ADVERTISEMENT

ಚನ್ನಪಟ್ಟಣ ಬೊಂಬೆ ಉದ್ಯಮ ಉಳಿಸಲು ಪಾದಯಾತ್ರೆ

ಚೀನಾ ಆಟಿಕೆಗಳ ನಿಷೇಧಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 2:33 IST
Last Updated 25 ಸೆಪ್ಟೆಂಬರ್ 2020, 2:33 IST
ಚೀನಾ ಆಟಿಕೆಗಳ ನಿಷೇಧಕ್ಕೆ ಒತ್ತಾಯಿಸಿ ಚನ್ನಪಟ್ಟಣದಿಂದ ರಾಮನಗರದವರೆಗೆ ಕಾರ್ಮಿಕ ಸಂಘದ ಸಹಯೋಗದಲ್ಲಿ ಗುರುವಾರ ಪಾದಯಾತ್ರೆ ಆರಂಭವಾಯಿತು
ಚೀನಾ ಆಟಿಕೆಗಳ ನಿಷೇಧಕ್ಕೆ ಒತ್ತಾಯಿಸಿ ಚನ್ನಪಟ್ಟಣದಿಂದ ರಾಮನಗರದವರೆಗೆ ಕಾರ್ಮಿಕ ಸಂಘದ ಸಹಯೋಗದಲ್ಲಿ ಗುರುವಾರ ಪಾದಯಾತ್ರೆ ಆರಂಭವಾಯಿತು   

ಚನ್ನಪಟ್ಟಣ: ಇತಿಹಾಸ ಪ್ರಸಿದ್ಧ ಚನ್ನಪಟ್ಟಣದ ಗೊಂಬೆ ಉದ್ಯಮವನ್ನು ಉಳಿಸಲು ಚೀನಾ ಆಟಿಕೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿಕಸ್ತೂರಿ ಕರ್ನಾಟಕ ಜನಪರ ವೇದಿಕೆ, ಕಾರ್ಮಿಕರ ಸಂಘ ಮತ್ತು ಬೊಂಬೆ ಉದ್ಯಮಿಗಳು ನಗರದಿಂದ ರಾಮನಗರದ ಜಿಲ್ಲಾಧಿಕಾರಿ ಕಚೇರಿವರೆಗೆ ಗುರುವಾರ ಪಾದಯಾತ್ರೆ ಆರಂಭಿಸಿದರು.

ರಾಜ್ಯ ಸರ್ಕಾರ ಕೊಪ್ಪಳದಲ್ಲಿ ಸ್ಥಾಪನೆ ಮಾಡಲು ಮುಂದಾಗಿರುವ ಆಟಿಕೆಗಳ ಕ್ಲಸ್ಟರ್‌ ಅನ್ನು ಚನ್ನಪಟ್ಟಣದಲ್ಲಿ ಸ್ಥಾಪಿಸಬೇಕು. ಬೊಂಬೆ ಉದ್ಯಮ ಹಾಗೂ ಕಾರ್ಮಿಕರನ್ನು ಉಳಿಸಬೇಕು ಎಂದು ಅವರು ಒತ್ತಾಯಿಸಿದರು.

‘ದೇಶದಲ್ಲಿ ಚೀನಾ ಆ್ಯಪ್‌ಗಳನ್ನು ನಿಷೇಧಿಸಿದ ನಂತರ ಚೀನಾದ ಆಟಿಕೆಗಳು ಶ್ರೀಲಂಕಾ ಸೇರಿದಂತೆ ಇತರೆ ದೇಶಗಳ ಹೆಸರಿನಲ್ಲಿ ದೇಶಕ್ಕೆ ಕಾಲಿಡುತ್ತಿವೆ.ಜನರು ಚೀನಾ ಆಟಿಕೆ ತಿರಸ್ಕರಿಸಿ, ಚನ್ನಪಟ್ಟಣದ ಆಟಿಕೆಗಳನ್ನು ಖರೀದಿಸುವ ಶಪಥ ಮಾಡಬೇಕು. ಚೀನಾ ಆಟಿಕೆಗಳ ಮಾರಾಟಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಬೇಕು’ವೇದಿಕೆಯ ರಮೇಶ್ ಗೌಡ ಎಂದರು.

ADVERTISEMENT

ಕುಶಲಕರ್ಮಿ ವೆಂಕಟೇಶ್ ಮಾತನಾಡಿ, ‘ಸಾಂಪ್ರದಾಯಿಕ ಚನ್ನಪಟ್ಟಣದ ಬೊಂಬೆ ತಯಾರಿಸುವ ಕುಶಲಕರ್ಮಿಗಳ ಸಮಸ್ಯೆ ಬಗ್ಗೆ ಕ್ಷೇತ್ರದ ಜನಪ್ರತಿನಿಧಿಗಳು ಇದುವರೆಗೆ ವಿಧಾನಸೌಧದಲ್ಲಿ ಧ್ವನಿ ಎತ್ತಿಲ್ಲ. ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಬೊಂಬೆ ಉದ್ಯಮ ಇತ್ತೀಚಿನ ದಿನಗಳಲ್ಲಿ ಕಷ್ಟಕರ ಪರಿಸ್ಥಿತಿ ಎದುರಿಸುತ್ತಿದೆ. ಸಾಂಪ್ರದಾಯಿಕ ಕಲೆ ಉಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕು’ ಎಂದು ಒತ್ತಾಯಿಸಿದರು. ‌

ಪಾದಯಾತ್ರೆಯಲ್ಲಿ ಸಂಘಟನೆ ಪದಾಧಿಕಾರಿಗಳಾದ ಮುನಿಯಪ್ಪನದೊಡ್ಡಿ ಕುಮಾರ್, ವೆಂಕಟೇಶ್, ಬಾಬ್ ಜಾನ್, ಇಲಿಯಾಸ್, ರಮೇಶ್, ಬಾಷಾ, ಮುನಾಫ್, ಕೌಷರ್, ಯಾಕೂಬ್, ಅಕ್ರಮ್ ಖಾನ್ ಉಸ್ಮಾನಿ, ಉಮಾಶಂಕರ್, ಶೋಭಾಸಿಂಗ್, ಬೆಂಕಿ ಶ್ರೀಧರ್, ಯೋಗೀಶ್ ಗೌಡ, ರಂಜಿತ್ ಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.