್ತೆಯ ತುಂಗಣಿ ಗೇಟ್ ಬಳಿ ಬೈಪಾಸ್ ರಸ್ತೆ ಮತ್ತು ಹೆದ್ದಾರಿ ರಸ್ತೆಯ ಜಂಕ್ಷನ್‌ನಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿದ್ದವು. ಅಪಘಾತ ತಡೆಯಲು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದರೂ ಏನು ಪ್ರಯೋಜನವಾಗಿಲ್ಲ. ಹಾಗಾಗಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ರೈತ ಸಂಘದ ನೇತೃತ್ವದಲ್ಲಿ ಹೋರಾಟಗಾರರು ಮಂಗಳವಾರ ಬೆಳಿಗ್ಗೆ ಬೈಪಾಸ್ ಜಂಕ್ಷನ್ ತುಂಗಣಿ ಗೇಟ್ ಬಳಿ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಲು ಭಾನುವಾರ ಸಭೆ ನಡೆಸಿದ ಹಿನ್ನೆಲೆ ಸೋಮವಾರ ಪೊಲೀಸರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಭೆ ಆಯೋಜಿಸಿದ್ದರು.
ಸಭೆಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕುಮಾರಸ್ವಾಮಿ, ಚೀಲೂರು ಮುನಿರಾಜು, ಹೊಸದುರ್ಗ ಪ್ರಶಾಂತ್ ಮಾತನಾಡಿ, ಕನಕಪುರ ಮಾರ್ಗವಾಗಿ ಅಭಿವೃದ್ಧಿಪಡಿಸಿರುವ ಹೆದ್ದಾರಿ ರಸ್ತೆಯ ಬೈಪಾಸ್ ಜಂಕ್ಷನ್‌ಗಳಲ್ಲಿ ಕೆಳಸೇತುವೆ ಮಾಡಬೇಕಿತ್ತು. ಕೆಳಸೇತುವೆ ಮಾಡದೆ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿರುವುದೇ ಅಪಘಾತಗಳಿಗೆ ಕಾರಣ ಎಂದು ಆರೋಪಿಸಿದರು.
ತುಂಗಣಿ ಗೇಟ್ ಜಂಕ್ಷನ್, ಶಿವನಹಳ್ಳಿ ಸಮೀಪದ ಜಂಕ್ಷನ್, ಗಡಸಳ್ಳಿ ರಸ್ತೆ, ತಿಗಳರಹಳ್ಳಿ ಹೆದ್ದಾರಿ ರಸ್ತೆಗೆ ಕೆಳಸೇತುವೆ ನಿರ್ಮಾಣ ಮಾಡದೆ ಇರುವುದು ಅಪಘಾತಕ್ಕೆ ಕಾರಣ. ಇದಕ್ಕೆ ಹೆದ್ದಾರಿ ಪ್ರಾಧಿಕಾರವೇ ಹೊಣೆ ಎಂದು ದೂರಿದರು.
ಕೆಳಸೇತುವೆ ಮಾಡುವವರೆಗೂ ವೈಜ್ಞಾನಿಕವಾಗಿ ಹಂಪ್‌ಗಳನ್ನು ನಿರ್ಮಿಸಿ, ಸಂಚಾರಿ ಸೂಚನಾ ಫಲಕಗಳನ್ನು ಹಾಕಬೇಕು. ಜೊತೆಗೆ ಸಿಸಿಟಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು. ಶೀಘ್ರ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್‌ಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಜೊತೆಗೆ ವೈಜ್ಞಾನಿಕವಾಗಿ ಹಂಪ್ ಹಾಕಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವುದಾಗಿ ಭರವಸೆ ನೀಡಿದರು.
ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ವಿಕಾಶ್, ಅನಂತರಾಮ್, ಸಂಘಟನೆಯ ಮುಖಂಡರು, ರೈತ ಸಂಘದವರು, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.