ADVERTISEMENT

ನಂಜನಗೂಡು ಆದಿಶಕ್ತಿ ದೇಗುಲ ತೆರವಿಗೆ ಹಿಂದೂ ಜಾಗರಣ ವೇದಿಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 5:12 IST
Last Updated 21 ಸೆಪ್ಟೆಂಬರ್ 2021, 5:12 IST
ಆದಿಶಕ್ತಿ ದೇವಾಲಯ ತೆರವುಗೊಳಿಸಿರುವುದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳು ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು
ಆದಿಶಕ್ತಿ ದೇವಾಲಯ ತೆರವುಗೊಳಿಸಿರುವುದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳು ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು   

ಕನಕಪುರ: ಮೈಸೂರು ಜಿಲ್ಲೆಯಲ್ಲಿ ಪುರಾತನ ಕಾಲದ ಆದಿಶಕ್ತಿ ದೇವಾಲಯವನ್ನು ತೆರವುಗೊಳಿಸಿರುವುದು ಖಂಡನೀಯ. ಇದು ಬಹುಸಂಖ್ಯಾತ ಹಿಂದೂಗಳಿಗೆ ಮಾಡಿರುವ ಅಪಮಾನ. ಘಟನೆಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಧಾರ್ಮಿಕ ಪರಿಷತ್‌ ನಿರ್ದೇಶಕ ಎಚ್‌.ಜಿ. ವೆಂಕಟೇಶ್‌ ಒತ್ತಾಯಿಸಿದರು.

ಇಲ್ಲಿನ ಮಿನಿ ವಿಧಾನಸೌಧದ ತಾಲ್ಲೂಕು ಕಚೇರಿ ಮುಂಭಾಗ ಹಿಂದೂ ಜಾಗರಣಾ ವೇದಿಕೆಯಿಂದ ದೇವಾಲಯ ತೆರವುಗೊಳಿಸಿರುವುದನ್ನು ವಿರೋಧಿಸಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ರಸ್ತೆ ಅಭಿವೃದ್ಧಿ ಮತ್ತಿತರ ಅನಿವಾರ್ಯ ಸಂದರ್ಭದಲ್ಲಿ ಧಾರ್ಮಿಕ ಕಟ್ಟಡ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡುವುದು ಸಹಜ. ಆದರೆ, ತೆರವುಗೊಳಿಸುವುದಕ್ಕೂ ಮುಂಚೆ ಸ್ಥಳೀಯರು, ಧಾರ್ಮಿಕ ದೇವಾಲಯಗಳಿಗೆ ಸಂಬಂಧಿಸಿದವರ ಜತೆ ಚರ್ಚೆ ನಡೆಸಿ ನಂತರ ಅವರ ಮಾರ್ಗದರ್ಶನದಂತೆ ತೆರವುಗೊಳಿಸಬೇಕು. ಆದರೆ, ಇಲ್ಲಿ ಅಂತಹ ಯಾವುದೇ ನಿಯಮ ಪಾಲನೆ ಮಾಡಿಲ್ಲ ಎಂದು ದೂರಿದರು.

ADVERTISEMENT

ನ್ಯಾಯಾಲಯವು ಎಲ್ಲಾ ಧಾರ್ಮಿಕ ದೇವಾಲಯಗಳನ್ನು ತೆರವುಗೊಳಿಸಲು ತಿಳಿಸಿದೆ. ತೆರವುಗೊಳಿಸುವಾಗ ಕೆಲವು ನಿಯಮ ಪಾಲನೆ ಮಾಡುವಂತೆ ಸೂಚಿಸಿದೆ. ಆದರೆ, ನಂಜನಗೂಡು ತಾಲ್ಲೂಕು ಆಡಳಿತ, ಮೈಸೂರು ಜಿಲ್ಲಾಡಳಿತವು ದೇವಾಲಯ ತೆರವು ಎಂಬ ಒಂದು ಪದ ಬಿಟ್ಟು ಉಳಿದೆಲ್ಲಾ ಮಾಹಿತಿ, ಸೂಚನೆಗಳನ್ನು ಮರೆಮಾಚಿ ರಾತ್ರಿವೇಳೆ ದೇವಾಲಯವನ್ನು ಕೆಡವಿದೆ ಎಂದು ಕಿಡಿಕಾರಿದರು.

ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್‌ಬಾಬು ಮಾತನಾಡಿ, ಕೋರ್ಟ್‌ ಆದೇಶದ ನೆಪ ಮಾಡಿಕೊಂಡು ಅಧಿಕಾರಿಗಳು ದೇವಾಲಯ ತೆರವುಗೊಳಿಸಿರುವುದು ಸರಿಯಲ್ಲ. ಆಡಳಿತ ಮಂಡಳಿಯ ಪ್ರತಿನಿಧಿಗಳ ಜತೆ ಚರ್ಚಿಸಿ ನಂತರ ಅನಿವಾರ್ಯ ಸಂದರ್ಭದಲ್ಲಿ ಬೇರೆಡೆಗೆ ಸ್ಥಳಾಂತರಿಸಿ ದೇವಾಲಯವನ್ನು ತೆರವುಗೊಳಿಸಬೇಕಿತ್ತು. ಆದರೆ, ಯಾವುದೇ ನಿಯಮ ‍ಪಾಲಿಸಿಲ್ಲ ಎಂದು
ಟೀಕಿಸಿದರು.

ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಕ್ರಮವನ್ನು ವೇದಿಕೆ ಖಂಡಿಸುತ್ತದೆ. ರಾಜ್ಯ ವ್ಯಾಪ್ತಿ ಇದರ ವಿರುದ್ಧ ಹೋರಾಟ ನಡೆಸುತ್ತೇವೆ. ಕೆಡವಿರುವ ದೇವಾಲಯವನ್ನು ಮತ್ತೆ ಅದೇ ಜಾಗದಲ್ಲಿ ಮರು ನಿರ್ಮಾಣ ಮಾಡುವ ತನಕ ಹೋರಾಟ ನಡೆಯಲಿದೆ ಎಂದು
ಎಚ್ಚರಿಸಿದರು.

ಗ್ರೇಡ್‌ -2 ತಹಶೀಲ್ದಾರ್‌ ಶಿವಕುಮಾರ್‌ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ರಾಜು, ನಗರ ಘಟಕದ ಅಧ್ಯಕ್ಷ ಜಿತೇಂದ್ರಕುಮಾರ್‌, ತಾಲ್ಲೂಕು ಉಪಾಧ್ಯಕ್ಷ ಯೋಗೀಶ್‌ ರೆಡ್ಡಿ, ಖಜಾಂಚಿ ನಟೇಶ್‌, ಕಾನೂನು ಘಟಕದ ಅಧ್ಯಕ್ಷ ವಕೀಲ ಶ್ರೀನಿವಾಸ್‌, ಪದಾಧಿಕಾರಿಗಳಾದ ಶಿವರುದ್ರ, ಲೋಕನಾಥ್‌, ಚಂದ್ರಶೇಖರ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.